Site icon Vistara News

Election Ambassabor : ಮತದಾನ ರಾಯಭಾರಿಗಳಾಗಿ ಬಿಗ್‌ ಬಾಸ್‌ ಕಾರ್ತಿಕ್‌, ನಟ ನಾಗಭೂಷಣ್‌ ಆಯ್ಕೆ

LOK SABHA ELECTION 2024 Karthik Mahesh

ಚಾಮರಾಜನಗರ: ಒಂದು ಕಡೆ ಲೋಕಸಭಾ ಚುನಾವಣೆಯ (Lok Sabha Election 2024) ಸ್ಪರ್ಧೆಗೆ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದರೆ, ಇನ್ನೊಂದು ಕಡೆ ಚುನಾವಣಾ ಪ್ರಕ್ರಿಯೆಯನ್ನು (Election Process) ಅತ್ಯಂತ ಸಮರ್ಪಕವಾಗಿ ಮತ್ತು ಜನ ಮೆಚ್ಚುವಂತೆ, ಜನರ ಗಮನ ಸೆಳೆಯುವಂತೆ ನಡೆಸಲು ಜಿಲ್ಲಾಡಳಿತಗಳು ಕೂಡಾ ಹಲವು ಪ್ರಯತ್ನಗಳು ನಡೆಸುತ್ತಿವೆ. ಇದರ ಭಾಗವಾಗಿ ಚಾಮರಾಜ ನಗರ ಜಿಲ್ಲಾಡಳಿತ ಮೂವರು ಪ್ರಮುಖ ಯುವ ಕಣ್ಮಣಿಗಳನ್ನು ಮತದಾನದ ರಾಯಭಾರಿಗಳನ್ನಾಗಿ (Election Ambassabor) ನೇಮಕ ಮಾಡಿದೆ.

“ದೇಶದ ಗರ್ವ” ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿಯನ್ನು ರಚಿಸಲಾಗಿದ್ದು, ಮತದಾನದ ಜಾಗೃತಿ ಮೂಡಿಸಲು ಈ ಬಾರಿ ಮೂವರು ರಾಯಭಾರಿಗಳನ್ನು ನೇ‌ಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾನ ಜಾಗೃತಿ ರಾಯಭಾರಿಯಾಗಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್‌ (Bigg Boss Winner Karthik Mahesh), ಟಗರುಪಲ್ಯ ಖ್ಯಾತಿಯ ನಟ ನಾಗಭೂಷಣ್ (Actor Nagabhushan) ಹಾಗೂ ಲಿಂಗತ್ವ ಅಲ್ಪಸಂಖ್ಯಾತೆ ಹೋರಾಟಗಾರ್ತಿ ದೀಪಾ ಬುದ್ದೆ ಅವರನ್ನು ಆಯ್ಕೆ ಮಾಡಲಾಗಿದೆ.

ಚಾಮರಾಜನಗರ ಮೂಲದವರೇ ಆದ ನಟ ಕಾರ್ತಿಕ್ ಹಾಗೂ ನಾಗಭೂಷಣ್ ಅವರು ಜನಪ್ರಿಯರಾಗಿದ್ದಾರೆ. ಯುವ ಜನರ ಕಣ್ಮಣಿಗಳಾಗಿದ್ದಾರೆ. ಇನ್ನು ಇನ್ನು ಲಿಂಗತ್ವ ಅಲ್ಪಸಂಖ್ಯಾತೆಯರು ಮತದಾನದಿಂದ ದೂರ ಉಳಿಯದಂತೆ ಟ್ರಾನ್ಸ್ ಜೆಂಡರ್ಸ್ ಓಟರ್ಸ್ ರಾಯಭಾರಿಯಾಗಿ ದೀಪಾ ಬುದ್ಧೆ ಆಯ್ಕೆ ಮಾಡಲಾಗಿದೆ ಎಂದು ಶಿಲ್ಪಾ ನಾಗ್‌ ತಿಳಿಸಿದ್ದಾರೆ. ದೀಪಾ ಬುದ್ಧೆ ಲಿಂಗತ್ವ ಅಲ್ಪಸಂಖ್ಯಾತೆ ಹೋರಾಟಗಾರ್ತಿ ಮತ್ತು ಈ ವಿಷಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿದ್ದಾರೆ.

8 ವಿಧಾನಸಭಾ ಕ್ಷೇತ್ರ, 17 ಲಕ್ಷ ಮತದಾರರು

ಚಾಮರಾಜನಗರ ಲೋಕಸಭಾ ಕ್ಷೇತ್ರ (ಪ.ಜಾ) ವ್ಯಾಪ್ತಿಗೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಹೆಚ್.ಡಿ.ಕೋಟೆ, ನಂಜನಗೂಡು, ವರುಣ, ಟಿ.ನರಸೀಪುರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಕ್ಷೇತ್ರದ ಒಟ್ಟು ಮತದಾರರು: 17,57,616
ಪುರುಷ ಮತದಾರರು: 8,69,389
ಮಹಿಳಾ ಮತದಾರರು: 8,88,113
ಲಿಂಗತ್ವ ಅಲ್ಪಸಂಖ್ಯಾತರು: 114

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಸಾವಿರ ಮತಗಟ್ಟೆ ಸ್ಥಾಪನೆಯಾಗಲಿದೆ. 1,177 ಬ್ಯಾಲೆಟ್ ಯೂನಿಟ್, 1,177 ಕಂಟ್ರೋಲ್ ಯೂನಿಟ್ ಹಾಗೂ 1276 ವಿ.ವಿ. ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಫ್ಲೈಯಿಂಗ್ ಸ್ಕ್ವಾಡ್ (ಎಫ್.ಎಸ್.ಟಿ) 12 ತಂಡಗಳು ಮೂರು ಪಾಳಿಗಳಲ್ಲಿ, ಸ್ಟ್ಯಾಟಿಕ್ ಸರ್ವೈಲೆನ್ಸ್ (ಎಸ್.ಎಸ್.ಟಿ) 13 ತಂಡಗಳು ಮೂರು ಪಾಳಿಗಳಲ್ಲಿ, 97 ಸೆಕ್ಟರ್ ಅಧಿಕಾರಿಗಳು ನಿಯೋಜನೆಯಾಗಿದ್ದಾರೆ. ವೀಡಿಯೋ ಸರ್ವೈಲೆನ್ಸ್ 10 ತಂಡಗಳು, ವಿಡಿಯೋ ವೀವಿಂಗ್ 4 ತಂಡಗಳ ರಚನೆ ಆಗಲಿದೆ. 8 ಅಂತರರಾಜ್ಯ ಚೆಕ್‍ಪೋಸ್ಟ್ ಮತ್ತು 5 ಅಂತರ್ ಜಿಲ್ಲಾ ಚೆಕ್‍ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಮತದಾನ ಪ್ರಕ್ರಿಯೆ ಯಾವಾಗ ಆರಂಭ?

ಚಾಮರಾಜ ನಗರ ಕ್ಷೇತ್ರದ ಮತದಾನ ಏಪ್ರಿಲ್‌ 26ರಂದು ನಡೆಯಲಿದೆ. ಏಪ್ರಿಲ್‌ ನಾಲ್ಕರವರೆಗೆ ನಾಮಪತ್ರ ಸಲ್ಲಿಸಬಹುದು. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಏಪ್ರಿಲ್ 26ರಂದು ಮತದಾನ, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Exit mobile version