ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda poojari) ಅವರಿಗೆ ಐದು ಕೋಟಿ ರೂಪಾಯಿ ವಂಚನೆ ನಡೆಸಿರುವ ಪ್ರಕರಣದ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಈಗ ದಿನಕ್ಕೊಂದು ನಾಟಕ ಮಾಡಲು ಶುರು ಮಾಡಿದಂತೆ ಕಾಣುತ್ತಿದೆ. ಸೆ. 12ರಂದು ಬಂಧಿತಳಾಗಿ ಸೆ. 13ರಿಂದ ಸಿಸಿಬಿ ಕಸ್ಟಡಿಯಲ್ಲಿರುವ ಆಕೆ ಮೊದಲ ದಿನ ʻಸ್ವಾಮೀಜಿ ಸಿಕ್ಕಾಕ್ಕೊಳ್ಳಿ ಎಲ್ಲಾ ಸತ್ಯ ಹೊರಗೆ ಬರುತ್ತದೆ, ಇದು ಇಂದಿರಾ ಕ್ಯಾಂಟೀನ್ ವಿಚಾರʼ ಎಂದು ಹುಳ ಬಿಟ್ಟಿದ್ದರೆ, ಶುಕ್ರವಾರ ಅನಾರೋಗ್ಯದ ನಾಟಕವಾಡಿದ್ದಾಳೆ.
ಶುಕ್ರವಾರ ಸಿಸಿಬಿ ಕಚೇರಿಗೆ ಹಾಜರಾಗಿ ಕೆಲವೇ ನಿಮಿಷಗಳಲ್ಲಿ ವಾಶ್ ರೂಮ್‌ಗೆ ಅಂತ ಹೋದ ಚೈತ್ರ ಬಾಯಲ್ಲಿ ನೊರೆ ಸುರಿಸುತ್ತ ಫಿಟ್ಸ್ (ಅಪಸ್ಮಾರ, ಮೂರ್ಛೆ ರೋಗ) (Epilepsy) ಬಂದಂತೆ ಬಿದ್ದು ಒದ್ದಾಡಿದ್ದಳು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಯಿತು.
ವೈದ್ಯರ ತಂಡಗಳು ಆಕೆಯನ್ನು ಬಗೆಬಗೆಯಾಗಿ ಪರಿಶೀಲಿಸಿದಾಗ ಆಕೆಗೆ ಯಾವ ಅನಾರೋಗ್ಯವೂ ಕಾಣಿಸಲಿಲ್ಲ. ಆಕೆಗೆ ಅಪಸ್ಮಾರ ಕಾಯಿಲೆಯಿಂದ ಬಾಯಿಯಲ್ಲಿ ನೊರೆ ಬಂದಿರಬೇಕು ಎಂದು ಭಾವಿಸಲಾಗಿತ್ತು. ಆದರೆ, ಅಪಸ್ಮಾರದ ಯಾವ ಲಕ್ಷಣವೂ ಇರಲಿಲ್ಲ.
ಆಕೆ ಯಾವುದಾದರೂ ವಿಷ ಸೇವಿಸಿದ್ದರಿಂದ ಈ ರೀತಿ ಆಗಿರಬಹುದು (Suicide attempt) ಎಂದು ಆಕೆಯ ಎಲ್ಲ ಪರೀಕ್ಷೆ, ದೇಹದ ವಿಸರ್ಜನೆಗಳು, ವಾಂತಿಯ ಪರೀಕ್ಷೆಯನ್ನೂ ನಡೆಸಲಾಯಿತು. ಅದರಲ್ಲಿ ವಿಷದ ಯಾವ ಅಂಶವೂ ಸಿಗಲಿಲ್ಲ.
ಆಕೆ ಕಳೆದ ಕೆಲವು ದಿನಗಳಿಂದ ನಿದ್ದೆ ಮಾಡದೆ, ಸರಿಯಾಗಿ ಆಹಾರ ಸೇವಿಸದೆ ಇರುವುದರಿಂದ ಲೋ ಬಿಪಿ, ಪ್ರಜ್ಞೆ ತಪ್ಪುವ ಯಾವ ಸಮಸ್ಯೆಯಾದರೂ ಆಗಿರಬಹುದೇ ಎಂದು ಪರೀಕ್ಷಿಸಲಾಯಿತು. ಆದರೆ, ಎಲ್ಲಾ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಅಲ್ಲಿಗೆ ಚೈತ್ರಾ ಕುಂದಾಪುರ ಪರಿಪೂರ್ಣವಾಗಿ ನಾರ್ಮಲ್ ಆಗಿದ್ದಾಳೆ. ಅನಾರೋಗ್ಯದ ನಾಟಕವಾಡಿದ್ದಾಳೆ ಎಂಬ ಅಂಶವನ್ನು ಅಂದಾಜು ಮಾಡಲಾಯಿತು.
ಅದಕ್ಕೆ ಪೂರಕವಾಗಿ 2018ರಲ್ಲಿ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಚೈತ್ರ ಆ ವೇಳೆಯೂ ಪೊಲೀಸ್ರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ಡ್ರಾಮ ಮಾಡಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಕರಣವೂ ಬೆಳಕಿಗೆ ಬಂದಿದೆ.
ಹಾಗಿದ್ದರೆ ಆಕೆಯ ಬಾಯಲ್ಲಿ ಕಂಡ ನೊರೆ ಯಾವುದು ಎಂಬ ಪ್ರಶ್ನೆಗೆ ಉತ್ತರ: ಆಕೆ ವಾಶ್ ರೂಮ್‌ಗೆ ಹೋದಾಗ ಅಲ್ಲಿದ್ದ ಹ್ಯಾಂಡ್ ವಾಶ್ ಇಲ್ಲವೇ ಸೋಪಿನ ನೊರೆಯನ್ನು ಮುಖಕ್ಕೆ ಮೆತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಯಾವ ಪ್ರಶ್ನೆಗೂ ಉತ್ತರ ನೀಡದ ಚೈತ್ರಾ ಕುಂದಾಪುರ
ನಿಜವೆಂದರೆ ಆಸ್ಪತ್ರೆಯಲ್ಲಿ ಚೈತ್ರಾ ನಾರ್ಮಲ್ ಆಗಿಯೇ ಇದ್ದಳಾದರೂ ಪ್ರಜ್ಞೆ ಇಲ್ಲದಂತೆ ಬಿದ್ದುಕೊಂಡು ನಾಟಕ ಮಾಡುತ್ತಿದ್ದಳು ಎನ್ನಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವ ಪ್ರಶ್ನೆಗೂ ಆಕೆ ಉತ್ತರ ಕೊಟ್ಟಿರಲಿಲ್ಲ. ಅಂದರೆ, ತನಗಿನ್ನೂ ಆರಾಮ ಆಗಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಬಹುದು ಎಂಬ ನಿರೀಕ್ಷೆ ಆಕೆಯಲ್ಲಿತ್ತು. ಅದಕ್ಕೆ ಪೂರಕವಾಗಿ ಆಸ್ಪತ್ರೆಯವರು ಕೂಡಾ ಆಕೆಯನ್ನು ಉಳಿಸಿಕೊಂಡಿದ್ದಾರೆ. ಈ ನಡುವೆ ಕಳೆದ ಒಂದು ದಿನದ ವಿಚಾರಣೆಯಲ್ಲಿ ಚೈತ್ರಾ ಯಾವುದೇ ವಿಚಾರದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಐದನೇ ಆರೋಪಿ ಕಸ್ಟಡಿಗೆ, ಹಾಲಶ್ರೀಗಾಗಿ ಶೋಧ
ಈ ನಡುವೆ, ಗುರುವಾರ ಸಂಜೆ ಬಂಧನಕ್ಕೆ ಒಳಗಾದ ಪ್ರಕರಣದ ಐದನೇ ಆರೋಪಿ ಬಿ.ಎನ್. ಚಂದ್ರಾ ನಾಯಕ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಆತನನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ಆತನ ವಿಚಾರಣೆ ನಡೆಯುತ್ತಿದೆ.
ಇತ್ತ ಪ್ರಕರಣದ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಇನ್ನೂ ಸಿಸಿಬಿ ಕೈಗೆ ಸಿಕ್ಕಿಲ್ಲ. ಅವರಿಗಾಗಿ ಸಿಸಿಬಿಯ ಎರಡು ತಂಡಗಳು ಹುಡುಕಾಟ ನಡೆಸುತ್ತಿವೆ. ಇದರ ನಡುವೆಯೇ ಅಜ್ಞಾತ ಸ್ಥಳದಲ್ಲಿರುವ ಅವರು ಅಲ್ಲಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಾಥಮಿಕ ವಿಚಾರಣೆ ಶುಕ್ರವಾರ 57ನೇ ಸಿಟಿ ಕೋರ್ಟ್‌ನಲ್ಲಿ ನಡೆದಿದೆ. ಕೋರ್ಟ್ ಜಾಮೀನು ನಿರಾಕರಣೆ ಮಾಡಿದ್ದು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.