Site icon Vistara News

Chaitra Kundapura : ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ

Chaitra and gang

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್‌ ಆದೇಶಿಸಿದೆ.

ಸೆ. 12ರಂದು ಬಂಧಿತರಾಗಿದ್ದ ಆರೋಪಿಗಳ ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ, ಪೊಲೀಸರು ಚೈತ್ರಾ ಸೇರಿ ಬಂಧಿತ ಏಳು ಆರೋಪಿಗಳನ್ನ ಶನಿವಾರ ಮೂರನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತ ಏಳು ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದ ಚೈತ್ರಾ ಆಂಡ್ ಗ್ಯಾಂಗ್ ಈಗ ಪರಪ್ಪನ ಅಗ್ರಹಾರ ಜೈಲಿನ ಕಡೆ ಮುಖ ಮಾಡಿದ್ದಾರೆ. ಸೆಪ್ಟೆಂಬರ್‌ 26ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಳೆದ ಸೆಪ್ಟೆಂಬರ್‌ 12ರಂದು ಚೈತ್ರಾ ಕುಂದಾಪುರಳನ್ನು (Chaitra Kundapura) ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಮರುದಿನ ಮುಂಜಾನೆಯೇ ಬೆಂಗಳೂರಿಗೆ ಕರೆದುಕೊಂಡು ಬಂದು ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ ಕುಂದಾಪುರ, ಎರಡನೇ ಆರೋಪಿ ಗಗನ್‌ ಕಡೂರು, ನಾಲ್ಕನೇ ಆರೋಪಿ(ಆರೆಸ್ಸೆಸ್‌ ಪ್ರಚಾರಕನ ವೇಷಧಾರಿ) ರಮೇಶ್‌ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್‌ (ಬೆಂಗಳೂರಿನ ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್‌ ಕೊಟ್ಟವನು), ಆರನೇ ಆರೋಪಿ ಧನರಾಜ್‌ (ರಮೇಶ್‌ ಕಡೂರ್‌ ಮತ್ತು ಚನ್ನಾ ನಾಯ್ಕನನ್ನು ಸಂಪರ್ಕಿಸಿ ಕೊಟ್ಟವನು), ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್‌ ನಾಯಕ್‌ ಹಾಗೂ ಎಂಟನೇ ಆರೋಪಿ ಪ್ರಸಾದ್‌ ಬೈಂದೂರು (ಗೋವಿಂದ ಪೂಜಾರಿ ಆಪ್ತ ಮತ್ತು ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟವನು) ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದಾರೆ. ಇದೀಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಾಲಶ್ರೀಗೆ ವಿಚಾರಣೆಗೆ ಸೆ. 29ರವರೆಗೆ ಸಮಯವಿದೆ

ಈ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವಂ ಹಾಲಶ್ರೀ ಸ್ವಾಮೀಜಿ (Halashri swameeji) ತಲೆಮರೆಸಿಕೊಂಡಿದ್ದರು. ಅವರನ್ನು ಸೆಪ್ಟೆಂಬರ್‌ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ 10 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ ಪರಿಣಾಮ ಸೆ. 29ರವರೆಗೆ ವಿಚಾರಣೆಗೆ ಅವಕಾಶವಿದೆ.

ವಿಚಾರಣೆಯ ವೇಳೆ ಏನೇನಾಗಿದೆ?

ಆರೋಪಿಗಳು ಕಳೆದ 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರಾದರೂ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ ಅನಾರೋಗ್ಯದ ನಾಟಕವಾಡಿ ಮೂರುವರೆ ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಲಗಿದ್ದಳು. ಉಳಿದ ಎಲ್ಲರೂ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದರು.

ಕಸ್ಟಡಿಯಲ್ಲಿದ್ದ ವೇಳೆ ಚೈತ್ರಾ ಎಂಡ್‌ ಗ್ಯಾಂಗ್‌ ತಾವು ಮಾಡಿರುವ ಮೋಸ ಮತ್ತು ವಂಚನೆಯನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಸಿಸಿಬಿ ಅಧಿಕಾರಿಗಳು ಈ ಆರೋಪಿಗಳು ಹಣವನ್ನು ಎಲ್ಲೆಲ್ಲಿ ಇಟ್ಟಿದ್ದರು ಎಂಬ ಮಾಹಿತಿಯನ್ನು ಪಡೆದುಕೊಂಡು ಅಲ್ಲೆಲ್ಲ ಭೇಟಿ ನೀಡಿ ಸುಮಾರು 3.67 ಕೋಟಿ ರೂ. ಮೌಲ್ಯದ ನಗ ಮತ್ತು ನಗದನ್ನು ವಶಕ್ಕೆ ಪಡೆದಿದೆ.

ವಂಚನೆಯಲ್ಲಿ‌ ಅತಿ ಹೆಚ್ಚು ಹಣ ಪಡೆದಿರುವುದು ಚೈತ್ರಾ ಕುಂದಾಪುರ ಎನ್ನುವುದು ಬೆಳಕಿಗೆ ಬಂದಿದೆ. 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ, 1.8 ಕೋಟಿ ಮೊತ್ತದ ನಿಶ್ಚಿತ ಠೇವಣಿ ಹೊಂದಿದ್ದ ಚೈತ್ರಾ 12 ಲಕ್ಷ ಮೌಲ್ಯದ ಕಿಯಾ ಕಾರು ಖರೀದಿಸಿದ್ದಾಳೆ.

ಸಿಸಿಬಿ ಪೊಲೀಸರು ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿರುವ ಗಗನ್‌ ಕಡೂರ್‌ನನ್ನು ಚಿಕ್ಕಮಗಳೂರು, ಕಡೂರು ಮತ್ತು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನಕಲಿ ಆರೆಸ್ಸೆಸ್‌ ಪ್ರಚಾರಕನ ಭೇಟಿ, ಕಡೂರಿನ ಮನೆ, ಶಿವಮೊಗ್ಗದಲ್ಲಿ ಹಣ ಹಸ್ತಾಂತರ ಮಾಡಿದ ಜಾಗಗಳಲ್ಲೆಲ್ಲ ಮಹಜರು ಮಾಡಿಸಿದ್ದಾರೆ.

Exit mobile version