Site icon Vistara News

Power Point with HPK : ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆಗಿದ್ರೂ ಐದಲ್ಲ, ಒಂದು ಗ್ಯಾರಂಟಿಯೂ ಜಾರಿ ಆಗ್ತಿರಲಿಲ್ಲ!

Chaluvarayaswamy in powerpoint with HPK

ಬೆಂಗಳೂರು: ನಮ್ಮದು ಜನಪರವಾದ ಸರ್ಕಾರವಾಗಿದೆ. ಏನೇ ಕಷ್ಟ ಬಂದರೂ ನಾವು ಅದನ್ನು ಎದುರಿಸುತ್ತೇವೆ. ಬರಕ್ಕೆ ಪರಿಹಾರವನ್ನು ನೀಡುತ್ತೇವೆ. ಎರಡೂವರೆ ಲಕ್ಷ ರೂಪಾಯಿ ಇದ್ದ ರಾಜ್ಯ ಮಟ್ಟದ ಸಾಲವನ್ನು 5 ಲಕ್ಷ ರೂಪಾಯಿಗೆ ಬಿಜೆಪಿಯವರು ತೆಗೆದುಕೊಂಡು ಹೋದಂತೆ ನಾವು ಮಾಡುವುದಿಲ್ಲ. ಸಿದ್ದರಾಮಯ್ಯ (CM Siddaramaiah) ಅವರು ಅಲ್ಲದೆ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ಐದು ಗ್ಯಾರಂಟಿ ಅಲ್ಲ. ಒಂದೇ ಒಂದು ಗ್ಯಾರಂಟಿಯನ್ನೂ (Congress Guarantee scheme) ಜಾರಿ ಮಾಡಲು ಆಗುತ್ತಿರಲಿಲ್ಲ. ಐದರಲ್ಲಿ ನಾಲ್ಕು ಗ್ಯಾರಂಟಿಯನ್ನು ನಾವು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ, ನಮ್ಮ ಗ್ಯಾರಂಟಿ ಯೋಜನೆಗಳು ಇಂಥ ಬರಗಾಲದಲ್ಲಿ ಜನರಿಗೆ ಬಹಳವೇ ಉಪಯೋಗಕ್ಕೆ ಬರುತ್ತದೆ. ಪ್ರತಿ ಮನೆಗೆ 4ರಿಂದ 5 ಸಾವಿರ ರೂಪಾಯಿ ದುಡ್ಡು ಸಿಗುತ್ತದೆ. ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ. ನಾನು ಹಲವು ಹಳ್ಳಿಗಳಿಗೆ ಭೇಟಿ ನೀಡಿದಾಗ ಎಲ್ಲರೂ ಗ್ಯಾರಂಟಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಆ ಗ್ರಾಮದ ಎಲ್ಲರಿಗೂ ಉಚಿತ ವಿದ್ಯುತ್‌ ಸಿಗುತ್ತಿದೆ. ಎರಡು ಸಾವಿರ ರೂಪಾಯಿ ಸಹ ನೂರರಲ್ಲಿ ಒಬ್ಬರಿಗೆ ಮಾತ್ರ ಸಿಕ್ಕಿಲ್ಲ. ಉಳಿದವರೆಲ್ಲರಿಗೂ ಸಿಕ್ಕಿದೆ. ಇನ್ನು ಮಹಿಳೆಯರಿಗೆ ನೀಡಿರುವ ಉಚಿತ ಬಸ್‌ ಸೌಲಭ್ಯ ಸಹ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಬೇರೆಯವರು ಮಾಡಲು ಆಗದೇ ಇರುವುದನ್ನು ಕಾಂಗ್ರೆಸ್‌ ಮಾಡುವುದೇ ವಿಶೇಷ. ಬರಗಾಲ ಇರಬಹುದು, ರೈತರ ಏನೇ ಸಮಸ್ಯೆಗಳು ಇರಬಹುದು ಎಲ್ಲವನ್ನೂ ನೋಡಿಕೊಳ್ಳುತ್ತೇವೆ. ರಾಜ್ಯದ ಅಭಿವೃದ್ಧಿ ಜತೆಗೆ ಗ್ಯಾರಂಟಿಯನ್ನು ತೆಗೆದುಕೊಂಡು ಹೋಗುತ್ತೇವೆ. ಈ ನಿಟ್ಟಿನಲ್ಲಿ ಏನೇ ಸಮಸ್ಯೆ ಬಂದರೂ ನಾವು ಎದುರಿಸುತ್ತೇವೆ. ಇನ್ನು ಗ್ಯಾರಂಟಿಗೆ ಈ ವರ್ಷ ಬೇಕಿರುವ 37 ಸಾವಿರ ಕೋಟಿ ರೂಪಾಯಿಯನ್ನು ಈಗಾಗಲೇ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ ಎಂದು ಎನ್.‌ ಚಲುವರಾಯಸ್ವಾಮಿ ತಿಳಿಸಿದರು.

ರಾಜ್ಯದ ಪಾಲನ್ನು ಕೇಂದ್ರ ಕೊಡಲೇಬೇಕು

ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಹಕಾರ ಕೊಡಬೇಕು. ನಮಗೆ ಕೊಡಬೇಕಾದ ದುಡ್ಡನ್ನು ಕೊಡಬೇಕು. ಕೇಂದ್ರದವರೇನು ನಮಗೆ ಪುಕ್ಕಟೆ ದುಡ್ಡು ಕೊಡುತ್ತಾರೆಯೇ? ಆಯಾ ರಾಜ್ಯದಿಂದ ತೆರಿಗೆ ಸಂಗ್ರಹದ ಆಧಾರದ ಮೇಲೆ ಅನುದಾನವನ್ನು ಕೊಡಬೇಕಾಗುತ್ತದೆ. ಏನು ಯೋಜನೆಗಳು ಇರುತ್ತವೆಯೋ ಅದನ್ನು ಮಾಡಬೇಕು. ಇನ್ನು ಬರಗಾಲಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವೇ ಮಾನದಂಡವನ್ನು ನಿಗದಿ ಮಾಡಿದೆ. ಅದರ ಅನುಸಾರ ಅವರು ರಾಜ್ಯದ ಪಾಲು ಏನು ಇರುತ್ತದೆಯೋ ಅದನ್ನು ಕೊಡಲೇಬೇಕಾಗುತ್ತದೆ. ಇನ್ನು ನಮ್ಮ ಕಡೆಯಿಂದ ಏನು ಅನುದಾನ ಹಾಕಬೇಕೋ ಅದನ್ನು ಹಾಕುತ್ತೇವೆ ಎಂದು ಎನ್.‌ ಚಲುವರಾಯಸ್ವಾಮಿ ಹೇಳಿದರು.

ಇದನ್ನೂ ಓದಿ: Power Point with HPK : ಬರ ಘೋಷಣೆಯಲ್ಲಿ ನಾವೇ ಮುಂದು; ಬಿಜೆಪಿಗೆ ಇನ್ನೊಂದು ತಿಂಗಳಾದರೂ ಆಗದು!

ಇನ್ನು ಮುಂದೆ ಬರುವ ಮಳೆಯಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ರೈತರಿಗೆ ಆದಾಯ ತರುವಂತ ಬೆಳೆ ಬೆಳೆಯಲು ಸಾಧ್ಯವಿಲ್ಲ.ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಉಪಯೋಗ ಆಗಬಹುದು. ಇನ್ನು ಸುರಿಯುವ ಮಳೆಯಿಂದ ಡ್ಯಾಂಗಳು ತುಂಬಬಹುದು ಅಷ್ಟೇ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ನೀಗಲಿದೆ. ಈಗ ಪ್ರತಿ ವಾರ ಅಥವಾ 10 ದಿನಕ್ಕೆ ರಾಜ್ಯದ ಸ್ಥಿತಿಗತಿಗಳನ್ನು ಅವಲೋಕಿಸಿ ತೀರ್ಮಾನವನ್ನು ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು, ಅದರಂತೆ ನಾವು ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.

Exit mobile version