Site icon Vistara News

Mandya Politics: ಮಾಟ-ಮಂತ್ರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ, ಭ್ರಷ್ಟಾಚಾರದಲ್ಲಿ ಫಸ್ಟ್‌: ಸುರೇಶ್‌ ಗೌಡ ಕಿಡಿ

Chaluvarayaswamy and Suresh gowda

ಮಂಡ್ಯ: ಚಲುವರಾಯಸ್ವಾಮಿಯ ಅದೃಷ್ಟ ಚೆನ್ನಾಗಿದ್ದು, ಆತ ಗೆದ್ದಾಗಲೆಲ್ಲ ಅಧಿಕಾರ ಪಡೆದು ದುಡ್ಡು ಮಾಡುತ್ತಾನೆ. ಮಾಟ, ಮಂತ್ರ, ವಾಮಚಾರ ಮಾಡಿಸುವುದೇ ಆತನ ಕೆಲಸ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. 300ರಿಂದ 400 ಕೋಟಿ ರೂ. ಲೂಟಿ ಹೊಡೆದಿದ್ದಾನೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಜಿಲ್ಲೆಯ (Mandya Politics) ನಾಗಮಂಗಲ ಜೆಡಿಎಸ್ ಮಾಜಿ ಶಾಸಕ ಸುರೇಶ್‌ ಗೌಡ ಆರೋಪಿಸಿದ್ದಾರೆ.

ನಾಗಮಂಗಲದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಏಕವಚನದಲ್ಲಿ ಆಕ್ರೋಶ ಹೊರಹಾಕಿರುವ ಅವರು, ಸತ್ಯವನ್ನ ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ಜನಸಾಮಾನ್ಯರು ಚಲುವರಾಯಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ನಾವು ಸುಮ್ಮನಿರಲ್ಲ. ಪುಟ್ಟೇಗೌಡರಿಗೆ ಈತ ಬಿಡಿ, ಸಿಗರೇಟ್ ತಂದು ಕೊಡುತ್ತಿದ್ದದ್ದು ಸುಳ್ಳಾ? ಶಿವರಾಮೇಗೌಡ ಬಳಿ 5 ಸಾವಿರಕ್ಕೆ ಬಂದಿದ್ದದ್ದು ಸುಳ್ಳಾ? ಈತನನ್ನು ಜಿ.ಪಂನಲ್ಲಿ ಗೆಲ್ಲಿಸಿ, ಉಪಾಧ್ಯಕ್ಷ, ಶಾಸಕ, ಸಚಿವ, ಎಂಪಿಯನ್ನಾಗಿಸಿದ್ದು ಜೆಡಿಎಸ್‌. ಚಲುವರಾಯಸ್ವಾಮಿಗೆ ನಿಯತ್ತಿಲ್ಲ, ಹಿಟ್ಟಿಕ್ಕಿದವಳನ್ನೇ ಇಟ್ಟುಕೊಳ್ಳುವವರನ್ನು ಏನು ಅಂತ ಕರಿಯೋದು ಎಂದು ಕಿಡಿಕಾರಿದರು.

ನನ್ನ ಚರಿತ್ರೆ ಬಗ್ಗೆ ಮಾತನಾಡುತ್ತಾನೆ. ಇವನ ಚರಿತ್ರೆ ಹಳಸಿ ಹೋಗಿದೆ. ಇವನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನೊಣ ಬಿದ್ದ ನಮ್ಮ ತಟ್ಟೆ ನೋಡುತ್ತಾನೆ. ನಾನು ಸೋತಿದ್ದೇನಿ, ಸತ್ತಿಲ್ಲ. 30-40 ಸಾವಿರ ಓಟುಗಳ ಅಂತರದಲ್ಲಿ ಸೋತಿದ್ದರೆ ರಾಜಕಾರಣವನ್ನೇ ಬಿಟ್ಟು ಬಿಟ್ಟುಬಿಡುತ್ತಿದ್ದೆ. 47 ಸಾವಿರ ಅಂತರದಲ್ಲಿ ಸೋತವನೆ ತಲೆ ಎತ್ತಿಕೊಂಡು ಬಂದಿದ್ದಾನೆ. ನಾನು 4 ಸಾವಿರದಲ್ಲಿ ಸೋತವನು, ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಆದರೆ ಚಲುವರಾಯಸ್ವಾಮಿ ಬಗ್ಗೆ ನನಗೆ ಭಯವೂ ಇಲ್ಲ, ಗೌರವವೂ ಇಲ್ಲ ಎಂದು ಹರಿಹಾಯ್ದರು.

ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು

ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಆಗ ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಅದು ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್‌ ಮನಿ ವೈಟ್ ಮಾಡಿದ್ದಾನೋ ಅದೆಲ್ಲವೂ ಹೊರಗೆ ಬರುತ್ತದೆ, ಇ.ಡಿ. ತನಿಖೆ ಮಾಡಲಿದೆ ಎಂದು ಮಾಜಿ ಶಾಸಕ ಸುರೇಶ್‌ ಗೌಡ ಹೇಳಿದ್ದಾರೆ.

ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರ ಬಳಿ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ ಎಂಬುವುದು ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿಯಲ್ಲಿ ಸರಿಯಾಗಿ ತನಿಖೆ ನಡೆಸಿದರೆ ಬ್ಲಾಕ್ ಹೇಗೆ ವೈಟ್ ಆಗುತ್ತಿದೆ ಎಂಬುವುದು ತಿಳಿಯುತ್ತದೆ. ಯಾವ ಯಾವ ಥಿಯೇಟರ್‌ ತೆಗೆದುಕೊಳ್ಳಲು ಸಹಾಯ ಆಗಿದೆ ಗೊತ್ತಾಗುತ್ತದೆ. ತಿಂದವನು ಕಕ್ಕಲೇ ಬೇಕು, ಎಲ್ಲ ಮುಂದೆ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಪತ್ರ ಬರೆದದ್ದು ಸತ್ಯ

ಸಚಿವರ ವಿರುದ್ಧದ ಲಂಚಕ್ಕೆ ಬೇಡಿಕೆ ಆರೋಪದ ಬಗ್ಗೆ ಸುರೇಶ್‌ ಗೌಡ ಪ್ರತಿಕ್ರಿಯಿಸಿ, ಬೆಂಗಳೂರಿ‌ನ 37 ಕ್ರೆಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಿಗಳ ಮೇಲೆ ಚಲುವರಾಯಸ್ವಾಮಿ ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿದರೆ ಎಡಿ, ಜೆಡಿ ಯಾವೆಲ್ಲಾ ಕೃಷಿ ಅಧಿಕಾರಿಗಳು ಹೋಗಿದ್ದರು ಎಂಬುವುದು ತಿಳಿಯುತ್ತದೆ. ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಾರೆ. ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ದುಡ್ಡು ಏರ್‌ಲಿಫ್ಟ್

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಆತ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಮಂಡ್ಯದಲ್ಲಿ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆ 100 ಕೋಟಿ, ಅಧಿಕಾರಿಗಳ ಬಳಿ ಲೂಟಿ ಸೇರಿ 300 ಕೋಟಿ ರೂ.ಗಳನ್ನು ಚಲುವರಾಯಸ್ವಾಮಿ ಒಬ್ಬರೇ ಲೂಟಿ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಿಂದ ಫಂಡ್ ಹೋಗುತ್ತಿದೆ. ಬಿಜೆಪಿ ಸರ್ಕಾರವೇ ಪರವಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Gruha Lakshmi : ಗೃಹಲಕ್ಷ್ಮಿ ಅಡಿ ಹಾಕಿಕೊಂಡಿದ್ದ ಸ್ಕೀಂ ಫ್ಲಾಪ್!‌ ಡಿ.ಕೆ. ಶಿವಕುಮಾರ್‌ ಅಸಮಾಧಾನ

ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಚಲುವರಾಯಸ್ವಾಮಿ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪೀಟ್ ಆಡಲು ಹೋಗಿದ್ದರೇ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಜತೆಯಲ್ಲಿ ವ್ಯಾಪಾರ ಮಾಡಿಕೊಂಡು ಹೋದ ಜಮೀರ್, ಚಲುವರಾಯಸ್ವಾಮಿ ದೋಸ್ತಿಗಳು, ಆಪ್ತಮಿತ್ತರು. ಆದರೆ ಅವರು ಈಗ್ಯಾಕೆ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಜಮೀರ್ ಸಾಹೇಬರು ಆತನಿಗೆ ನೆಂಟರಲ್ಲವಾ? ಈಗ್ಯಾಕೆ ಇಲ್ಲ. ಈತ ಮಿತ್ರದೋಹಿ ಕೆಲಸವನ್ನು ಕರಗತ ಮಾಡಿಕೊಂಡಿರುವವನು. ಇವನು ಕುಮಾರಣ್ಣನ ಬಗ್ಗೆ ಮಾತನಾಡುತ್ತಾನೆ ಎಂದು ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

Exit mobile version