ಬೆಂಗಳೂರು: ರಾಜ್ಯ ಸರ್ಕಾರವನ್ನು ಹಿಟ್ಲರ್ ಆಡಳಿತ ಅಂದರೆ ಜೈಲು ಗ್ಯಾರಂಟಿ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. “ನನ್ನನ್ನು ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಮ್ಮ ಹೋರಾಟವನ್ನು ನಾವು ಮಾಡುತ್ತೇವೆ. ಮಂತ್ರಿ ಆದವರಿಗೆ ವಿಷಯ, ವಸ್ತುವಿನ ಆಳವೇ ಗೊತ್ತಿಲ್ಲ. ಇದು ರಾಜ್ಯದ ದುರದೃಷ್ಟಕರ ಸಂಗತಿ, ಇವರಿಗೆ ರೌಡಿಸಂ ಬಿಟ್ಟರೆ ಬೇರೇನೂ ಗೊತ್ತಿಲ್ಲ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಮೊದಲು ನೀವೇನು ಗ್ಯಾರಂಟಿ ಯೋಜನೆಗಳನ್ನು ಹೇಳಿದ್ದೀರೋ ಅದನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡಿ. ನೀವೇನು ಭಯ ಪಡಿಸಲು ಮುಂದಾಗಿದ್ದೀರೋ ಅದನ್ನು ಎದುರಿಸುವುದು ನಮಗೆ ಗೊತ್ತಿದೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Weather report: ಗಳಿಗೆಗೊಂದು ವಾತಾವರಣ; ಏರಲಿದೆ ತಾಪಮಾನ, ಇರಲಿದೆ ಗುಡುಗು ಮಳೆ
ನಾನು ಹೇಳಿದ ಹಿಟ್ಲರ್ ಸರ್ಕಾರ ಎಂಬ ಹೇಳಿಕೆಯನ್ನು ಎಂ.ಬಿ. ಪಾಟೀಲ್ ಪ್ರೂವ್ ಮಾಡುತ್ತಿದ್ದಾರೆ. ಹಿಟ್ಲರ್ ತಾನು ಏನು ಹೇಳುತ್ತಿದ್ದನೋ, ಏನು ಮಾಡುತ್ತಿದ್ದನೋ ಅದು ಮಾತ್ರ ಸತ್ಯ ಎಂಬುದಾಗಿ ಹೇಳುತ್ತಿದ್ದ. ಇವತ್ತಿನ ಸರ್ಕಾರವನ್ನು ನೋಡಿದರೆ ನನಗೆ ಹಾಗೆಯೇ ಅನ್ನಿಸುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಚಾಲೆಂಜ್; ಏನಿದೆ ವಿಡಿಯೊದಲ್ಲಿ?
ಇಂದು ಈ ಸರ್ಕಾರ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ನನಗೆ ಹಿಟ್ಲರ್ ಸರ್ಕಾರದಂತೆಯೇ ಅನ್ನಿಸುತ್ತದೆ. ಯಾಕೆಂದರೆ ಮೈಸೂರಿನಲ್ಲಿ ನಡೆಯಬೇಕಿದ್ದ ಒಂದು ಕಾರ್ಯಕ್ರಮವನ್ನೂ ಆಗುವುದಕ್ಕೆ ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಯಾಕೆಂದರೆ ಸಾವರ್ಕರ್ ಪ್ರತಿಷ್ಠಾನದಿಂದ ಮೈಸೂರಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ನಾನು, ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ವಿಕ್ರಂ ಸಂಪತ್ ಇದ್ದೆವು ಎಂಬ ಕಾರಣಕ್ಕೆ ತಡೆಯೊಡ್ಡಲು ನೋಡಿದರು. ಇನ್ನೊಂದು ವಾದವನ್ನು ಕೇಳಲು ಸಿದ್ಧವಿಲ್ಲದ ಈ ಸರ್ಕಾರ ಹಿಟ್ಲರ್ ಸರ್ಕಾರ ಅಲ್ಲದೆ ಇನ್ನೇನು? ಜೈಲಿಗೆ ಕಳಿಸುತ್ತೇವೆ ಅಂದರೆ ನಿಮ್ಮನ್ನು ಯಾರೂ ಪ್ರಶ್ನೆ ಮಾಡಬಾರದಾ? ಇದೆ ರೀತಿಯ ಬೆದರಿಕೆ ಒಡ್ಡುವ ಕೆಲಸ ಈಗಾಗಲೇ ಎಲ್ಲ ಕಡೆ ಮಾಡಲಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇದನ್ನೂ ಓದಿ: Elephant Attack: ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಆನೆ, ಮರಿಯಾನೆ; ವಾಹನ ಸವಾರರಿಗೆ ಗಂಟೆಗಟ್ಟಲೇ ತಲೆಬೇನೆ!
ಎಂ.ಬಿ. ಪಾಟೀಲ್ ಹೇಳಿದ್ದೇನು?
ಭಾನುವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಂ.ಬಿ. ಪಾಟೀಲ್, ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನು ಮಾಡಿದ್ದಾರೆ ಎಂಬುದನ್ನು ಕೇಳಿ. ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದಾರೆ. ಸೂಲಿಬೆಲೆ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಎಂದು ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಕಂಬಿಯೇ ಗತಿ ಎಂದು ಎಚ್ಚರಿಕೆ ನೀಡಿದ್ದರು.