Site icon Vistara News

ಸಾವರ್ಕರ್‌ ಕುರಿತ ಸತ್ಯವನ್ನು ಎಲ್ಲರಿಗೂ ತಿಳಿಸಲು ಪುಸ್ತಕ ಪ್ರಕಟಿಸಿದ್ದೇವೆ ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ

chakravarti soolibele

ಬೆಂಗಳೂರು: ವಿ.ಡಿ. ಸಾವರ್ಕರ್‌ ಬಗ್ಗೆ ವಿವಾದ ಭುಗಿಲೆದ್ದಿರುವ ನಡುವೆಯೇ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ವೀರ ಸಾವರ್ಕರ್ ಕುರಿತ ಪುಸ್ತಕ ಗಮನ ಸೆಳೆದಿದೆ. ವೀರ ಸಾವರ್ಕರ್‌: ಸಾಹಸ-ಯಾತನೆ- ಅವಮಾನ ಎಂಬ ಶೀರ್ಷಿಕೆ ಇರುವ ಈ ಪುಸ್ತಕ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಇನ್ನೂ ಪ್ರಕಟವಾಗದ ಕೇವಲ 6 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿರುವ ಈ ಪುಸ್ತಕದಲ್ಲಿ 32 ಪುಟಗಳಿವೆ. ವೀರ ಸಾವರ್ಕರ್ ಜೀವನದ ಕುರಿತ ಹತ್ತು ಹಲವು ಅಂಶಗಳಿವೆ. ಈ ಪುಸ್ತಕ ಪ್ರಕಟಣೆಯ ಹಿನ್ನೆಲೆಯ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಜೊತೆ ವಿಸ್ತಾರ ನ್ಯೂಸ್‌ ಪ್ರತಿನಿಧಿ ಅಭಿಷೇಕ್ ಬಿ ವಿ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

ಪ್ರಶ್ನೆ : ಏನಿದು ವೀರ ಸಾವರ್ಕರ್ : ಸಾಹಸ – ಯಾತನೆ – ಅವಮಾನ ಪುಸ್ತಕ?
ಚಕ್ರವರ್ತಿ
: ಯಾವುದೇ ಒಬ್ಬ ಮಹಾಪುರುಷನನ್ನು ಅವಮಾನ ಮಾಡಿದಾಗಲೆಲ್ಲಾ ನಾವು ಈ ರೀತಿಯ ಪ್ರಯತ್ನ ಮಾಡಿಕೊಂಡು ಬಂದಿದ್ದೇವೆ. ಈಗ ಸಾವರ್ಕರ್‌ ಅವರ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೃತಿ ಕೂಡ ಸಿದ್ಧವಾಗಿದೆ. ಕೃತಿಯ ಹೆಸರೇ ಹೇಳುವಂತೆ ವೀರ ಸಾವರ್ಕರ್‌ ಅವರ ಯೌವನ ಕಾಲದ ದಿನಗಳು ಸಾಹಸಮಯವಾಗಿತ್ತು. ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಮಿತ್ರ ಮೇಳವನ್ನು ಕಟ್ಟಿದ್ದ ವೀರ ಸಾವರ್ಕರ್ ಬರಬರುತ್ತಾ ಅಭಿನವ ಭಾರ್ಗವ ಎಂಬ ಗುಪ್ತ ಕ್ರಾಂತಿಕಾರಿ ಸಂಸ್ಥೆಯನ್ನೂ ಕೂಡ ಕಟ್ಟಿದ್ರು. ಭಾರತದಲ್ಲಿ ಅವರೇ ಪ್ರಪ್ರಥಮ ಬಾರಿಗೆ ವಿದೇಶಿ ವಸ್ತ್ರಗಳ ಹೋಳಿ ಆಚರಿಸಿದ್ದು. ಆನಂತರ ದೇಶಭಕ್ತಿ ಆರೋಪಕ್ಕೋಸ್ಕರ ಕಾಲೇಜಿನಿಂದ ಹೊರದಬ್ಬಲ್ಪಟ್ಟಿದ್ದು. ಅದಾದ ನಂತರ ಅವರು ಎದೆಗುಂದದೆ ವಿದೇಶಕ್ಕೆ ಹೋಗಿ ಅಲ್ಲಿಂದಲೇ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದು. ಮದನ್ ಲಾಲ್ ಧಿಂಗ್ರಾ ಮೂಲಕ ಕರ್ಜನ್ ಹತ್ಯೆ ಮಾಡಿಸಿದ್ದು. ಅವರ ಜೀವನ ಸಾಹಸಗಳ ಸರಮಾಲೆಯಾಗಿದ್ದು, ಅದನ್ನು ಪುಟ್ಟ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ.
ಈ ಘಟನೆಗಳೆಲ್ಲಾ ಆದ ನಂತರ 2ನೇ ಹಂತದದಲ್ಲಿ ಅವರು ಎದುರಿಸಿದ್ದು ಯಾತನೆಗಳ ಸರಮಾಲೆ. ಅವರನ್ನು ಎಸ್ ಎಸ್ ಮೌರ್ಯ ಹಡಗಿನ ಮೂಲಕ ಭಾರತಕ್ಕೆ ಕರೆತಂದಿದ್ದು. ಭಾರತದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು. ಅವರನ್ನು ಕಾಲಾಪಾನಿಗೆ ಕರೆದುಕೊಂಡು ಹೋಗಿ, ನಿರಂತರವಾದ ಶಿಕ್ಷೆ ಅಂದರೆ Solitary Confinementಗೆ ಒಳಪಡಿಸಿದ್ದು. ಅವರಿಗೆ ಪ್ರತಿನಿತ್ಯ ಕೊಡ್ತಿದ್ದ ಯಾತನಾಮಯ ಕಷ್ಟಗಳನ್ನ ಹೇಳಲು ನನಗೆ ಸಾಧ್ಯವಾಗಿದೆ. ಜೊತೆಗೆ ಇತರೆ ಎಲ್ಲ ರಾಜಕೀಯ ಕೈದಿಗಳಿಗೆ ಸೌಲಭ್ಯಗಳು ನೀಡಲಾಗುತ್ತಿದ್ದ ಸೌಕರ್ಯಗಳನ್ನು ಇವರಿಗೆ ನಿರಾಕರಿಸಿದ್ದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.
ಸಾವರ್ಕರ್‌ರ ಜೀವನದ 3ನೇ ಹಂತ ಅಂದರೆ ಈ ಎಲ್ಲ ಶಿಕ್ಷೆಗಳ ನಂತರ ನಡೆದ ಅವಮಾನಗಳ ಸರಮಾಲೆಯ ಹಂತ. ಇದು ಬ್ರಿಟಿಷರು ಅವರಿಗೆ ಮಾಡಿದ ಅವಮಾನ ಅಲ್ಲ. ಭಾರತೀಯರೇ ಮಾಡಿದ ಅವಮಾನವೇ ಹೆಚ್ಚು. ಸ್ವಾತಂತ್ರ್ಯ ಬಂದ ನಂತರವೂ, ಬದುಕಿರುವವರೆಗೂ ಕಷ್ಟ ನೀಡಿದ್ದು, ಗಾಂಧಿ ಹತ್ಯೆ ಆರೋಪಿ ಎಂದು ಕಟಕಟೆಯಲ್ಲಿ ನಿಲ್ಲಿಸಿ ಒಂದು ವರ್ಷಗಳ ಕಾಲ ಜೈಲಿಗೆ ಹಾಕಿದ್ದು.. ಹೀಗೆ ನಾನಾ ಸಂಕಷ್ಟಗಳನ್ನು ಎದುರಿಸಿದರು. ಇಷ್ಟು ಸಾಲದು ಎಂಬಂತೆ ಅವರು ತೀರಿಕೊಂಡ ನಂತರವೂ ಅವರಿಗೆ ಅವಮಾನ ಮಾಡಲಾಗಿದೆ.
ಇದೆಲ್ಲಾ ಮುಗಿದ ಹೋದ ನಂತರ ಇತ್ತೀಚಿಗಷ್ಟೇ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಾವರ್ಕರ್ ಕುರಿತು ಅವಮಾನ ಮಾಡಿದ್ದಾರೆ. ಇದರಿಂದ ಸಮಾಜಕ್ಕೆ ಸತ್ಯ ಘಟನೆಯನ್ನು ಮತ್ತೆ ಮತ್ತೆ ಮುಟ್ಟಿಸುವ ಪ್ರಯತ್ನ ಮಾಡಬೇಕು ಎಂಬ ಉದ್ದೇಶದಿಂದ ಈ ಪುಸ್ತಕವನ್ನು ಹೊರತರಲಾಗಿದೆ.

ಪ್ರಶ್ನೆ : ಕಾಂಗ್ರೆಸ್ ಹಾಗು ಬಿಜೆಪಿ ಸಾವರ್ಕರ್‌ರ ಹೆಸರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ. ಈ ಗೊಂದಲದ ನಡುವೆ ಪುಸ್ತಕ ಬರ್ತಿರೋದು ಸೂಕ್ತವೇ?
ಚಕ್ರವರ್ತಿ:
ನಾನು ರಾಜಕೀಯ ಸೋಂಕಿನಿಂದ ಪೀಡಿತನಾದವನಲ್ಲ. ನನಗೆ ಸಾವರ್ಕರ್ ಅಷ್ಟೇ ಮುಖ್ಯ. ರಾಜಕೀಯಕ್ಕಾಗಿ ಸಾವರ್ಕರ್‌ರನ್ನು ಕೆಟ್ಟ ಪದಗಳಲ್ಲಿ ನಿಂದಿಸುವಾಗ, ಸಾವರ್ಕರ್‌ರನ್ನು ವೀರರೇ ಅಲ್ಲ ಅಂತ ಹೇಳುವಾಗ ಸುಮ್ಮನಿರಲು ಆಗಲ್ಲ. ಈ ಪುಸ್ತಕದಲ್ಲಿ ಯಾವುದೇ ರಾಜಕೀಯವಿಲ್ಲ, ಯಾವುದೇ ರಾಜಕೀಯ ನಾಯಕರ ಚಿತ್ರಗಳಿಲ್ಲ, ಯಾವುದೇ ರಾಜಕೀಯ ನಾಯಕರ ಜೀವನದ ಬಗ್ಗೆ ಬರೆದಿಲ್ಲ, ಯಾವುದೇ ಪಾರ್ಟಿಯ ಬಗ್ಗೆಯೂ ಬರೆದಿಲ್ಲ. ಆದ್ರೆ, ಒಂದಂತೂ ಸತ್ಯ, ಸಾವರ್ಕರ್‌ರನ್ನು ಬೈದಾಗಲೆಲ್ಲಾ ರಾಷ್ಟ್ರಭಕ್ತ ಸಮೂಹವಾಗಿ ನಾವು ಅದಕ್ಕೆ ಪ್ರತಿಕ್ರಿಯೆ ಕೊಡಬಾರದು ಅನ್ನೋದಾಗಲಿ ಅಥವ ಸಾವರ್ಕರ್‌ರನ್ನು ವೀರರೇ ಅಂತ ನಾವು ಹೇಳೋದಕ್ಕೆ ಪ್ರಯತ್ನ ಪಟ್ಟಾಗ ನಮ್ಮನ್ನು ರಾಜಕೀಯ ಪಾರ್ಟಿಯವರು ಅಂತ ಹೇಳಿದ್ರೆ ನಾವು ಜವಾಬ್ದಾರರಲ್ಲ. ನಾವು ರಾಜಕೀಯದವರು ಅಂತ ನಾವಂತೂ ಭಾವಿಸೋದಿಲ್ಲ. ಸಮಾಜದವರು ಖಂಡಿತಾ ಈ ರೀತಿ ಹೇಳೋದಿಲ್ಲ, ಆದರೆ ಈ ರೀತಿ ಕೆಲವರು ಸಾವಿರ ಬಾರಿ ಹೇಳಿದ ನಂತರವೂ ಕೂಡ ಮಹಾಪುರುಷರಿಗೆ ಅವಮಾನವಾಗೋವಾಗ ಅದನ್ನು ನೋಡಿಕೊಂಡು ನಿಲ್ಲುವಂತೆ ಜನಾಂಗ ನಮ್ಮದಲ್ಲ. ಈ ಉದ್ದೇಶದಿಂದಲೇ ಪುಸ್ತಕದ ಈ ಪ್ರಯತ್ನ ಮಾಡಲಾಗಿದೆ.

ಪ್ರಶ್ನೆ : ಎಷ್ಟು ಪುಸ್ತಕಗಳು ಪ್ರಿಂಟ್ ಆಗಿದೆ? ಯಾಕೆ ಪುಸ್ತಕದ ಬೆಲೆ 6 ರೂಪಾಯಿ? ಉಚಿತವಾಗಿ ಕೊಡ್ತೀರಾ?
ಚಕ್ರವರ್ತಿ:
ನಾವು ಒಂದು ಪುಸ್ತಕವನ್ನೂ ಕೂಡ ಉಚಿತವಾಗಿ ಕೊಡೋದಿಲ್ಲ. ಯಾಕಂದ್ರೆ ಈ ಪುಸ್ತಕವನ್ನು 5 ರೂಪಾಯಿಗೆ ಕೊಡಲು ನಿರ್ಧಾರ ಮಾಡಲಾಗಿತ್ತು, 10 ಸಾವಿರ ಪುಸ್ತಕಗಳ ಮೇಲೆ 5 ರೂಪಾಯಿಯಂತಲೇ ನಮೂದಾಗಿದೆ ಕೂಡ. ಆದ್ರೆ ಪ್ರಿಂಟಿಂಗ್ ದರ ಹಾಗು ಪೇಪರ್ ದರ ಹೆಚ್ಚಾಗ್ತಾ ಹೋಯ್ತು. ನಾವು ಕೇವಲ 10 ಸಾವಿರ ಪುಸ್ತಕಗಳನ್ನು ತಲುಪಿಸಬೇಕು ಅಂದುಕೊಂಡಿದ್ದೆವು. ಆದ್ರೆ ಜನರ ಪ್ರತಿಕ್ರಿಯೆ ನೋಡಿದ್ರೆ ಈಗಾಗಲೇ 1 ಲಕ್ಷ ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಇದರಲ್ಲಿ ಒಂದು ರೂಪಾಯಿ ಅಲ್ಲ ಒಂದು ಪೈಸೆ ಕೂಡ ಲಾಭ ಅಂತ ಉಳಿದಿಲ್ಲ. ಒಂದೂ ಪುಸ್ತಕವನ್ನೂ ಕೂಡ ಯಾರಿಗೂ ಉಚಿತವಾಗಿ ಕೊಡೋದಿಲ್ಲ. ಯಾರು ಬೇಕಾದ್ರೂ ಈ ಪುಸ್ತಕವನ್ನು ಮುದ್ರಿಸಿಕೊಳ್ಳಬಹುದಾಗಿದ್ದು, ರಾಯಲ್ಟಿ ಅಂದ್ರೆ ಗೌರವಧನ ಕೊಡಬೇಕಾಗಿಲ್ಲ. ಕೆಲ ದಿನಗಳಲ್ಲಿ ಪುಸ್ತಕದ ಪಿಡಿಎಫ್ ಜನರಿಗೆ ಕೊಡಲಾಗುತ್ತೆ, ಯಾರು ಎಷ್ಟು ಬೇಕಾದ್ರೂ ಪ್ರಿಂಟ್ ಮಾಡಿಕೊಳ್ಳಬಹುದು. ಒಟ್ಟಾರೆ, ಸಾವರ್ಕರ್ ಕುರಿತ ಸತ್ಯವನ್ನು ಜನರಿಗೆ ಮುಟ್ಟಿಸಬೇಕು ಅನ್ನೋದು ನಮ್ಮ ಉದ್ದೇಶ. ಸಾವರ್ಕರ್ ಮೇಲೆ ಮಾಡಲಾಗಿರೋ ಆರೋಪಗಳು ಎಷ್ಟು ಸುಳ್ಳು ಅಂತ ಪುಸ್ತಕ ಓದಿದ ನಂತರ ತಿಳಿಯಲಿದೆ.

ಪ್ರಶ್ನೆ: ಗಣೇಶನ ಹಬ್ಬದ ಸಂದರ್ಭದಲ್ಲಿ ಸಾವರ್ಕರ್ ಚಿತ್ರವನ್ನೂ ಇಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಚಕ್ರವರ್ತಿ:
ನನಗೆ ಇದು ಬಹಳ ಹೆಮ್ಮೆ ಅನಿಸುತ್ತೆ. ಯುವಾಬ್ರಿಗೇಡ್ ಕಾರ್ಯಕರ್ತರು ಇದನ್ನು ಆರಂಭ ಮಾಡಿದ್ದು ನಿಜ. ಆದರೆ ನಾನಾಗಲಿ, ನಮ್ಮ ಕಾರ್ಯಕರ್ತರಾಗಲಿ ಯಾರನ್ನೂ ಒತ್ತಾಯ ಮಾಡಿಲ್ಲ. ನಾನು ಪುಸ್ತಕದ ಮೇಲೆ ನನ್ನ ಹೆಸರನ್ನೂ ಹಾಕಬಾರದು ಅಂತ ನಿರ್ಧರಿಸಿದ್ದೆ. ಆದ್ರೆ ಹೆಸರು ಹಾಕದಿದ್ರೆ ತಪ್ಪಾಗುತ್ತೆ ಅಂತ ಮುದ್ರಿಸಿದ್ದು. ಮತ್ತೊಂದು ಗಮನಿಸಬೇಕಾದ ಅಂಶ ಅಂದ್ರೆ, ಸಾರ್ವಜನಿಕವಾಗಿ ಇಡೀ ಸಮಾಜ ಈ ಹೋರಾಟಕ್ಕೆ ಕೈ ಹಾಕಿರೋದು ನಂಗೆ ತುಂಬಾ ಖುಷಿ ತಂದಿದೆ. ನನಗೆ ಮೊದಲು ತುಂಬಾ ಭಯವಿತ್ತು, ಪೆಂಡಾಲ್‌ಗಳಿಗೆ ನಾವು ಭೇಟಿ ನೀಡಬೇಕಾಗುತ್ತದಾ ಅಂತ. ಆದರೆ ಈಗ ಪೆಂಡಾಲುಗಳೇ ನಮ್ಮನ್ನು ಭೇಟಿಯಾಗ್ತಿವೆ. ಯಾವ ಪೆಂಡಾಲುಗಳು ಬೇಕೋ ಆ ಪೆಂಡಾಲುಗಳಿಗೆ ಹೈ ರೆಸಲ್ಯೂಶನ್‌ನಲ್ಲಿರೋ ಸಾವರ್ಕರ್‌ರ ಫೋಟೊಗಳನ್ನು, ಜೀವನ ಚಿತ್ರ ಇರೋ ಪ್ರದರ್ಶನೀಯ ಚಿತ್ರಗಳನ್ನು ಎಲ್ಲವನ್ನೂ ನಾವು ಡಿಸೈನ್ ಮಾಡ್ತಿದ್ದೇವೆ. ಅದಾದ ನಂತರ ಡ್ರೈವ್‌ನಲ್ಲಿ ಹಾಕಿಕೊಡ್ತೇವೆ. ಯಾರು ಬೇಕಾದ್ರೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ| Savarkar Photo | ಸಾವರ್ಕರ್‌ ಗಣೇಶೋತ್ಸವ: ರಾಜ್ಯದೆಲ್ಲೆಡೆ ಹಬ್ಬುತ್ತಿದೆ ಕಾವು

Exit mobile version