ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರು ಹೆಣ್ಣು ಕುಲಕ್ಕೇ ಕಳಂಕ ಹಚ್ಚುವ ಕೆಲಸ ಮಾಡಿದ್ದಾರೆ. ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಇದು ಖರ್ಗೆ ಕುಟುಂಬಕ್ಕೂ ಅಪಮಾನ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಲಂಚ ಮತ್ತು ಮಂಚದ ಸರ್ಕಾರ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಇಡೀ ರಾಜ್ಯದಲ್ಲಿ ಹೆಣ್ಣುಮಕ್ಕಳು ಸರ್ಕಾರಿ ಅಥವಾ ಬೇರೆ ಕೆಲಸಕ್ಕೆ ಹೋಗಬೇಕೆಂದಿದ್ದರೆ ಅವರ ಬಗ್ಗೆ ಜನ ಏನು ಮಾತನಾಡಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ʻʻಇವರಿಗೆ ಕೇವಲ ಪ್ರಚಾರದ ಗೀಳು, ದಿನವೂ ಒಂದು ಪತ್ರಿಕಾ ಹೇಳಿಕೆ ಕೊಡಬೇಕೆಂಬ ಕಾರಣ ಇಟ್ಟುಕೊಂಡು ಈ ರೀತಿ ಸಣ್ಣ ಮಟ್ಟಕ್ಕೆ ಇಳಿಯುವ ಕೆಲಸವನ್ನು ಮಾಡಿದ್ದಾರೆ. ಇದು ಕೇವಲ ಅವರಿಗಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷಕ್ಕೂ ಕಳಂಕ ತಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಬ್ಬರು ಗೌರವಾನ್ವಿತ ವ್ಯಕ್ತಿ ಎಂದು ನಾವೆಲ್ಲ ಭಾವಿಸುತ್ತೇವೆ. ಆ ಕುಟುಂಬಕ್ಕೂ ಪ್ರಿಯಾಂಕ್ ಖರ್ಗೆ ಕಳಂಕ ತಂದಿದ್ದಾರೆ. ಆ ಕುಟುಂಬವೂ ಅವರ ಮಾತುಗಳನ್ನು ಕೇಳಿ ನೊಂದುಕೊಂಡಿರಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ | ನಾನು ಹೆಣ್ಮಕ್ಕಳನ್ನು ಅಪಮಾನಿಸಿಲ್ಲ, ನಿಜವಾಗಿ ಅಪಮಾನಿಸಿದ್ದು ಬಿಜೆಪಿ, ಅದು ಕ್ಷಮೆ ಕೇಳುತ್ತಾ?: ಪ್ರಿಯಾಂಕ್ ಸವಾಲ್
ಲಂಚದ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಪ್ರಸ್ತಾಪಿಸಿ, ಮೊಟ್ಟೆ ಹಗರಣದಲ್ಲಿ ಜಯಮಾಲಾ ಅವರು ಸಿಲುಕಿದ ಕರ್ಮಕಾಂಡ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದನ್ನು ನೋಡಿದ ನಿಮ್ಮ ಉತ್ತರವೇನು ಎಂದು ಪ್ರಿಯಾಂಕ್ ಅವರನ್ನು ಪ್ರಶ್ನಿಸಿದರು. ವಿಜಯ ಬ್ಯಾಂಕಿನಲ್ಲಿ ಹಣ ಹೂಡಿದರೆ ಮಾತ್ರ ಕೆಲಸ ಆಗುತ್ತದೆ ಎಂದು ನಿಮ್ಮ ಅಧಿಕಾರಾವಧಿಯಲ್ಲಿ ಬಂದಿತ್ತಲ್ಲವೇ? ಯಾರ ಪ್ರಕರಣವದು? ಮಾನ್ಯ ಆಂಜನೇಯನವರ ಹೆಸರು ಹೇಳಿ ವಿಜಯ ಬ್ಯಾಂಕ್ ಎನ್ನುತ್ತಿದ್ದರಲ್ಲವೇ? ಅವರ ಮನೆಯಲ್ಲಿ ಹಣ ಸಿಕ್ಕಿತ್ತಲ್ಲವೇ? ಅದನ್ನು ಹೇಗೆ ಮುಚ್ಚಿ ಹಾಕಿದಿರಿ? ಇದು ಲಂಚಾವತಾರದ ಮಾತುಗಳಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಇದೇ ವಿಧಾನಸೌಧದಲ್ಲಿ ಪುಟ್ಟರಂಗಶೆಟ್ಟಿಯವರ ಕಚೇರಿಯಲ್ಲಿ ಹಣ ಸಿಕ್ಕಿತ್ತಲ್ಲವೇ? ಅಲ್ಲಿಂದ ಅವರು ತಪ್ಪಿಸಿಕೊಂಡು ಹೋಗಿ ನೀವೆಲ್ಲ ಸೇರಿ ಅವರನ್ನು ಕಾಪಾಡಿದಿರಲ್ಲವೇ? ಇದು ಹಗರಣವಲ್ಲವೇ?, ಲೋಕಾಯುಕ್ತದಲ್ಲಿ ನಿಮ್ಮ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ 50 ಪ್ರಕರಣಗಳು ಇವತ್ತು ಕೂಡ ಇವೆ. ಅದೆಲ್ಲ ಲಂಚದ ಅವತಾರವಲ್ಲವೇ ಎಂದು ಟೀಕಿಸಿದರು.
ಮಂಚದ ವಿಚಾರ ಪ್ರಸ್ತಾಪಿಸಿ, ನಿಮ್ಮ ರಾಷ್ಟ್ರೀಯ ನಾಯಕ ವೇಣುಗೋಪಾಲ್ ಅವರ ಮೇಲೆ ಎಷ್ಟು ಕೇಸುಗಳಿವೆ ಅದರದು? ಇದಕ್ಕೆ ನಿಮ್ಮ ಉತ್ತರವೇನು? ಇಲ್ಲೂ ಕೂಡ ಕಾಂಗ್ರೆಸ್ ಕಚೇರಿಗೆ ಅವರು ಬಂದಾಗ ಅವರಿಂದ ದೂರ ಇರಿ ಎಂಬ ಮಾತುಗಳನ್ನಾಡಿದ್ದು ನಾವೆಲ್ಲರೂ ಕೇಳಿಲ್ಲವೇ? ಅಷ್ಟೇ ಯಾಕೆ ಮಾನ್ಯ ಮೇಟಿಯವರ ಕಥೆ ಏನಾಯಿತು? ಇದಕ್ಕೆಲ್ಲ ಪ್ರಿಯಾಂಕ್ ಖರ್ಗೆ ಅವರ ಬಳಿ ಉತ್ತರವಿದೆಯೇ ಎಂದು ವ್ಯಂಗ್ಯವಾಡಿದರು.
ಕೇವಲ ನಿಮ್ಮ ಮಾತಿನ ಚಟಕ್ಕೆ ಬಿಜೆಪಿ ಸರ್ಕಾರವನ್ನು ನೀವು ಮೂದಲಿಸುವುದು ಸರಿಯೇ? ಎಂದ ಅವರು, ಜನರು ನೀವು ಆಡಳಿತ ಮಾಡುವ ಸಂದರ್ಭದಲ್ಲಿ ನಿಮಗೆ ಆಡಿದ ಮಾತುಗಳನ್ನು ತಿರುಚಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಪ್ರಾರಂಭಿಸಿದ್ದೀರಿ. ಪ್ರಬುದ್ಧತೆ ಇದ್ದರೆ ಪ್ರಿಯಾಂಕ್ ಖರ್ಗೆ ಇಂಥ ಮಾತುಗಳನ್ನು ಆಡುತ್ತಿರಲಿಲ್ಲ. ನೀವು ರಾಜಕಾರಣಕ್ಕೆ ಹೊಸಬರು. ಆಗಲೇ ಹಿರಿಯ ರಾಜಕಾರಣಿಗಳಂತೆ ಮಾತನಾಡಿ ಸಿಕ್ಕಿಹಾಕಿಕೊಳ್ಳುತ್ತಿದ್ದೀರಿ ಎಂದ ಅವರು, ಪ್ರಿಯಾಂಕ್ ಖರ್ಗೆ ತಕ್ಷಣ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದವರು ನಿನ್ನೆ- ಮೊನ್ನೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಬಿಜೆಪಿ ಬಾವುಟವನ್ನು ಎಲ್ಲೂ ಪ್ರದರ್ಶಿಸಿಲ್ಲ. ನಾವು ಮನೆಮನೆಗೆ ರಾಷ್ಟ್ರಧ್ವಜವನ್ನು ಕೊಟ್ಟಿದ್ದೇವೆ. ಜನರು ಪಾದಯಾತ್ರೆ ಮೂಲಕ ಅದನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‍ನವರು ಪೈಪೋಟಿಗೆ ಬಿದ್ದಹಾಗೆ 4 ರಾಷ್ಟ್ರಧ್ವಜ ಇದ್ದರೆ, ಇನ್ನೆಲ್ಲ ಕೂಡ ಕಾಂಗ್ರೆಸ್ ಧ್ವಜದೊಂದಿಗೆ ಕಾಂಗ್ರೆಸ್ ಪ್ರಚಾರಸಭೆ ಮಾಡಿದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಹುಶಃ ಸಿದ್ದರಾಮಯ್ಯರವರ ವಿರುದ್ಧ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಅವರು ದಾವಣಗೆರೆಯಲ್ಲಿ ಸಮಾರಂಭ ಮಾಡಿದ್ದರೋ ಅದಕ್ಕೆ ಉತ್ತರವೆಂಬಂತೆ ಕಾಂಗ್ರೆಸ್ ಉತ್ಸವ ಮಾಡುತ್ತಿದ್ದಾರೆ. ಇದು ದೇಶದ ಉತ್ಸವವಲ್ಲ. ಕಾಂಗ್ರೆಸ್‍ನ ನಿಜ ಬಣ್ಣವನ್ನು ಆಗಾಗ ಅವರೇ ತೆರೆದು ಇಡುತ್ತಿದ್ದಾರೆ. ಇದು ನಿಜವಾಗಿ ದೇಶದ ಹಬ್ಬ ಎಂಬುದನ್ನು ಅರಿತು ವರ್ತಿಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ | ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಿ ಹೇಳಿಕೆ ವಾಪಸ್ ಪಡೆಯಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹ