Site icon Vistara News

Video Viral: ವಿರೋಧಿಗಳ ಒಂದು ಪತ್ರಕ್ಕೂ ಸಹಿ ಹಾಕಲ್ಲ ಎಂದ ಚಲುವರಾಯಸ್ವಾಮಿ; ಸಚಿವರ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು!

Chaluvarayaswamy Video Viral

ಮಂಡ್ಯ: ಕೃಷಿ ಸಚಿವ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್.‌ ಚಲುವರಾಯಸ್ವಾಮಿ ಅವರು ವಿವಾದಗಳ ಮೇಲೆ ವಿವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಗ್ಯಾರಂಟಿ (Congress Guarantee) ಯೋಜನೆಗಳನ್ನು ಚೀಪ್‌ ಗಿಮಿಕ್‌ ಎಂದು ನೀಡಿದ್ದ ಹೇಳಿಕೆ ವೈರಲ್‌ ಆಗಿರುವ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧಿಗಳ ಒಂದು ಪತ್ರಕ್ಕೂ ನಾನು ಪೆನ್ನು ಹಿಡಿದು ಸಹಿ ಹಾಕಲ್ಲ ಎಂದು ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೊ ಸಹ ಈಗ ವೈರಲ್ (Video Viral)‌ ಆಗಿದೆ.

ನಾಗಮಂಗಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಎನ್.‌ ಚಲುವರಾಯಸ್ವಾಮಿ, ನನ್ನ ಬಳಿ ಕಾಮಗಾರಿಗಳ ಪಟ್ಟಿ ಹಿಡಿದು ಬರುವವರನ್ನು ನಗುತ್ತಾ ಮಾತನಾಡಿಸಿ ಕಳಿಸುತ್ತೇನೆ. ನಿಮ್ಮ ನಿಮ್ಮ ಊರಿನಲ್ಲಿ ಮುಂದಿನ ಯೋಜನೆಗಳ ಕುರಿತು ಯಾವುದು ಉತ್ತಮ ಎಂದು ನೀವೇ ನಿರ್ಧಾರ ಮಾಡಿ ಹೇಳಿ. ನಿಮ್ಮ ಗ್ರಾಮ ಪಂಚಾಯಿತಿಗೆ ಏನು ಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ. ನಾನು ಯಾವುದಕ್ಕೂ ತಲೆ ಹಾಕುವುದಿಲ್ಲ. ನಿಮ್ಮ ಅಭಿಪ್ರಾಯದ ಹೊರತು ಪೆನ್ನು ಹಿಡಿದು ಒಂದು ಪತ್ರಕ್ಕೂ ಸಹಿ ಹಾಕಲ್ಲ. ಈ ಬಗ್ಗೆ ನಿಮಗೆ ಆತಂಕವೂ ಬೇಡ, ಬೇಸರವೂ ಬೇಡ ಎಂದು ಹೇಳಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗಿರುವ ಎನ್.‌ ಚಲುವರಾಯಸ್ವಾಮಿ

ಇದನ್ನೂ ಓದಿ: Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!

ವೈರಲ್‌ ಆಗಿದ್ದ ಚೀಪ್‌ ಗಿಮಿಕ್‌ ವಿಡಿಯೊ!

ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್‌ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್‌ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ? ಇಂಥ ಚೀಪ್‌ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲೀಗ ಹರಿದಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

“ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್‌ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್‌ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್‌ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಹೇಳಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?

ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್‌ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್‌?

ಚುನಾವಣಾ ಪೂರ್ವ ಹೇಳಿಕೆ?

ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version