Site icon Vistara News

Chaitra Kundapura : ಅಜ್ಞಾತ ಸ್ಥಳದಿಂದಲೇ ಆಪರೇಟ್‌ ಮಾಡುತ್ತಿರುವ ಹಾಲಶ್ರೀ ಸ್ವಾಮೀಜಿ; ಸಿಸಿಬಿ ಕೈಗೆ ಮಾತ್ರ ಸಿಗುತ್ತಿಲ್ಲ!

halasree swameeji

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ (Govinda poojari) ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (BJP Ticket fruad case) ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ (Five crore rupees fraud case) ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swamiji) ಈ ಕೇಸ್‌ ಬ್ರೇಕ್‌ ಆದ ಕ್ಷಣದಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕುವ ಪೊಲೀಸರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಆದರೆ, ಸ್ವಾಮೀಜಿ ಮಾತ್ರ ಅಜ್ಞಾತ ಸ್ಥಳದಲ್ಲಿ ಕುಳಿತೇ ಎಲ್ಲ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ!

ಟಿಕೆಟ್‌ ಕೊಡಿಸುವ ಡೀಲ್‌ನಲ್ಲಿ ಸ್ವಾಮೀಜಿಯವರು ನೇರವಾಗಿ ಒಂದುವರೆ ಕೋಟಿ ರೂ. ಪಡೆದಿರುವುದು ಸ್ಪಷ್ಟವಾಗಿದೆ. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಗೋವಿಂದ ಪೂಜಾರಿ ಅವರ ಕಾಲಿಗೆ ಬಿದ್ದು ನಾನು ಕಂತು ಕಂತಿನಲ್ಲಿ ಹಣ ವಾಪಸ್‌ ಕೊಡುತ್ತೇನೆ ಎಂದು ಮನವಿ ಮಾಡಿದ್ದರು ಸ್ವಾಮೀಜಿ. ಆದರೆ, ಗೋವಿಂದ ಪೂಜಾರಿ ಕರುಣೆ ತೋರಿಸಿಲ್ಲ. ಈ ನಡುವೆ, ಕಣ್ಮರೆಯಾದ ಸ್ವಾಮೀಜಿ ದಿನಕ್ಕೊಂದು ಕಾನೂನು ನಾಟಕ ಮಾಡುತ್ತಿದ್ದಾರೆ.

ಅಜ್ಞಾತವಾಸದಲ್ಲಿರುತ್ತಲೇ ಬಂಧನವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುತ್ತಾರೆ. ಸೆಪ್ಟೆಂಬರ್‌ 15ರಂದು ಸಲ್ಲಿಸಿದ ಅರ್ಜಿಯ ವಿಚಾರಣೆ ಆರಂಭದಲ್ಲಿ ಸೆ. 16ಕ್ಕೆ ಮತ್ತು ಮುಂದೆ ಸೆ. 19ಕ್ಕೆ ಮುಂದೂಡಲ್ಪಟ್ಟಿದೆ. ಕೋರ್ಟ್‌ ಈ ಅರ್ಜಿಗಳ ಬಗ್ಗೆ ಹೆಚ್ಚಿನ ವಿಚಾರಣೆ ಮಾಡದೆ ಮುಂದೂಡಿಕೆ ಮಾಡುತ್ತಿದೆ ಎಂದರೆ ಅದು ಸಿಸಿಬಿ ಪೊಲೀಸರಿಗೆ ಸ್ವಾಮೀಜಿಯನ್ನು ಬಂಧಿಸಲು ಹೆಚ್ಚು ಕಾಲಾವಕಾಶ ಕೊಡುತ್ತಿದೆ ಎಂದರ್ಥ. ಆದರೆ, ಪೊಲೀಸರಿಗೆ ಮಾತ್ರ ಅವರು ಸಿಗುತ್ತಿಲ್ಲ. ಪೊಲೀಸರು ಅವರ ಮಠಕ್ಕೆ ನೋಟಿಸ್‌ ಹಚ್ಚುವುದಕ್ಕೆ, ಅವರ ಚಾಲಕನನ್ನು ಕರೆ ತಂದು ವಿಚಾರಿಸುವುದಕ್ಕೆ ಸೀಮಿತವಾಗಿದ್ದಾರೆ. ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಚಾಲಕ ಕೂಡಾ ನನಗೆ ಗೊತ್ತಿಲ್ಲ ಸ್ವಾಮಿ ಎಂದು ಕೈ ಎತ್ತಿದ್ದಾನೆ. ಈಗ ಅವನ ಮೊಬೈಲ್‌ ಟ್ರ್ಯಾಕ್‌ ಮಾಡುವ ಪ್ರಯತ್ನ ನಡೆದಿದೆ.

ಸೈಬರ್‌ ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟ ಹಾಲಶ್ರೀ ಸ್ವಾಮೀಜಿ

ಈ ನಡುವೆ, ಗೋವಿಂದ ಬಾಬು ಪೂಜಾರಿಯವರ ಕೆಲವು ಸ್ನೇಹಿತರು ಮತ್ತು ಆಪ್ತರ ಮೇಲೆ ಸ್ವಾಮೀಜಿ ಸೈಬರ್‌ ಠಾಣೆಯಲ್ಲಿ ಕಂಪ್ಲೇಂಟ್‌ ಕೊಟ್ಟಿದ್ದಾರೆ. ಎಂಎಲ್‌ಎ‌‌ ಟಿಕೆಟ್ ಕೊಡಿಸೋ ಸಂಬಂಧ ನಾನು ಹಣ ಪಡೆದು ವಂಚಿಸಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆಂದು ಗೋವಿಂದ ಬಾಬು ಮತ್ತು ಅವರ ಆಪ್ತರಾದ ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಜಂಟಿ ಸಂಚಾಲಕ ಹರ್ಷ ಮೆಂಡನ್, ಬೈಂದೂರಿನ ಹರ್ಷಾನಾಯಕ್ ಹಳ್ಳಿಹೊಳೆ ವಿರುದ್ದ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎನ್ ಸಿಆರ್ ಮಾಡಿಕೊಂಡಿದ್ದಾರೆ.

ದಾನ ರೂಪದಲ್ಲಿ ಬಂದ ಮನೆಯನ್ನೂ ಮಾರಿದ್ದ ಹಾಲಶ್ರೀ!

ಈ ನಡುವೆ, ಹಾಲಶ್ರೀ ಸ್ವಾಮೀಜಿಯವರು ಗೋವಿಂದ ಪೂಜಾರಿ ಅವರಿಂದ ಒಂದೂವರೆ ಕೋಟಿ ರೂ. ಹಣವನ್ನು ಸ್ವೀಕರಿಸಿದ ಮನೆಯಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಇದು ಹಾಲಶ್ರೀ ಮಠದ ಮೂಲ ಆಸ್ತಿಯೇನೂ ಅಲ್ಲ, ದುಡ್ಡು ಕೊಟ್ಟು ತೆಗೆದುಕೊಂಡಿದ್ದೂ ಅಲ್ಲ. ಅದು ಒಂದು ಕುಟುಂಬ ವಿಭೂತಿಪುರ ಮಠ ಸಂಸ್ಥಾನಕ್ಕೆ ದಾನವಾಗಿ ನೀಡಿದ ಮನೆ. ಈ ಮನೆಯನ್ನು ಕೂಡಾ ಹಾಲಶ್ರೀ ಸ್ವಾಮೀಜಿ ದುಡ್ಡಿಗಾಗಿ ಮಾರಾಟ ಮಾಡಿದ್ದಾರೆ!

ಅತ್ತಿಗುಪ್ಪೆಯ ಬಾಪೂಜಿ ಬಡಾವಣೆಯಲ್ಲಿದೆ ಈ ಮನೆ. ಬಾಪೂಜಿ ಬಡಾವಣೆಯ ಪರಶಿವಮೂರ್ತಿ ಎಂಬವರಿಗೆ ಸೇರಿದ ನಿವಾಸ ಇದಾಗಿದ್ದು, ಪರಶಿವಮೂರ್ತಿ ನಿಧನರಾದ ಬಳಿಕ ಮನೆಯನ್ನು ಪತ್ನಿ ಸರ್ವ ಮಂಗಳ ಅವರು ಮಠಕ್ಕೆ ದಾನವಾಗಿ ನೀಡಿದ್ದರು. ಹೆಣ್ಣು ಮಕ್ಕಳಿದ್ದಾರೆ ಅನ್ನೋ ಕಾರಣಕ್ಕೆ ಮನೆ ದಾನದ ರೂಪದಲ್ಲಿ ಮಠಕ್ಕೆ ನೀಡಿದ್ದರು.

ಶ್ರಿಮದ್ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠಕ್ಕೆ ದಾನವಾಗಿ ನೀಡಿದ ಮನೆಯನ್ನು ಅಕ್ರಮಕ್ಕೆ ಬಳಸಿಕೊಂಡ ಸ್ವಾಮೀಜಿ ಅದನ್ನು ಎರಡು ತಿಂಗಳ ಹಿಂದೆ ಮಾರಾಟ ಮಾಡಿದ್ದಾರೆ. ʻʻಸರ್ವಮಂಗಳ ಒಳ್ಳೆಯ ಉದ್ದೇಶಕ್ಕಾಗಿ ನೀಡಿದ್ದರು. ಅದನ್ನೂ ಮಾರಾಟ ಮಾಡಿಕೊಂಡಿದ್ದಾರೆ ಎನ್ನುತಾರೆ ಸ್ಥಳೀಯ ನಿವಾಸಿ ನಾಗರಾಜ್‌.

Exit mobile version