ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (BJP ticket fraud) ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಈಗಾಗಲೇ 3.8 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದನ್ನು ರಿಕವರಿ ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 12ರಂದು ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಚೈತ್ರಾ ಕುಂದಾಪುರ ಗ್ಯಾಂಗನ್ನು ಹೆಡೆಮುರಿಗೆ ಕಟ್ಟಿದ ಪೊಲೀಸರು ಅವರ ಆರ್ಥಿಕ ವ್ಯವಹಾರಗಳ ಎಲ್ಲ ವಿವರಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಅವರು ಬ್ಯಾಂಕ್ ಅಕೌಂಟ್ಗಳನ್ನು ಜಾಲಾಡಲಾಗುತ್ತಿದ್ದು, ವ್ಯವಹಾರಗಳ ಮೇಲೆ ಕಣ್ಣಿಡಲಾಗಿದೆ. ಆರೋಪಿಗಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಅಕೌಂಟ್ ಮೇಲೂ ಕಣ್ಣಿಡಲಾಗಿದೆ. ಹೀಗಾಗಿ ಹೆಚ್ಚಿನ ಆರ್ಥಿಕ ವ್ಯವಹಾರಗಳ ಬಣ್ಣ ಬಯಲಾಗಿದ್ದು, ಅದರ ಪರಿಣಾಮವಾಗಿ ಈಗಾಗಲೇ 3 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಠೇವಣಿ ಪತ್ರಗಳು ಸಿಕ್ಕಿವೆ.
ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಈಗಾಗಲೇ ಚೈತ್ರಾ ಕುಂದಾಪುರ, ಗಗನ್ ಕಡೂರು, ಧನರಾಜ್, ರಮೇಶ್, ಪ್ರಜ್ವಲ್ ಮತ್ತು ಬಿ.ಎಲ್. ಚನ್ನನಾಯಕ್ ಎಂಬವರನ್ನು ಬಂಧಿಸಲಾಗಿದೆ. ಚೈತ್ರಾ ಕುಂದಾಪುರಳ ಆಪ್ತ ಶ್ರೀಕಾಂತ್ ನಾಯಕ್, ಚೈತ್ರಾ ಕುಂದಾಪುರಳನ್ನು ಗೋವಿಂದ ಪೂಜಾರಿ ಸಂಪರ್ಕ ಮಾಡಿದ ಗೋವಿಂದ ಪೂಜಾರಿ ಆಪ್ತ ಪ್ರಸಾದ್ ಬೈಂದೂರು ಮತ್ತು ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಇನ್ನಷ್ಟೆ ಬಂಧಿಸಬೇಕಾಗಿದೆ. ಪ್ರಸಾದ್ ಬೈಂದೂರು ಈ ಪ್ರಕರಣದಲ್ಲಿ ಅಪ್ರೂವರ್ ಆಗುವ ಸಾಧ್ಯತೆಗಳು ಕಂಡುಬಂದಿವೆ.
ಅಂದ ಹಾಗೆ ಈಗ ರಿಕವರಿ ಆಗಿದ್ದೆಷ್ಟು? ಎಲ್ಲಿಂದ ರಿಕವರಿ ಆಗಿದೆ ಎಂಬ ಮಾಹಿತಿ ಇಲ್ಲಿದೆ.
1. ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್ ನಲ್ಲಿ ಇಟ್ಟಿದ್ದ 1.8 ಕೋಟಿ ರೂ. ಮೌಲ್ಯದ ಠೇವಣಿ ಪತ್ರ ಜಪ್ತಿ: ಗಂಗೊಳ್ಳಿಯಲ್ಲಿರುವ ಬ್ಯಾಂಕ್ಗೆ ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2. ಚೈತ್ರಾ ಮನೆಯಲ್ಲಿದ್ದ ಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
3. ಚೈತ್ರಾಕುಂದಾಪುರ ತನ್ನ ಬಾವ ಮ್ಯಾನೇಜರ್ ಆಗಿದ್ದ ಬ್ಯಾಂಕ್ ನಲ್ಲಿ ಇಟ್ಟಿದ್ದ 40 ಲಕ್ಷ ರೂ. ಜಪ್ತಿ.
4. ಚೈತ್ರಾ ಕುಂದಾಪುರ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಮನೆಯಲ್ಲಿ 45 ಲಕ್ಷ ರೂ. ಜಪ್ತಿ.
5. ಹಾಲಶ್ರೀ ಸ್ವಾಮೀಜಿ ಈಗಾಗಲೇ 50 ಲಕ್ಷ ರೂಪಾಯಿಯನ್ನು ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದಾರೆ.
ಇದರಲ್ಲಿ ಎಲ್ಲವೂ ವಂಚನೆಯಲ್ಲಿ ಕೈಸೇರಿದ ಹಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಈ ಆರೋಪಿಗಳ ಹೆಸರಲ್ಲಿ ಮತ್ತು ಮನೆಯಲ್ಲಿ ಪತ್ತೆಯಾಗಿರುವುದರಿಂದ ಇದಕ್ಕೆ ತಳುಕು ಹಾಕಲಾಗುತ್ತದೆ.
ಹಾಲಶ್ರೀ ಸ್ವಾಮೀಜಿ ಹೂಡಿಕೆ ಮಾಡಿದ್ದರು
ಹಾಲಶ್ರೀ ಸ್ವಾಮೀಜಿ ಅವರು ತಾವು ಪಡೆದ 1.5 ಕೋಟಿ ರೂ. ಹಣವನ್ನು ಭೂಮಿ ಖರೀರಿ, ಪೆಟ್ರೋಲ್ ಪಂಪ್ ಸ್ಥಾಪನೆ, ಕಾರು ಖರೀದಿಗೆ ಬಳಸಿ ಖಾಲಿ ಮಾಡಿದ್ದರು. ಕೊನೆಗೆ ಪ್ರಕರಣ ದಾಖಲಾಗುತ್ತದೆ ಎಂದಾದಾಗ ಯಾರ ಕೈಯಿಂದಲೋ ಐವತ್ತು ಲಕ್ಷ ರೂ. ಪಡೆದು ಗೋವಿಂದ ಪೂಜಾರಿಗೆ ನೀಡಿದ್ದರು.
ಶ್ರೀಕಾಂತ್ ನಾಯಕ್ ಮನೆಗೆ ಚೈತ್ರಾ ಹಣ, ಕಾರು ಖರೀದಿ
ಚೈತ್ರಾ ಕುಂದಾಪುರ ತನ್ನ ಗೆಳೆಯ ಶ್ರೀಕಾಂತ್ ನಾಯಕ್ಗೆ ಸೇರಿದ ಹಿರಿಯಡ್ಕದ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿಸುತ್ತಿರುವುದಲ್ಲದೆ, ಒಂದು ಕಾರು ಕೂಡಾ ಖರೀದಿ ಮಾಡಿದ್ದಾಳೆ.
ಮೊದಲೇ ಕೊಟ್ಟಿದ್ದರೆ ತಪ್ಪಿಸಿಕೊಳ್ಳಬಹುದಿತ್ತಾ?
ಈಗ ಪೊಲೀಸರು ಈ ಪ್ರಮಾಣದ ಹಣವನ್ನು ರಿಕವರಿ ಮಾಡಿಕೊಂಡಿದ್ದಾರೆ ಎಂದರೆ ಹಣ ಎಲ್ಲೂ ಹೋಗಿಲ್ಲ ಎಂದೇ ಅರ್ಥ. ಇದೇ ಕೆಲಸವನ್ನು ಚೈತ್ರಾ ಕುಂದಾಪುರ ಟೀಮ್ ಮೊದಲೇ ಗೋವಿಂದ ಪೂಜಾರಿ ಅವರಿಗೆ ಮರಳಿಸಿದ್ದಿದ್ದರೆ ಕೇಸು ಬೀಳುವುದು ತಪ್ಪುತ್ತಿತ್ತೇನೋ. ಆದರೆ, ಗೋವಿಂದ ಪೂಜಾರಿ ಅವರು ಹಣ ವಾಪಸ್ ಕೇಳಿದಾಗ ಈ ಟೀಮ್ ಬೆದರಿಕೆ ಹಾಕಿದ್ದೇ ಪ್ರಕರಣ ಉಲ್ಬಣ ಸ್ಥಿತಿಗೆ ಹೋಗಲು ಕಾರಣ. ಜತೆಗೆ ಉದ್ಯಮಿ ಗೋವಿಂದ ಪೂಜಾರಿ ಅವರು ಈ ಅಪಮಾನವನ್ನು ಗಂಭೀರವಾಗಿ ಪರಿಗಣಿಸಿದ್ದರು.