ಬೆಂಗಳೂರು: ಬಿಜೆಪಿ ಕಾರ್ಯಕರ್ತರಲ್ಲಿ ಪೀತಿ ತೋರುವವರಿದ್ದಾರಾದರೂ ನಾಯಕರ ಮಟ್ಟದಲ್ಲಿ ವಿರೋಧಿಸುವವರು ಎಷ್ಟಿದ್ದಾರೆ ಎಂದರೆ ನಾನು ಪಕ್ಷವನ್ನು ಸೇರಿದ ಕೂಡಲೆ ತಲ್ಲಣ ಉಂಟಾಗುತ್ತದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ತಿಳಿಸಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.
ನೀವೇ ಏಕೆ ನಾಯಕತ್ವ ವಹಿಸಿಕೊಳ್ಳಬಾರದು?
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಕಂಡುಬರುತ್ತದೆ. ಕೆಟ್ಟ ಸೋಲು ಕಂಡಾಗ ಇಂತಹ ಸ್ಥಿತಿ ಕಾಣುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರವೂ ಹೀಗೆಯೇ ಆಗಿತ್ತು. ದೆಹಲಿಯಲ್ಲಿ ಬಿಜೆಪಿ ಸೋತಾಗಲೂ ಹೀಗೆಯೇ ಆಗಿತ್ತು. ಅರವಿಂದ ಕೇಜ್ರಿವಾಲ್ ವಿರುದ್ಧ ಇಷ್ಟು ಆರೋಪಗಳಿದ್ದಾಗಲೂ ಮೇಲೆದ್ದುಬರಲು ಇನ್ನೂ ಸಾಧ್ಯವಾಗಿಲ್ಲ. ಈ ಹೀನಾಯ ಸೋಲಿನಿಂದ ಹೊರಬರಲು ಬಿಜೆಪಿಗೆ ಕೆಲಸ ಸಮಯ ಬೇಕಾಗುತ್ತದೆ.
ಇಷ್ಟು ಪ್ರಬಲವಾದ ರಾಷ್ಟ್ರೀಯವಾದ ಮಂಡಿಸುವವರಾಗಿ ನೇರವಾಗಿ ಏಕೆ ರಾಜಕೀಯಕ್ಕೆ ಬರಬಾರದು? ಎಂಬ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ನನ್ನನ್ನು ವಿರೋಧಿಸುವ ನಾಯಕರ ಸಂಖ್ಯೆ ಬಹಳಷ್ಟಿದೆ. ನಾನು ಒಳಗೆ ಬಂದ ತಕ್ಷಣ ಪಕ್ಷವೇ ತಲ್ಲಣವಾಗುತ್ತದೆ. ಹೊರಗೆ ಮಾಡಲು ಬಹಳ ಕೆಲಸಗಳಿರುವುದರಿಂದ ಹೊರಗೆ ಇರಲು ಇಷ್ಟಪಡುತ್ತೇನೆ ಎಂದರು.
ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಆದರೆ ಅದು ಅವರ ಹಕ್ಕು ಎನ್ನುವಂತೆ ಆಗಬಾರದು. ಪ್ರೀತಿಯಿಂದ, ಸಹಜವಾದ ಪ್ರಕ್ರಿಯೆಯಾಗಿ ಕೊಡಬೇಕು. ಗ್ಯಾರಂಟಿಯಾಗಿ ಹೇಳಿದ ತಕ್ಷಣ ಸಮಾಜದ ಮನಸ್ಸನ್ನು ಹಾಳುಮಾಡುವ ಪ್ರಕ್ರಿಯೆ ಇದು. ಹಾಗಾಗಿ ಇದಕ್ಕೆ ವಿರುದ್ಧವಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ
ಬಿಜೆಪಿಯ ರಾಜಕೀಯದಲ್ಲೂ ಉಚಿತವಾಗಿ ನೀಡುವ ಘೋಷಣೆ ಮಾಡಿತ್ತು ಎಂಬ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಕಾಂಗ್ರೆಸ್‌ನವರು ಫ್ರೀಬಿಗಳನ್ನು ಘೋಷಿಸಿದ್ದರು. ನಾವು ಸ್ವಾಭಿಮಾನಿ ಕನ್ನಡಿಗರು, ಬಿಟ್ಟಿ ಭಾಗ್ಯಗಳಿಗೆ ಬಗ್ಗುವುದಿಲ್ಲ ಎಂದು ಬಿಜೆಪಿ ವಲಯದಲ್ಲಿ ಪೋಸ್ಟರ್ ಹರಿದಾಡಿತು. ನಾವು ಬಿಟ್ಟಿ ಭಾಗ್ಯಗಳಿಗೆ ಬಗ್ಗುವುದಿಲ್ಲ ಎಂದು ಅಣ್ಣಾಮಲೈ ಅವರು ಹೇಳಿದ ಮಾರನೆಯ ದಿನವೇ ಅರ್ಧ ಲೀಟರ್ ಹಾಲು ಉಚಿತ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದರು. ಅದರಲ್ಲೂ ಅತ್ಯಂತ ದುರ್ಬಲವಾದ ಫ್ರೀಬಿಗಳನ್ನು ಘೋಷಿಸಿದರು. ಫ್ರೀಬಿ ಘೋಷಿಸಿಯೂ ಘೋಷಿಸದಂತೆ ಆಯಿತು. ಹಾಗಾಗಿ ಬಿಜೆಪಿಯವರು ರಾಜಕೀಯ ನಿರ್ವಹಣೆಯಲ್ಲಿ ಸೋತರು. ಅವರು ಫ್ರೀಬಿಗಳನ್ನು ಘೋಷಿಸಿದ್ದರ ಕುರಿತೂ ನನ್ನ ವಿರೋಧವಿದೆ ಎಂದರು.