Site icon Vistara News

Chaitra Kundapura : ಯಾರ‍್ರೀ ಆ ಚೈತ್ರಾ ಕುಂದಾಪುರ? ; ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಚೇರಿಯಿಂದಲೇ ಫೋನ್‌

PM Narendra Modi office enquired about Chaitra kundapura

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ನಿಂದ ಐದು ಕೋಟಿ ರೂ. ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರು ಸೆಪ್ಟೆಂಬರ್‌ 8ರಂದು ಬಂಡೇಪಾಳ್ಯ ಠಾಣೆಗೆ ದೂರು ನೀಡುವ ಮೊದಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಬಿಜೆಪಿಯ ಹಲವು ರಾಷ್ಟ್ರೀಯ ನಾಯಕರಿಗೆ (Written letters to BJP National leaders) ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ಈ ದೂರಿನ ಆಧಾರದಲ್ಲಿ ಪ್ರಧಾನಿ ಮೋದಿ ಕಚೇರಿಯಿಂದಲೇ (PM Office) ರಾಜ್ಯದ ನಾಯಕರಿಗೆ ಕರೆ ಬಂದು ಚೈತ್ರಾ ಕುಂದಾಪುರ ಯಾರು ಎಂಬ ಬಗ್ಗೆ ವಿಚಾರಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ತಂಡ ತನಗೆ ವಂಚನೆ ಮಾಡಿದೆ ಎಂಬ ಅಂಶವನ್ನು ಗೋವಿಂದ ಪೂಜಾರಿ ಅವರು ಬಿಜೆಪಿಯ ಹಿರಿಯ ನಾಯಕರ ಗಮನಕ್ಕೆ ತರುವುದು ಉತ್ತಮ ಎಂಬ ನೆಲೆಯಲ್ಲಿ ಸೆ. 2ರಂದು ದೂರು ನೀಡಿದ್ದರು.

ಈ ಪತ್ರವನ್ನು ಓದುತ್ತಿದ್ದಂತೆಯೇ ರಾಷ್ಟ್ರೀಯ ನಾಯಕರು ಅಲರ್ಟ್‌ ಆಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ರಾಜ್ಯದ ಪ್ರಮುಖ ನಾಯಕರಿಗೆ ಕರೆ ಬಂದು ಚೈತ್ರಾ ಕುಂದಾಪುರ ಯಾರು? ಆಕೆಯ ಹಿನ್ನೆಲೆ ಏನು? ಪಕ್ಷದಲ್ಲಿ ಜವಾಬ್ದಾರಿ ಇದೆಯಾ? ಆಕೆ ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿ ಯಾವ ರೀತಿ ಗುರುತಿಸಿಕೊಂಡಿದ್ದಾಳೆ? ಆಕೆಯ ಹಿನ್ನೆಲೆ ಏನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಆದರೆ, ಪ್ರಧಾನಿ ಕಚೇರಿಯವರು ಆಕೆಯ ಮಾಹಿತಿ ಕೇಳುತ್ತಿರುವುದೇಕೆ ಎನ್ನುವುದನ್ನು ಬಾಯಿ ಬಿಟ್ಟಿರಲಿಲ್ಲ.

ಪ್ರಧಾನಿ ಕಚೇರಿಯಿಂದ ಬಂದ ಕರೆಯ ಆಧಾರದಲ್ಲಿ ಸ್ಥಳೀಯ ನಾಯಕರು ಚೈತ್ರಾ ಕುಂದಾಪುರ ಅವರ ಮಾಹಿತಿಯನ್ನು ಕಳುಹಿಸಿಕೊಟ್ಟಿದ್ದರು. ಚೈತ್ರಾ ಕುಂದಾಪುರ ಹಿನ್ನೆಲೆಯ ಜತೆಗೆ ಉದ್ಯಮಿ ಗೋವಿಂದ ಪೂಜಾರಿಯವರ ಮಾಹಿತಿಯನ್ನೂ ಹೈಕಮಾಂಡ್‌ ಪಡೆದುಕೊಂಡಿದೆ.

ಗೋವಿಂದ ಪೂಜಾರಿ ಅವರು ಜನಪ್ರಿಯ ಉದ್ಯಮಿಯಾಗಿರುವುದು, ಬಿಜೆಪಿ ಪಕ್ಷಕ್ಕಾಗಿ ನಿಯತ್ತಿನಿಂದ ಕೆಲಸ ಮಾಡಿರುವುದು, ಪಕ್ಷದ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಖರ್ಚು ಮಾಡಿರುವುದನ್ನು ಗಮನಿಸಿದ ಹೈಕಮಾಂಡ್‌ ಅವರಿಗೆ ಅನ್ಯಾಯವಾಗಿರುವುದನ್ನು ಮನಗಂಡು ಅವರ ಬೆನ್ನಿಗೆ ನಿಲ್ಲಲು ನಿರ್ಧರಿಸಿತು ಎನ್ನಲಾಗಿದೆ. ಜತೆಗೆ ಬಿಜೆಪಿಗೂ ಚೈತ್ರಾ ಕುಂದಾಪುರಳಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದೆಯಂತೆ.

ಇತ್ತ ರಾಷ್ಟ್ರೀಯ ನಾಯಕರು ಗೋವಿಂದ ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಟೀಮ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿತ್ತು. ಅದರ ಪ್ರಕಾರ, ಗೋವಿಂದ ಪೂಜಾರಿ ಅವರು ಸೆಪ್ಟೆಂಬರ್‌ 8ರಂದು ಬಂಡೇಪಾಳ್ಯ ಠಾಣೆಗೆ ದೂರು ನೀಡಿದ್ದರು.

ಸೆಪ್ಟೆಂಬರ್‌ 8ರಂದು ದೂರು ಸ್ವೀಕರಿಸಿದ ಕ್ಷಣದಿಂದಲೇ ಸಿಸಿಬಿ ಪೊಲೀಸರು ಆರೋಪಿಗಳ ಹುಡುಕಾಟಕ್ಕೆ ಶುರು ಮಾಡಿದ್ದರು. ಸೆಪ್ಟೆಂಬರ್‌ 12ರಂದು ರಾತ್ರಿ ಚೈತ್ರಾ ಕುಂದಾಪುರ ಅರೆಸ್ಟ್‌ಗೆ ಮುಹೂರ್ತ ಕೂಡಿಬಂದಿತ್ತು.

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ನಂಗೆ ಮೋದಿಯೂ ಗೊತ್ತು ಎಂದು ಕೂಗಾಡಿದ್ದ ಚೈತ್ರಾ

ಈ ನಡುವೆ ಉಡುಪಿಯಲ್ಲಿ ಬಂಧಿತಳಾಗಿ ಬುಧವಾರ ಬೆಂಗಳೂರಿನ ಸಿಸಿಬಿಗೆ ಕರೆತಂದ ವೇಳೆ ಚೈತ್ರಾ ಕುಂದಾಪುರ ನಂಗೆ ಮೋದಿ ಗೊತ್ತು, ಎಲ್ಲಾ ಸೀನಿಯರ್‌ ಲೀಡರ್‌ಗಳು ಗೊತ್ತು ಎಂದು ಆವಾಜ್‌ ಹಾಕಿದ ಘಟನೆಯೂ ನಡೆದಿತ್ತು.

ನೀವು ನನ್ನನ್ನು ಕರೆದುಕೊಂಡು ಬಂದು ತಪ್ಪು ಮಾಡಿದ್ದೀರಿ. ಈಗ ಕೋರ್ಟ್‌ ಮುಂದೆ ಹಾಜರುಪಡಿಸಿದ ಕೂಡಲೇ ನನ್ನನ್ನು ಬಿಟ್ಟು ಬಿಡಿ ಎಂದು ಹೇಳುತ್ತಾರೆ, ನೀವು ಈಗಲೇ ಬಿಟ್ಟು ಬಿಡುವುದು ಒಳ್ಳೆಯದು ಎಂದು ಹೇಳಿದ್ದಳಂತೆ ಚೈತ್ರಾ ಕುಂದಾಪುರ.

ನಾನು ನೇರವಾಗಿ ಪ್ರಧಾನಿ ಮೋದಿಗೂ ಫೋನ್‌ ಮಾಡಬಲ್ಲೆ, ಅವರೇ ನನ್ನ ರಕ್ಷಣೆಗೆ ಬರ್ತಾರೆ ಎಂದೆಲ್ಲ ಹೇಳಿಕೊಂಡಿದ್ದ ಚೈತ್ರಾಳಿಗೆ ಖುದ್ದು ಪ್ರಧಾನಿ ಸಚಿವಾಲಯವೇ ಆಕೆಯ ವಿರುದ್ಧ ದೂರು ನೀಡಲು ನಿರ್ದೇಶನ ನೀಡಿತ್ತು ಎಂಬ ವಿಷಯ ತಿಳಿದಿರಲೇ ಇಲ್ಲ.

Exit mobile version