ಬೆಂಗಳೂರು: ಚಾಮರಾಜನಗರ ಸಂಸದ, ರಾಜ್ಯದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ (76) (V Srinivasa Prasad) ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ (Manipal Hospital) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯವನ್ನು ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣಿಪಾಲ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಬಹು ಅಂಗಾಂಗ ವೈಫಲ್ಯ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಶ್ರೀನಿವಾಸ ಪ್ರಸಾದ್ ಅವರು ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಶುಗರ್ ಪ್ರಮಾಣದಲ್ಲಿ ಶನಿವಾರ ಭಾರಿ ಏರುಪೇರಾದ ಕಾರಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕಾಗಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸುದ್ದಿ ತಿಳಿದ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ನಿವೃತ್ತಿ
2019ರಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ. ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ, ಕಳೆದ ಮಾರ್ಚ್‌ನಲ್ಲಿಯೇ ರಾಜಕೀಯ ನಿವೃತ್ತಿ ಘೋಷಿಸಿದ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅಲ್ಲದೆ, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಅವರ ಪರವಾಗಿಯೂ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಇನ್ನು, ಅವರ ಬೆಂಬಲ ಪಡೆಯಲು ಕಾಂಗ್ರೆಸ್ ತಂತ್ರ ಕೂಡ ಹೆಣೆದಿತ್ತು.
ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ, ಕಾಂಗ್ರೆಸ್‌ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲವನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು ಕೆಲ ಹೊತ್ತು ಚರ್ಚಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್ ಅವರು ದೂರವೇ ಉಳಿದಿದ್ದರು. ಆದರೆ, ಏಕಾಏಕಿ ಸಿದ್ದರಾಮಯ್ಯ ಅವರೇ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬೆನ್ನಲ್ಲೇ, “ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ, ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಇದೆ” ಎಂದು ಹೇಳಿದ್ದರು.
ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ