ಬೆಂಗಳೂರು: ಮಲ್ಲಿಗೆಯಂತಹ ಇಡ್ಲಿ, ಗರಿಗರಿ ಮಸಾಲೆ ದೋಸೆ, ಕ್ರಿಸ್ಪಿ ಉದ್ದಿನ ವಡೆ, ಚೂರು ಚಟ್ನಿ, ಮೇಲೊಂದಿಷ್ಟು ಸಾಂಬಾರ್… ಆಹಾ, ಚಾಲುಕ್ಯ ಹೋಟೆಲ್‌ನಲ್ಲಿ (Hotel Chalukya) ಕುಳಿತು ಇಂತಹ ರುಚಿಕರ ತಿಂಡಿಗಳನ್ನು ಮೆಲ್ಲುತ್ತಿದ್ದರೆ ಹೊರಗೊಂದು ಜಗತ್ತು ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಪ್ರತಿ ಬಾರಿ ಹೋದಾಗಲೂ ನಾಲಗೆಯನ್ನು ತಣಿಸಿ, ಹಸಿವು ನೀಗಿಸಿ, ಮನಸ್ಸನ್ನೂ ಆಹ್ಲಾದಗೊಳಿಸಿ ಹೊರಗೆ ಕಳುಹಿಸುತ್ತಿದ್ದ ಚಾಲುಕ್ಯ ಹೋಟೆಲ್, ಸೋಮವಾರದಿಂದ ಯಾರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೌದು, ಬೆಂಗಳೂರಿನ ಹೃದಯ ಭಾಗದಲ್ಲಿ, ವಿಧಾನಸೌಧದಿಂದ ಅನತಿ ದೂರದಲ್ಲಿದ್ದು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಚಾಲುಕ್ಯ ಹೋಟೆಲ್ ಇತಿಹಾಸದ ಪುಟ ಸೇರಲಿದೆ.
ಸೆಪ್ಟೆಂಬರ್ 2೬ಕ್ಕೆ ಚಾಳುಕ್ಯ ಹೋಟೆಲ್ ಮುಚ್ಚಲಿದೆ. ಬಳಿಕ ಪ್ರಖ್ಯಾತ ಹೋಟೆಲ್ ವಸತಿ ಸಮುಚ್ಚಯವಾಗಿ ಬದಲಾಗಲಿದೆ. 1977ರಲ್ಲಿ ಆರಂಭವಾದ ಈ ಹೋಟೆಲ್ 45 ವರ್ಷಗಳಷ್ಟು ಹಳೆಯದು. ಬೆಂಗಳೂರು ಮಂದಿಗೆ, ರಾಜಕಾರಣಿಗಳು, ಗಣ್ಯರು, ಸಾಮಾನ್ಯ ಜನರಿಗೆ ಇಡ್ಲಿ-ವಡೆ, ಮಸಾಲೆ ದೋಸೆ, ರೈಸ್ ಬಾತ್, ಖಾರಾ ಬಾತ್, ಬಾದಾಮ್ ಹಲ್ವಾ ಸೇರಿ ಹಲವು ಬಗೆಯ ತಿನಿಸುಗಳನ್ನು ಉಣಬಡಿಸಿದ್ದ ಚಾಲುಕ್ಯ ಹೋಟೆಲ್‌ನಲ್ಲಿರುವ ಸಾಮ್ರಾಟ್ ರೆಸ್ಟೋರೆಂಟ್ ಮುಚ್ಚುತ್ತಿರುವುದರಿಂದ 90 ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ಕೊನೆಯ ದಿನಗಳ ರುಚಿ ಸವಿದ ಜನ
ಚಾಲುಕ್ಯ ಹೋಟೆಲ್ ಇತಿಹಾಸದ ಪುಟ ಸೇರುತ್ತಿರುವ ಕಾರಣ ಜನ ಹೋಟೆಲ್‌ಗೆ ಲಗ್ಗೆ ಇಡುತ್ತಿದ್ದಾರೆ. ಅಲ್ಲದೆ, ಹೋಟೆಲ್ ಜತೆ ತಮಗಿದ್ದ ನಂಟನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಕೀಲ ಬ್ರಿಜೇಶ್ ಕಾಳಪ್ಪ ಅವರೂ ಭಾನುವಾರ ಹೋಟೆಲ್‌ಗೆ ತೆರಳಿ, ತಿಂಡಿ ತಿಂದಿದ್ದು ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರತಿದಿನ ಕನಿಷ್ಠ ಎಂದರೂ 3,000 ಗ್ರಾಹಕರು ಭೇಟಿ ನೀಡುತ್ತಿದ್ದ, ವಾರಾಂತ್ಯದಲ್ಲಿ ಈ ಸಂಖ್ಯೆ ೫,೦೦೦ ಸಾವಿರ ದಾಟುತ್ತಿದ್ದ ನೆಚ್ಚಿನ ಹೋಟೆಲ್ ಸ್ಥಗಿತವಾಗುತ್ತಿರುವುದು ಲಕ್ಷಾಂತರ ಜನರಿಗೆ ಬೇಸರ ಮೂಡಿಸಿದೆ. ಹೋಟೆಲ್ ರುಚಿಗೆ ಸೋಮವಾರ ಕೊನೆಯ ದಿನವಾದ ಕಾರಣ ನೀವೂ ಹೋಗಿ ರುಚಿ ಸವಿದು ಬರಬಹುದು. ಕೊನೆಯ ದಿನದ ರುಚಿ ಸವಿದರೂ ಬಿಲ್ ಮೇಲೆ ಪ್ರಿಂಟ್ ಆಗುವ “Visit Again” ಎಂಬ ಸಾಲು ನಿರರ್ಥಕವೆನಿಸಿ ಬೇಸರ ಮೂಡಿಸುವುದಂತೂ ನಿಜ.
ಇದನ್ನೂ ಓದಿ | OYO | ಓಯೊ ಪ್ಲಾಟ್‌ಫಾರ್ಮ್‌ಗೆ ಡಿಸೆಂಬರ್ ವೇಳೆಗೆ 600 ಹೊಸ ಹೋಟೆಲ್