Site icon Vistara News

Chakravarti Sulibele: ಎಂ.ಬಿ. ಪಾಟೀಲರದ್ದು ರೌಡಿ ಭಾಷೆ: ಒಬ್ಬ ʼಭಿಕಾರಿʼಯನ್ನು ಕಂಡರೆ ಭಯವೇಕೆ ಎಂದ ಚಕ್ರವರ್ತಿ ಸೂಲಿಬೆಲೆ

Chakravarti sulibele interview

ಬೆಂಗಳೂರು: ಬಾಲಬಿಚ್ಚಿದರೆ ಒದ್ದು ಒಳಗೆ ಹಾಕುತ್ತೇವೆ ಎಂಬ ಸಚಿವ ಎಂ.ಬಿ. ಪಾಟೀಲರದ್ದು ರೌಡಿಗಳ ಮಾತಿನಂತೆ ಕೇಳುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ. ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಚಕ್ರವರ್ತಿ ಸೂಲಿಬೆಲೆ, ಆ ಸರ್ಕಾರ ಬಹಳ ನೀರಸವಾಗಿತ್ತು. ಬಿಜೆಪಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಾಮಾನ್ಯ ಜನರಿಗೂ ಕಾಣುತ್ತಿತ್ತು. ಹಿಮಾಚಲದಲ್ಲೂ ಇದೇ ರೀತಿಯ ವಾತಾವರಣ ಕಾಣುತ್ತಿದೆ. ಒಂದು ಪ್ರಬಲ ಸ್ಥಳೀಯ ನಾಯಕತ್ವ ಇಲ್ಲದಿದ್ದಾಗ ನರೇಂದ್ರ ಮೋದಿಯವರ ವರ್ಚಸ್ಸು ಕೆಲಸ ಮಾಡಲು ಆಗುವುದಿಲ್ಲ ಎನ್ನುವುದು ಸತ್ಯ. ಸ್ಥಳೀಯ ನಾಯಕತ್ವ ಬೆಳೆಸುವ ಹೊಣೆ ನರೇಂದ್ರ ಮೋದಿ ಹಾಗೂ ಅವರ ಸುತ್ತಮುತ್ತ ಇರುವವರೂ ಹೊಣೆ. ಆದರೆ ಸ್ಥಳೀಯ ಜಾತಿ ರಾಜಕಾರಣವನ್ನು ಮ್ಯಾನೇಜ್‌ ಮಾಡುವಲ್ಲಿ ಬಿಜೆಪಿ ಸೋತಿದೆ ಎನ್ನಿಸುತ್ತಿದೆ ಎಂದರು.

ಇಷ್ಟೊಂದು ಕೆಟ್ಟ ಸರ್ಕಾರ ನೋಡಿದ ನಂತರವೂ ಜನರು ಬಿಜೆಪಿಗೆ ಓಟ್‌ ಹಾಕುತ್ತಾರೆಯೇ ಎಂಬ ಕುರಿತು ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಈ ರೀತಿಯ ಸರ್ಕಾರವನ್ನು ನೋಡಿದ ಮೇಲೆಯೇ ಮೋದಿ 2.0 ಬೇಗ ಶುರು ಮಾಡಬೇಕು ಎನ್ನಿಸುತ್ತಿದೆ. 72 ವರ್ಷದ ನರೇಂದ್ರ ಮೋದಿಯವರನ್ನು ಕೊನೆಯ ದಿನಗಳಲ್ಲಿ ಇವರು ಬಳಸಿಕೊಂಡಿದ್ದನ್ನು ನೋಡಿ ಬೇಸರವಾಯಿತು. 12 ತಿಂಗಳು ಮೋದಿ 2.0 ಕೆಲಸ ಆರಂಭಿಸಿದ್ದೇವೆ. ಕೇವಲ ಪೂರ್ವಭಾವಿ ಬೈಠಕ್ಕಿಗೇ ಸುಮಾರು 300 ಜನರು ಆಗಮಿಸಿದ್ದರು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ತುಡಿತಕ್ಕೆ ನಾವು ಕೆಲಸ ಮಾಡುತ್ತೇವೆ ಎಂದರು.

ಒಂದೆಡೆ ಬಿಜೆಪಿ ರಾಷ್ಟ್ರೀಯತೆ ಬಗ್ಗೆ ಮಾತನಾಡಿದರೆ ರಾಜ್ಯದಲ್ಲಿ ಬಿಜೆಪಿ ಜಾತಿ ವಿಚಾರವನ್ನು ಪ್ರಸ್ತಾಪಿಸುತ್ತದೆ ಎಂಬ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕದ ರಾಜಕಾರಣದಲ್ಲಿ ಯಾವೆಲ್ಲ ಕೊರತೆಗಳಿಯೋ ಅದೆಲ್ಲವೂ ನರೇಂದ್ರ ಮೋದಿಯವರಲ್ಲಿ ಪ್ಲಸ್‌ ಆಗಿವೆ. ಜಾತಿ ರಾಜಕಾರಣ ಇಲ್ಲ, ಅಭಿವೃದ್ಧಿ ಅಜೆಂಡಾ ಇದೆ, ನಾಯಕತ್ವ ಇದೆ.

2014ರಲ್ಲಿ ಪಡೆದದ್ದಕ್ಕಿಂತಲೂ ಹೆಚ್ಚು ಸ್ಥಾನ 2019ರಲ್ಲಿ ಗೆದ್ದಿದ್ದೇವೆ. ಒಂದೆರಡು ಸ್ಥಾನ ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲೂ ಶೇ. 50 ದಾಟಿದ್ದೇವೆ. ಈಗ ನರೇಂದ್ರ ಮೋದಿ ಹವಾ ರಾಜ್ಯದಲ್ಲಿ ಹೆಚ್ಚು ಆಳಕ್ಕೆ ಇಳಿದಿದೆ. ಅದರಲ್ಲೂ, ಮೋದಿ ವಿರುದ್ಧ 14 ಜನರು ಕೈಕೈ ಹಿಡಿದು ನಿಂತಿರುವುದನ್ನು ನೋಡಿದರೆ ಮೋದಿ ಬಗ್ಗೆ ಜನರಿಗೆ ಮತ್ತಷ್ಟು ವಿಶ್ವಾಸ ಬರುತ್ತದೆ ಎಂದರು.

ಮಣಿಪುರ ಪರಿಸ್ಥಿತಿ
ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶಗಳ ಕಾರಣಕ್ಕೆ ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡಲು ಸಾಧ್ಯವಾಗದ ಬಗ್ಗೆ ಪ್ರತಿಕ್ರಿಯಿಸಿ, ಬುಡಕಟ್ಟುಗಳ ನಡುವೆ ಕಾದಾಟ ಬಹಳ ಸಂಕೀರ್ಣವಾಗಿದೆ. ಅದರಲ್ಲೂ ಬೇರೆ ರಾಜ್ಯಗಳ ನೆರವು ಪಡೆಯುವ ವಿಚಾರವೂ ಇರುವುದರಿಂದ ಮಣಿಪುರದಲ್ಲಿ ಸಾಧ್ಯವಾಗಿಲ್ಲ. ಹಾಗಾಗಿ ಅಸ್ಸಾಂನಷ್ಟು ಸುಲಭವಾಗಿ ಮಣಿಪುರದಲ್ಲಿ ಮಟ್ಟಹಾಕಲು ಸಾಧ್ಯವಾಗಿಲ್ಲ ಎಂದರು.

40% ಸರ್ಕಾರ ಎಂದು ಸಾಬೀತುಪಡಿಸಲಿ
ತಾವಾಗಿಯೇ 40% ಸರ್ಕಾರ ಎಂದು ಆರೋಪಿಸಿದ್ದ ಎಂ.ಬಿ. ಪಾಟೀಲರು ಆ ಆರೋಪವನ್ನು ಸಾಬೀತುಪಡಿಸಬೇಕು ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ಬಿಜೆಪಿಯಲ್ಲಿ ತಪ್ಪು ಮಾಡಿದವರು ಇದ್ದಾರೆ ಎಂದರೆ ಎಲ್ಲ ಪ್ರಕರಣಗಳಲ್ಲೂ ತನಿಖೆ ನಡೆಸಿ ತಪ್ಪಿತಸ್ಥರನ್ನು ಹೊರತನ್ನಿ. ಇಲ್ಲದಿದ್ದರೆ ನೀವೂ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡಿದ್ದೀರಿ ಅಥವಾ ಸುಳ್ಳು ಹೇಳಿದ್ದೇವೆ ಎನ್ನಿಸುತ್ತದೆ ಎಂದರು.

ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ಕಿತ್ತು ಬಿಸಾಕಿದ್ದೇವೆ ಎನ್ನುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಅವರು ಚಕ್ರವರ್ತಿ ಸೂಲಿಬೆಲೆ ಪಾಠ ಕಿತ್ತೊಗೆದಿದ್ದೇವೆ ಎನ್ನುತ್ತಿದ್ದಾರೆ. ನನ್ನ ಕುರಿತು ಇವರಿಗೆ ಭಯ ಏಕೆ? ನಾನೊಬ್ಬ ಭಿಕಾರಿ, ನನ್ನ ಜತೆಗೆ ಮೂರ್ನಾಲ್ಕು ಜನರಿರುತ್ತಾರೆ. ಬಾಲ ಬಿಚ್ಚಿದರೆ ಒಳಗೆ ಹಾಕುತ್ತೇವೆ ಎಂದು ಎಂ.ಬಿ. ಪಾಟೀಲರು ಹೇಳಿದ್ದರು. ಅವರೊಬ್ಬ ಸಚಿವರಿಗಿಂತಲೂ ಒಬ್ಬ ರೌಡಿಯ ರೀತಿ ಕಂಡರು. ಸತ್ಯ ಹೇಳುವವರನ್ನು ಕಂಡರೆ ಇವರಿಗೆ ಭಯ ಎನ್ನುವುದು ಇದರಿಂದ ಸಾಬೀತಾಗುತ್ತದೆ.

ಭಗತ್‌ ಸಿಂಗ್‌, ರಾಜಗುರು ಅವರ ಕುರಿತು ಬೇರೆಯವರ ಪಾಠ ಸೇರಿಸುವ ಕಾರಣ ಏನು? ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿ, ಪಾಠವನ್ನು ಯಾವ ಕಾರಣಕ್ಕೆ ಸೇರಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಹಾಗಾಗಿ ಪಠ್ಯಪುಸ್ತಕ ವಿವಾದವಾದಾಗ ನಾನು ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದರು.

ಇದನ್ನೂ ಓದಿ: Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ

ಪಠ್ಯಪುಸ್ತಕದಲ್ಲಿ ರಾಜಕೀಯ ಬೇಡ
ಕೇಂದ್ರ ಸರ್ಕಾರ ಆಮೂಲಾಗ್ರವಾಗಿ ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಕೈ ಹಾಕಿದ್ದರೆ, ಇಲ್ಲಿ ಕರ್ನಾಟಕದಲ್ಲಿ ಕೇವಲ ಪಠ್ಯದ ಸುತ್ತಮುತ್ತ ಚರ್ಚೆ ಮಾಡುವುದು ಏತಕ್ಕೆ ಎಂಬ ಕುರಿತು ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ ರೀತಿ ಪಠ್ಯಪುಸ್ತಕಗಳು ಇರಬೇಕು. ಅದು ಜಾತೀಯತೆಯನ್ನು ಬಿಂಬಿಸುವ ಕೆಲಸ ಆಗಬಾರದು. ಆದರೆ ಪಠ್ಯವನ್ನು, ನಮ್ಮದೇನನ್ನೋ ಹೇಳುವುದಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಆದರೆ ಜನರು ಹಾಗೂ ಶಿಕ್ಷಕರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದು ಸಮಾಧಾನದ ಸಂಗತಿ. ಬಿಜೆಪಿಯವರು ಅಧಿಕಾರದ ಕೊನೆಯ ಸಮಯದಲ್ಲಿ ಪಠ್ಯಪುಸ್ತಕ ಬದಲಾವಣೆಗೆ ಬಿಜೆಪಿ ಕೈ ಹಾಕಿತ್ತು. ಆದರೆ ಕಾಂಗ್ರೆಸ್‌ ಪ್ರಾರಂಭದಲ್ಲೇ ಪಠ್ಯಪುಸ್ತಕಕ್ಕೆ ಕೈ ಹಾಕಿದೆ. ಪಠ್ಯಪುಸ್ತಕಕ್ಕೆ, ಬಂದ ಸರ್ಕಾರಗಳೆಲ್ಲ ಕೈ ಹಾಕಬಾರದು. ಅದಕ್ಕೆ ರಾಷ್ಟ್ರಮಟ್ಟದಲ್ಲಿ ಒಂದು ನೀತಿ ಇರಬೇಕು. ಇದರಲ್ಲಿ ರಾಜಕಾರಣಿಗಳು ತಲೆ ಹಾಕಿಕೊಂಡು ಕೂರಬಾರದು. ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಶಿಕ್ಷಣ ವ್ಯವಸ್ಥೆಯ ನೇತೃತ್ವವನ್ನು ಸರಿಯಾದವರು ವಹಿಸಲಿಲ್ಲ.

chakravarti sulibele and hariprakash konemane

ಸಿಲಬಸ್‌ನ ಚೌಕಟ್ಟು ರೂಪಿಸಿಕೊಡಬೇಕು. ಅದರ ಸ್ವಾತಂತ್ರ್ಯದಲ್ಲಿ ಮಕ್ಕಳು ಕಲಿಯಲು ಅವಕಾಶ ಇರಬೇಕು. ಅವರಿಗೆ ಯಾವ ಪುಸ್ತಕವನ್ನು ಓದಬೇಕು ಎಂದು ಮಕ್ಕಳು ನಿರ್ಧಾರ ಮಾಡಿದಾಗ ಸರಿಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾಂಗ್ರೆಸ್‌ಗೆ ರಾಷ್ಟ್ರೀಯ ಎನ್ನುವ ಪದವೇ ಧ್ವೇಷಕ್ಕೆ ಕಾರಣವಾಗಿದೆ. ಕಾಲಕ್ರಮೇಣದಲ್ಲಿ ರಾಷ್ಟ್ರೀಯತೆ ಎನ್ನುವುದು ಸ್ವತಂತ್ರ ಆಲೋಚನೆಯ ಜನರನ್ನು ರೂಪಿಸುತ್ತದೆ. ಇದು ಕಾಂಗ್ರೆಸ್‌ಗೆ ಬೇಕಾಗಿಲ್ಲ. ಕಾರಕೂನವರ್ಗದ ಜನರನ್ನು ಸೃಷ್ಟಿ ಮಾಡುವ ಕಾರಣಕ್ಕೇ ಕಾಂಗ್ರೆಸ್‌ಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಂಡರೆ ವಿರೋಧಿಸುತ್ತಾರೆ ಎಂದು ಹೇಳಿದರು.

Exit mobile version