Site icon Vistara News

Chaitra Kundapura : 1.5 ಕೋಟಿ ಡೀಲ್‌ ಆದ್ಮೇಲೆ ಹಾಲಶ್ರೀ ಸ್ವಾಮೀಜಿ ಲೈಫೇ ಫುಲ್‌ ಚೇಂಜ್‌!; ಕಾರು, ಪೆಟ್ರೋಲ್‌ ಪಂಪ್‌, ಜಾಗ ಖರೀದಿ!

Halasree swameeji and hala matt hirehadagali

Halasree swameeji and hala matt hirehadagali

ಬೆಂಗಳೂರು: ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ (Halasree Swameeji) ಲೈಫೇ ಇತ್ತೀಚೆಗೆ ಫುಲ್‌ ಚೇಂಜ್‌ ಆಗಿದೆ. ಇದಕ್ಕೆ ಕಾರಣ, ಡೀಲ್‌ನಲ್ಲಿ ಸಿಕ್ಕಿದ 1.5 ಕೋಟಿ ರೂ.! (1.5 crore deal)

ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿರುವ ಹಾಲಸ್ವಾಮಿ ಮಠಕ್ಕೆ ಜಂಗಮ (Halaswami jangama matt) ಪರಂಪರೆಯಲ್ಲಿ ದೊಡ್ಡ ಹೆಸರಿದೆ. ಅದೆಷ್ಟೋ ಮಂದಿ ನಿಸ್ವಾರ್ಥ ಸ್ವಾಮೀಜಿಗಳು ಇದ್ದು ಹೋಗಿದ್ದಾರೆ. ಭಕ್ತರು ಇಲ್ಲಿನ ಹಾಲಸ್ವಾಮಿಯ ಜತೆಗೆ ಸ್ವಾಮಿಗಳನ್ನು ಕೂಡಾ ದೇವರೆಂದೇ ನಂಬುತ್ತಾರೆ. ಇಂಥ ಮಠದಲ್ಲಿ ಈಗ ಸ್ವಾಮೀಜಿಗಳಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಮೊನ್ನೆ ಮೊನ್ನೆಯವರೆಗೆ ಹಿಂದೂ ಸಂಘಟನೆಗಳ ಕಣ್ಣಲ್ಲಿ ಹೀರೋ ಆಗಿದ್ದರು. ಒಂದಿಷ್ಟು ಸಾಮಾಜಿಕ ಚಟುವಟಿಕೆಯ ಜತೆಗೆ ಉಗ್ರ ಹಿಂದುತ್ವ ಅವರ ಐಡೆಂಟಿಟಿಯಾಗಿತ್ತು. ಅದೆಷ್ಟೋ ಬಿಜೆಪಿ ನಾಯಕರು, ಸಾಮಾಜಿಕ ಹೋರಾಟಗಾರರು ಅವರ ಕಾಲಿಗೆ ಬೀಳುತ್ತಿದ್ದರು. ಆದರೆ, ಈಗ ಕಳೆದೆರಡು ದಿನಗಳಿಂದ ಈ ಸ್ವಾಮೀಜಿಯೇ ನಾಪತ್ತೆಯಾಗಿದ್ದಾರೆ, ಪ್ರಭಾವಿ ಭಕ್ತರು ತಮಗೂ ಅವರಿಗೂ ಅಂಥ ಸಂಬಂಧವೇನಿಲ್ಲ ಎನ್ನುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಸಿಸಿಬಿ ಮಠಕ್ಕೆ ಬಂದು ನೋಟಿಸ್‌ ಹಚ್ಚಿ ಹೋಗಿದೆ. ಸಿಕ್ಕರೆ ಅರೆಸ್ಟ್‌ ಆಗೋದು ಗ್ಯಾರಂಟಿ ಎಂಬ ಸ್ಥಿತಿಯಲ್ಲಿ ಸ್ವಾಮೀಜಿ ಇದ್ದಾರೆ. ಇದಕ್ಕೆಲ್ಲ ಕಾರಣವಾಗಿರುವುದು ಹಾಲಶ್ರೀ ಸ್ವಾಮೀಜಿಯವರು ಚೈತ್ರಾ ಕುಂದಾಪುರ ಜತೆಗೆ ಸೇರಿ ಮಾಡಿದ ಆ ಒಂದು ಡೀಲ್‌!

ಬಿಎಸ್‌ ಯಡಿಯೂರಪ್ಪ ಅವರ ಜತೆ ಹಾಲಶ್ರೀ ಸ್ವಾಮೀಜಿ. ಬಿಜೆಪಿಯ ಹಿರಿಯ ನಾಯಕರೇ ತನಗೆ ಹತ್ತಿರ ಎಂದು ಪೋಸು ಕೊಡುವ ಪ್ರಯತ್ನ ಇದು ಎನ್ನಲಾಗಿದೆ.

ಸುಮಾರು 50ರ ಆಸುಪಾಸಿನಲ್ಲಿರುವ ಹಾಲಶ್ರೀ ಸ್ವಾಮೀಜಿಯವರು ಬಿಜೆಪಿ ಪಕ್ಷದಲ್ಲಿ ತಾನು ಪ್ರಭಾವಿ ಇದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಅವರ ಭಕ್ತರಾಗಿರುವುದು. ಜತೆಗೆ ಚಕ್ರವರ್ತಿ ಸೂಲಿಬೆಲೆಯಂಥ ಪ್ರಖರ ಹಿಂದೂವಾದಿಗಳು, ಮೋದಿ ಪರ ಸಾಮಾಜಿಕ ಸಂಚಲನ ಸೃಷ್ಟಿ ಮಾಡುವವರು ಆಗಾಗ ಮಠಕ್ಕೆ ಬರುವುದು ಈ ಸ್ವಾಮೀಜಿಯವರ ಖದರನ್ನು ಹೆಚ್ಚಿಸುತ್ತಿತ್ತು.

ಅದರ ಜತೆಗೆ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ ಕೊಡಿಸಲು ಶಿಫಾರಸು ಮಾಡುವುದು, ಯಾರಾದರೂ ನಾಮಿನೇಷನ್‌ ಹಾಕಿದ್ದರೆ ಅವರನ್ನು ಮಾತನಾಡಿಸಿ ಕಣದಿಂದ ಹಿಂದೆ ಸರಿಯುವಂತೆ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಅವರ ಖಟ್ಟರ್‌ ನಿಲುವಿನಿಂದಾಗಿ ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಹಿಂದೂ ಸಂಘಟನೆಗಳಿಗೆ ಸ್ವಾಮೀಜಿ ಇಷ್ಟವಾಗಿದ್ದರು.

ಪುನೀತ್‌ ಕೆರೆಹಳ್ಳಿ ಜತೆ ಸ್ವಾಮೀಜಿ ಮಾತುಕತೆ

ಚೈತ್ರಾ ಕುಂದಾಪುರ ಡೀಲ್‌ ನಡೆದಿದ್ದು ಮಠದಲ್ಲೇ!

ಕರಾವಳಿಯಲ್ಲಿ ಉಗ್ರ ಹಿಂದುತ್ವದ ಪ್ರಖರ ಭಾಷಣಕಾರ್ತಿಯಾಗಿ ಹೆಸರಾಗಿದ್ದ ಚೈತ್ರಾ ಕುಂದಾಪುರ ಸುಬ್ರಹ್ಮಣ್ಯ ದೇವಸ್ಥಾನದ ವಿಷಯದಲ್ಲಿ ಮೂಗು ತೋರಿಸಲು ಹೋಗಿ ಹೊಡೆತ ತಿಂದು ಬಂದರು. ನಿಜವೆಂದರೆ ಬಳಿಕ ಅವರು ಕರಾವಳಿಯಲ್ಲಿ ಬಣ್ಣ ಕಳೆದುಕೊಂಡಿದ್ದರು. ಅದರ ಬಳಿಕ ಅವರು ಉತ್ತರ ಕರ್ನಾಟಕದ ಮೇಲೆ ಹೆಚ್ಚು ಗಮನ ನೀಡಿದರು. ಒಬ್ಬ ಪೀಚು ಹುಡುಗಿ ಇಷ್ಟೊಂದು ಖಡಕ್ಕಾಗಿ ಮಾತನಾಡುತ್ತಾಳಲ್ಲಾ ಎಂದು ಅಲ್ಲಿನ ಜನ ಹುಚ್ಚೆದ್ದು ಕುಣಿದರು. ಹಿಂದೂ ಸಮಾವೇಶ, ರ‍್ಯಾಲಿಗಳಿಗೆಲ್ಲ ಆಕೆಯೇ ಪ್ರಧಾನ ಭಾಷಣಕಾರ್ತಿ. ಆಕೆಯ ಭಾಷಣದ ತೀಕ್ಷ್ಣತೆಗೆ ಹೆದರಿ ಕೋರ್ಟ್‌ಗಳು ಕೂಡಾ ಆಕೆ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿರ್ಬಂಧವನ್ನೂ ಹಾಕಿದ್ದು ಇದೆ.

ಇಂಥ ಚೈತ್ರಾ ಕುಂದಾಪುರ ಪ್ರಖರ ಹಿಂದುವಾದಿ ಹಾಲಶ್ರೀ ಸ್ವಾಮೀಜಿ ಪಾಲಿಗೆ ನೀಲಿ ಕಣ್ಣಿನ ಹುಡುಗಿಯಾಗಿದ್ದರಲ್ಲಿ ಹೆಚ್ಚು ಅಚ್ಚರಿಯೇನೂ ಇಲ್ಲ. ಹಾಗೆ ಮಠದೊಂದಿಗೆ ಸಂಪರ್ಕ ಹೊಂದಿದ್ದ ಚೈತ್ರಾ ಕುಂದಾಪುರ ಗೋವಿಂದ ಪೂಜಾರಿಯವರ ಡೀಲ್‌ ಬಂದಾಗ ಹಾಲಶ್ರೀ ಸ್ವಾಮೀಜಿಯನ್ನು ಸಂಪರ್ಕ ಮಾಡಿದ್ದಳು. ಸ್ವಾಮೀಜಿ ಕೂಡಾ ತಮ್ಮ ಎಂದಿನ ಶೈಲಿಯಲ್ಲಿ ʻನೀವು ಹೇಳಿದ್ಮೇಲೆ ಇಲ್ಲ ಅನ್ನೋದುಂಟೇ? ಮಾಡ್ಸೋಣ ಬಿಡಿʼ ಎಂದು ಹೇಳಿದ್ದಾರೆ. ಹಾಗೆ ಚೈತ್ರಾ ಕುಂದಾಪುರ ಗೋವಿಂದ ಪೂಜಾರಿಯವರನ್ನು ಮಠಕ್ಕೆ ಕರೆದುಕೊಂಡು ಹೋಗಿದ್ದಾಳೆ.

ಅಲ್ಲಿ ಹಿಂದುತ್ವ ಮತ್ತು ಇತರ ಸಂಗತಿಗಳ ಚರ್ಚೆಯೆಲ್ಲ ಮುಗಿದು ಶುರುವಾಗಿದ್ದೇ ಡೀಲು. 2022ರ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಚೈತ್ರಾ ಮತ್ತು ಗೋವಿಂದ ಪೂಜಾರಿ ಮಠಕ್ಕೆ ಭೇಟಿ ನೀಡಿ ಅಲ್ಲಿ ಮಾತುಕತೆ ನಡೆದಿದೆ. ಟಿಕೆಟ್‌ ಕೊಡಿಸಲು ಕೆಲವು ರಾಜಕಾರಣಿಗಳಿಗೆ ಹಣ ಕೊಡಿಸಬೇಕಾಗುತ್ತದೆ. ಹೀಗಾಗಿ 1.5 ಕೋಟಿ ರೂ. ಕೊಡಬೇಕು ಎಂದು ನೇರವಾಗಿ ಸ್ವಾಮೀಜಿ ಕೇಳಿದ್ದಾರೆ. ಟಿಕೆಟ್‌ಗಾಗಿ ಅಷ್ಟು ಖರ್ಚು ಮಾಡಲು ಸಿದ್ಧವಿದ್ದ ಗೋವಿಂದ ಪೂಜಾರಿ ಓಕೆ ಅಂದಿದ್ದಾರೆ. ಈ ಹಣವನ್ನು ಹಾಲಶ್ರೀ ಸ್ವಾಮಿಗೆ ನೇರವಾಗಿ ತಲುಪಿಸಿದ್ದು ಖುದ್ದು ಗೋವಿಂದ ಪೂಜಾರಿ. ಬೆಂಗಳೂರಿನ ಜಯನಗರದಲ್ಲಿರುವ ಮಠಕ್ಕೆ ಹೋಗಿ ಹಣವನ್ನು ನೀಡಲಾಗಿದೆ. ಈ ಹಣ ವರ್ಗಾವಣೆ ನಡೆದಿದ್ದು 2023ರ ಜನವರಿ 16ರಂದು.

ಹಾಲಸ್ವಾಮಿ ಮಠದಲ್ಲಿ ಸ್ವಾಮೀಜಿಗಳ ಜತೆ ಗೋವಿಂದ ಪೂಜಾರಿ ಮತ್ತು ಚೈತ್ರಾ ಕುಂದಾಪುರ

ಸ್ವಾಮೀಜಿಗಳ ಕೈಮೀರಿ ಹೋದ ಕೇಸು!

ನಿಜವೆಂದರೆ ಚೈತ್ರಾ ಕುಂದಾಪುರ ಗೋವಿಂದ ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದು ಈ ಸ್ವಾಮಿಯನ್ನು ನಂಬಿಕೊಂಡೇ. ಯಾಕೆಂದರೆ ನನಗೆ ಮೋದಿ ಕನೆಕ್ಷನ್‌ ಇದೆ, ಅಮಿತ್‌ ಶಾ ಫೋನ್‌ ಮಾಡ್ತಾರೆ. ಅವರಿಗೆ ಟಿಕೆಟ್‌ ಕೊಡಿಸಿದೆ, ಹಾಗೆ ಮಾಡಿದೆ, ಹೀಗೆ ಮಾಡಿದೆ ಎಂದೆಲ್ಲ ಸ್ವಾಮೀಜಿ ಪುಂಖಾನುಪುಂಖವಾಗಿ ಕಥೆ ಹೇಳುತ್ತಿದ್ದರು. ಅವರು ನಿಜವಾಗಿ ಆ ಮಟ್ಟಿಗೆ ಪ್ರಭಾವಿ ಇದ್ದರೋ ಗೊತ್ತಿಲ್ಲ. ಆದರೆ, ಪ್ರಭಾವಿಗಳು ಅವರಲ್ಲಿಗೆ ಬರುತ್ತಿದ್ದುದು ನಿಜ.

ಚೈತ್ರಾ ಮತ್ತು ಗೋವಿಂದ ಪೂಜಾರಿ ಅವರಿಗೆ ಮಾತು ಕೊಟ್ಟು ಡೀಲ್‌ ಮಾಡಿಕೊಂಡಂತೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸಲು ಹಾಲಶ್ರೀ ಪ್ರಯತ್ನಪಟ್ಟಿರಬಹುದು. ಆದರೆ, ರಾಜಕಾರಣದಲ್ಲಿ ನೂರು ಜನ ಇರುತ್ತಾರೆ. ಹಾಲಶ್ರೀ ಒಬ್ಬರ ಮಾತು ಕೇಳಿ ಸೀಟು ಕೊಡ್ತಾರಾ? ಪ್ಲ್ಯಾನ್‌ ಫೇಲ್‌ ಆಗಿದೆ!

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಆದರೆ, ಹಣ ಕೊಟ್ಟ ಗೋವಿಂದ ಪೂಜಾರಿಯವರು ಬಿಡ್ತಾರಾ?

ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ಅವರು ಮಾಡಿದ್ದು ನಾಟಕ ಮತ್ತು ಕೆಲವು ಪಾತ್ರಗಳನ್ನು ಸೃಷ್ಟಿಸಿದ ಪ್ರಹಸನ ಎಂದು ತಿಳಿದಾಗ ಗೋವಿಂದ ಪೂಜಾರಿ ಸಿಟ್ಟಿಗೆದ್ದಿದ್ದರು. ಒಂದು ಕಡೆ ಟಿಕೆಟ್‌ ಸಿಗದ ಬೇಸರ, ಇನ್ನೊಂದು ಕಡೆ ಮೋಸ ಹೋದ ಆಕ್ರೋಶದಲ್ಲಿದ್ದ ಗೋವಿಂದ ಪೂಜಾರಿ ಅವರು ಎಲ್ಲರಿಗೂ ಪಾಠ ಕಲಿಸಲು ನಿರ್ಧರಿಸಿದ್ದರು.

ಹಾಗೆ ಎಲ್ಲರನ್ನೂ ವಿಚಾರಿಸಿಕೊಂಡಂತೆ ಹಾಲಶ್ರೀ ಸ್ವಾಮೀಜಿಯನ್ನೂ ಕೇಳಿದ್ದರು. ಆದರೆ, ಸ್ವಾಮೀಜಿ ಮಾತ್ರ ಮಹಾಸುಭಗನಂತೆ, ನನಗೆ ಐದು ಕೋಟಿ ವಂಚನೆ ವಿಷಯ ಗೊತ್ತಿಲ್ಲ. ನನ್ನದು 1.5 ಕೋಟಿ ರೂ. ಮಾತ್ರ. ಬೇಕಿದ್ದರೆ ಅದನ್ನು ಹಂತ ಹಂತವಾಗಿ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ.

ಆದರೆ, ಇಷ್ಟು ದೊಡ್ಡ ಮೋಸ ಮಾಡಿದ್ದರಿಂದ ಗೋವಿಂದ ಪೂಜಾರಿ ಬಿಡಲು ಸಿದ್ಧರಿಲಿಲ್ಲ. ಅವರನ್ನೂ ಸೇರಿಸಿ ಕೇಸು ಹಾಕಿದ್ದಾರೆ. ಈಗ ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ.

ಇದನ್ನೂ ಓದಿ: Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ

ತಲೆಮರೆಸಿಕೊಂಡಿರುವ ಹಾಲ ಶ್ರೀ

ಗೋವಿಂದ ಪೂಜಾರಿ ಜತೆಗೆ ನನ್ನನ್ನು ಸೇರಿಸಬೇಡಿ ಗೋವಿಂದಣ್ಣ ಎಂದು ಸಾಕಷ್ಟು ಗೋಗರೆದಿದ್ದ ಹಾಲ ಶ್ರೀ ಸ್ವಾಮೀಜಿಗೆ ಅಂತಿಮವಾಗಿ ತಮ್ಮ ಹೆಸರು ಎಫ್‌ಐಆರ್‌ನಲ್ಲಿ ಬಿದ್ದಿದೆ ಎಂದು ತಿಳಿಯಿತು. ಹಾಗೆ ಸಂದೇಶ ಬಂದಾಗ ಅವರು ಒಂದು ಕಾರ್ಯಕ್ರಮದಲ್ಲಿದ್ದರು. ಸಂದೇಶ ನೋಡಿದವರೇ ಕಾರ್ಯಕ್ರಮದ ಮಧ್ಯದಿಂದಲೇ ಎದ್ದು ಹೋಗಿದ್ದಾರೆ. ಅಲ್ಲಿಂದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ಈ ಪ್ರಕರಣದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಉದಾಹರಣೆ ಎಂದರೆ ಅವರು ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು.

ಇದನ್ನೂ ಓದಿ : Chaitra Kundapura : ಬಂಧನ ತಪ್ಪಿಸಲು ಹಾಲಶ್ರೀ ಯತ್ನ; ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ

ಸದ್ಯಕ್ಕೆ ಕೋರ್ಟ್‌ ಅವರ ಮಾತಿಗೆ ಮನ್ನಣೆ ನೀಡಿಲ್ಲ. ಸೆಪ್ಟೆಂಬರ್‌ 16ರಂದು ಇನ್ನೊಂದು ಸುತ್ತಿನ ವಿಚಾರಣೆ ನಡೆದು ತೀರ್ಪು ಹೊರಬೀಳಲಿದೆ. ಒಂದೊಮ್ಮೆ ಜಾಮೀನು ಸಿಗದೆ ಹೋದರೆ ಅಭಿನವ ಹಾಲಶ್ರೀ ಸ್ವಾಮೀಜಿ ಜೈಲು ಸೇರುವುದು ಗ್ಯಾರಂಟಿ. ಹಾಗೆ ಸೆರೆ ಸಿಕ್ಕರೆ ದೊಡ್ಡ ದೊಡ್ಡವರ ಹೆಸರು ಹೊರಬೀಳಲಿದೆ ಎನ್ನುವುದು ಚೈತ್ರಾ ಕುಂದಾಪುರ ನಿರೀಕ್ಷೆ.

ಆದರೆ, ಈಗಾಗಲೇ ನಾನು ಇನ್ನೋಸೆಂಟ್. ನನಗೆ ಇದ್ಯಾವುದೂ ಗೊತ್ತಿಲ್ಲ ಎಂದಿರುವ ಹಾಲಶ್ರೀ ಏನು ಕಥೆ ಹೇಳುತ್ತಾರೋ ಗೊತ್ತಿಲ್ಲ. ಕಾದು ನೋಡಬೇಕು.

ಹಾಗಿದ್ದರೆ ಸ್ವಾಮೀಜಿ 1.5 ಕೋಟಿ ದುಡ್ಡು ಏನು ಮಾಡಿದರು, ಯಾರಿಗೆ ಕೊಟ್ರು?

ಇದೆಲ್ಲವೂ ವಂಚನೆಗೆ ಥಳುಕು ಹಾಕಿಕೊಂಡು ಭಾಗದ ಕಥೆ. ಉಳಿದಿರುವ ಕಥೆ ಇನ್ನೂ ಇಂಟ್ರೆಸ್ಟಿಂಗ್.‌ ಅದೇನೆಂದರೆ ಗೋವಿಂದ ಪೂಜಾರಿ ಕೊಟ್ಟ 1.5 ಕೋಟಿ ರೂ. ಹಣವನ್ನು ಸ್ವಾಮೀಜಿ ಏನು ಮಾಡಿದರು? ಟಿಕೆಟ್‌ ಕೊಡಿಸಲೆಂದು ಯಾವುದಾದರೂ ರಾಜಕಾರಣಿಗಳಿಗೆ ಕೊಟ್ರಾ? ತಾನೇ ಖರ್ಚು ಮಾಡಿದ್ರಾ?

ಇದನ್ನು ಬೆನ್ನಟ್ಟಿ ಹೋದರೆ ಇತ್ತೀಚೆಗೆ ತೆರೆದುಕೊಂಡ ಸ್ವಾಮೀಜಿಗಳ ಐಷಾರಾಮಿ ಬದುಕು ಕಣ್ಣಿಗೆ ರಾಚುತ್ತದೆ. ಅವರು ಮಾಡಿರುವ ವ್ಯವಹಾರಗಳು ತೆರೆದುಕೊಳ್ಳುತ್ತವೆ. ಹೌದು, ಗೋವಿಂದ ಪೂಜಾರಿಯಿಂದ ಬಂದ ಹಣವನ್ನು ಯಾರಿಗೋ ಕೊಡುವುದಕ್ಕಿಂತಲೂ ಹೆಚ್ಚಾಗಿ ಸ್ವಂತಕ್ಕೆ ಬಳಸಿಕೊಂಡಿದ್ದು ಕಂಡುಬರುತ್ತದೆ.

ಇತ್ತೀಚೆಗೆ ಸ್ವಾಮೀಜಿಯ ಲೈಫ್‌ ಸ್ಟೈಲೇ ಬದಲಾಗಿ ಹೋಗಿತ್ತು. ಅವರು ದೊಡ್ಡ ದೊಡ್ಡ ವ್ಯವಹಾರಗಳ ಬಗ್ಗೆ ಮಾತನಾಡುತ್ತಿದ್ದರು. ಇನ್ವೆಸ್ಟ್‌ ಮೆಂಟ್‌ಗಳ ವಿಚಾರ ಹೇಳುತ್ತಿದ್ದರು ಎನ್ನಲಾಗಿದೆ.

ಎಂಟು ಎಕರೆ ಭೂಮಿ ಖರೀದಿಸಿದ ಸ್ವಾಮೀಜಿ

ಕೆಲವೇ ತಿಂಗಳ ಹಿಂದೆ ಸ್ವಾಮೀಜಿ ಹಿರೇಹಡಗಲಿ ಮತ್ತು ಮಾಗಳ ಮಧ್ಯೆ ಸುಮಾರು 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಖರೀದಿ ಮಾಡಿದ ಜಮೀನಿನಲ್ಲಿ ಕಬ್ಬು ಬೆಳೆದಿದ್ದು ಈಗ ಅದು ಬೆಳೆದುನಿಂತಿದೆ.

ತಮ್ಮ ಪತ್ನಿಯ ತಂದೆಯಾದ ಮಲ್ಲಯ್ಯ ತುಂಬಿನಕೇರ ಅವರ ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ. ಅದನ್ನು ಸ್ವಾಮೀಜಿಯವರೇ ನೋಡಿಕೊಳ್ಳುತ್ತಿದ್ದಾರೆ. ಎಂಟು ಎಕರೆ ಜಾಗ ಖರೀದಿಗೆ ಸ್ವಾಮೀಜಿ ಹೂಡಿಕೆ ಮಾಡಿರುವ ಹಣ ಒಟ್ಟು 68 ಲಕ್ಷ ರೂ.

ಹಿರೇಹಡಗಲಿಯಲ್ಲಿ ಪೆಟ್ರೋಲ್‌ ಪಂಪ್‌ ನಿರ್ಮಾಣ

ಈ ನಡುವೆ ಸ್ವಾಮೀಜಿಯವರು ಒಂದು ತಿಂಗಳ ಹಿಂದೆ ಹಿರೇ ಹಡಗಲಿಯಲ್ಲಿ ಒಂದು ಪೆಟ್ರೋಲ್‌ ಪಂಪ್‌ ನಿರ್ಮಾಣ ಮಾಡಿದ್ದಾರೆ. ಈ ಪಂಪ್‌ನ ಲೈಸನ್ಸ್‌ ಹಿರೇಹಡಗಲಿ ಚಂದ್ರಪ್ಪ ಎಂಬವರ ಕೈಯಲ್ಲಿದೆ.

ಅದನ್ನು 40 ಲಕ್ಷ ರೂ.ಗಳಿಗೆ ಖರೀದಿ ಎಚ್‌ಪಿ ಕಂಪನಿ ಪೆಟ್ರೋಲ್‌ ಪಂಪ್‌ ಸ್ಥಾಪನೆ ಮಾಡಲಾಗಿದೆ. ಕೇವಲ ಒಂದೇ ತಿಂಗಳಲ್ಲಿ ಪಂಪ್‌ ನಿರ್ಮಾಣವಾಗಿದೆ. ಹಿರೇ ಹಡಗಲಿ ಹಾಗೂ ಹಡಗಲಿ ರಸ್ತೆಯಲ್ಲಿದೆ ಈ ಪೆಟ್ರೋಲ್‌ ಪಂಪ್‌. ಇದರ ಮೌಲ್ಯ 40 ಲಕ್ಷ ರೂ.

25 ಲಕ್ಷ ರೂ. ಮೌಲ್ಯದ ಇನ್ನೋವಾ ಕ್ರಿಸ್ಟಾ ಕಾರು ಖರೀದಿ

ಮೊನ್ನೆ ಮೊನ್ನೆಯವರೆಗೆ ಸ್ವಿಫ್ಟ್‌ ಡಿಸೈರ್‌ ಕಾರಿನಲ್ಲಿ ಓಡಾಡುತ್ತಿದ್ದ ಸ್ವಾಮೀಜಿಗೆ ಈಗ 25 ಲಕ್ಷ ಮೌಲ್ಯದ ಇನ್ನೋವಾ ಕ್ರಿಸ್ತಾ ಕಾರು ಬಂದಿದೆ. ಅದನ್ನು ದೊಡ್ಡ ಸ್ವಾಮೀಜಿಯೊಬ್ಬರು ಪೂಜೆ ಬೇರೆ ಮಾಡಿದ್ದಾರೆ. ಇದರ ಮೌಲ್ಯ 25 ಲಕ್ಷ ರೂ.

ಇಷ್ಟೆಲ್ಲ ಆದ ಮೇಲೆ ಗೋವಿಂದ ಪೂಜಾರಿ ಬಂದು ಕೇಳಿದ್ದಾರೆ!

ಹಣವನ್ನು ಹೀಗೆಲ್ಲ ಇನ್‌ವೆಸ್ಟ್‌ ಮಾಡಿ ಐಷಾರಾಮಿ ಜೀವನ ಶುರುಮಾಡಿದ ಮೇಲೆ ಗೋವಿಂದ ಪೂಜಾರಿ ಅವರು ಬಂದು ಸ್ವಾಮೀಜಿ ಏನು ಕಥೆ ಎಂದು ಕೇಳಿದ್ದಾರೆ. ಆಗ ಸ್ವಾಮೀಜಿಯವರು ತಮ್ಮ ಪಾಲಿನ ಕಥೆ ಹೇಳಿದ್ದಾರೆ. ನನ್ನನ್ನು ಬಿಟ್ಟುಬಿಡಿ, ಹಂತ ಹಂತವಾಗಿ ಹಣ ಕೊಡುತ್ತೇನೆ ಎಂದಿದ್ದಾರೆ. ನನ್ನ ಜತೆ ಪಾಲುದಾರರಾಗಿ ಎಂದಿದ್ದಾರೆ. ಸಾಲದ್ದಕ್ಕೆ ಗೋವಿಂದ ಪೂಜಾರಿಗೆ ಸ್ವಲ್ಪ ಹಣ ಕೊಟ್ಟು ಸಮಾಧಾನ ಮಾಡೋಣ ಎಂದು ಹೇಳಿ ನನಗೆ ಒಂದು 10 ಲಕ್ಷ ರೂ. ಸಾಲ ಕೊಡಬಹುದಾ ಎಂದು ಆಪ್ತರಲ್ಲಿ ಕೇಳಿದ್ದಾರೆ. ಅದ್ಯಾವುದೂ ಫಲಿಸಿಲ್ಲ. ಈಗ ಪೊಲೀಸರ ಮುಂದೆ ಕೇಸಿದೆ. ಇಷ್ಟಾದರೂ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಸ್ವಾಮೀಜಿ.

ಇದನ್ನೂ ಓದಿ: Chaitra Kundapura : Big Update; ಅದು ಆತ್ಮಹತ್ಯೆ ಯತ್ನ ಅಲ್ಲ, ಚೈತ್ರಾ ಕುಂದಾಪುರ ಫಿಟ್ಸ್‌ ಬಂದು ಕುಸಿದು ಬಿದ್ದದ್ದು!

ಇದರ ನಡುವೆ ಕೆಲವು ದಿನಗಳ ಹಿಂದೆ ಭಕ್ತಜನರಿಂದ ತುಂಬಿ ತುಳುಕುತ್ತಿದ್ದ ಹಾಲಸ್ವಾಮಿ ಮಠದಲ್ಲಿ ಈಗ ಜನಜಾತ್ರೆ ಕಡಿಮೆಯಾಗಿದೆ. ಗುರುವಾರ ಅಮಾವಾಸ್ಯೆ ಇದ್ದಿದ್ದರಿಂದ ಒಂದಷ್ಟು ಜನ ಬಂದು ದರ್ಶನ ಮಾಡಿ ಹೋಗಿದ್ದಾರೆ. ಆದರೆ ಹಾಲಶ್ರೀಗಳು ಇರುತ್ತಿದ್ದ ಕೋಣೆ ಬಂದ್‌ ಆಗಿದೆ.

Exit mobile version