ಚಾಮರಾಜನಗರ: ಜನರಿಗೆ ಅಕ್ಕಿ ಬೇಕಂತಾ? ಹಣ ಬೇಕಂತಾ? ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪ್ರಶ್ನೆಗೆ ಉತ್ತರ ನೀಡುವಾಗ ಚಾಮರಾಜನಗರ ಜಿಲ್ಲಾಧಿಕಾರಿ (Chamarajanagara DC) ಶಿಲ್ಪಾ ನಾಗ್ (Shilpa Nag) ಅವರು ಸಿಕ್ಕಾಕಿಕೊಂಡರು. ಈ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರವೇ ಬೇರೆ, ಆಹಾರ ಇಲಾಖೆ ಉಪ ನಿರ್ದೇಶಕರ (Deputy director of Food department) ಉತ್ತರವೇ ಬೇರೆ! ಆದರೆ, ಇದನ್ನು ಸಿದ್ದರಾಮಯ್ಯ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳದೆ ಮುಂದೆ ಹೋದರು.
ಬುಧವಾರ ಚಾಮರಾಜ ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಹಂತದಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಾ ಚುರುಕು ಮುಟ್ಟಿಸಿದರು ಸಿದ್ದರಾಮಯ್ಯ. ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರಿಗೆ ತಪ್ಪು ಮಾಹಿತಿ, ಅರೆಬರೆ ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.
ಜನ ಅಕ್ಕಿ ಬೇಕು ಅಂತಿದ್ದಾರೋ ಹಣ ಬೇಕು ಅಂತಿದ್ದಾರೋ?
ಅನ್ನ ಭಾಗ್ಯ ಯೋಜನೆಯಡಿ ಜನ ಅಕ್ಕಿ ಬೇಕು ಅಂತಿದ್ದಾರೋ ಹಣ ಬೇಕು ಅಂತಿದ್ದಾರೋ? (Anna Bhagya Scheme) ಎಂಬ ಪ್ರಶ್ನೆ ಕೇಳಿ ನಿಮ್ಮ ಅಭಿಪ್ರಾಯ ಹೇಳಿ ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಡಿಸಿ ಶಿಲ್ಪಾ ನಾಗ್ ಅವರು ಹಣ ನೀಡುವುದೇ ಒಳ್ಳೆಯದ್ದು ಅಂತ ಕೇಳುತ್ತಿದ್ದಾರೆ ಎಂದರು. ನಾವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೇಳುವಾಗ ಈ ಅಭಿಪ್ರಾಯ ಬಂದಿದೆ ಎಂದರು.
ಆದರೆ, ಆಹಾರ ಇಲಾಖೆ ಉಪ ನಿರ್ದೇಶಕರ ಉತ್ತರವೇ ಬೇರೆ. ʻʻತಾಲೂಕುವಾರು ಅನೇಕ ಕಡೆಗಳಲ್ಲಿ ಫಲಾನುಭವಿಗಳನ್ನು ಭೇಟಿ ಮಾಡಿದ್ದೇನೆ. 590 ಜನ ಭೇಟಿ ಮಾಡಿದ್ದೇನೆ. ಅದರಲ್ಲಿ 19 ಜನ ಮಾತ್ರ ಹಣ ಬೇಕು ಅಂತ ಕೇಳಿದ್ದಾರೆ. ಉಳಿದವರೆಲ್ಲ ಅಕ್ಕಿ ಬೇಕು ಅಂದಿದ್ದಾರೆʼʼ ಎಂದು ಸಮೀಕ್ಷೆಯ ಮಾಹಿತಿಯನ್ನು ನೀಡಿದರು.
ಅಂಕಿ ಅಂಶ ಕೇಳಿ ಕಕ್ಕಾಬಿಕ್ಕಿಯಾದ ಡಿಸಿ ಅವರು, ತಮ್ಮದೇ ಹೇಳಿಕೆಯಿಂದ ಉಲ್ಟಾ ಹೊಡೆದರು. ಸಮೀಕ್ಷೆ ಸರಿ ಇರಬಹುದು. ನಾವು ಜನರಲ್ ಆಗಿ ಪ್ರಶ್ನೆ ಕೇಳಿದ್ದೇವೆ ಎಂದರು.
ಆಹಾರ ಇಲಾಖೆ ಉಪನಿರ್ದೇಶಕರಿಗೆ ಸಿಎಂ ತರಾಟೆ
ಅನ್ನಭಾಗ್ಯದ ಅಕ್ಕಿಗೆ ಹಣ ನೀಡುವ ಯೋಜನೆಯ ಲಾಭವನ್ನು ಫಲಾನುಭವಿಗಳಿಗೆ ತಲುಪಿಸದೆ ಇರುವುದಕ್ಕೆ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ʻʻಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. ಸಮನ್ವಯತೆ ಇರದಿದ್ದರೆ ತೊಂದರೆಯಾಗುತ್ತದೆ. ನಾಲ್ಕು ಗ್ಯಾರಂಟಿ ಜಾರಿ ಮಾಡಲಾಗಿದೆ. ಮತ್ತೊಂದು ಗ್ಯಾರಂಟಿ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ. ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕುʼʼ ಎಂದು ಹೇಳಿದ ಅವರು, ʻʻಪಡಿತರ ಚೀಟಿ ಇರುವ ಎಲ್ಲಾ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ತಲುಪಿದೆಯಾʼʼ ಎಂದು ಕೇಳಿದರು.
ʻʻಇನ್ನು ಒಂದು ಲಕ್ಷ ಫಲಾನುಭವಿಗಳಿಗೆ ತಲುಪಬೇಕು. ಬ್ಯಾಂಕ್ ಖಾತೆ ಸಮಸ್ಯೆಯಿಂದ ತಲುಪಿಲ್ಲʼʼ ಎಂದು ಉತ್ತರ ಕೊಟ್ಟರು ಅಧಿಕಾರಿ.
ಆಗ ಸಿದ್ದರಾಮಯ್ಯ ಅವರು, ʻʻಮೂರು ತಿಂಗಳು ಬೇಕಾ ನಿಮಗೆʼʼ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ʻʻಇದು ಆಗಸ್ಟ್ ತಿಂಗಳ ವರೆಗಿನ ಮಾಹಿತಿʼʼ ಎಂದು ಅಧಿಕಾರಿಯಿಂದ ಉತ್ತರ. ನನಗೆ ಅಗಸ್ಟ್ ಮಾಹಿತಿ ಯಾಕೆ ಕೊಟ್ಟೆ ಎಂದು ಗದರಿದರು ಸಿಎಂ ಸಿದ್ದರಾಮಯ್ಯ.
ಅಟ್ರಾಸಿಟಿ ಕೇಸ್:ಚಾಮರಾಜನಗರದಲ್ಲಿ ಶಿಕ್ಷೆ ಶೂನ್ಯ!
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಚಾಮರಾಜನಗರದಲ್ಲಿ ಶಿಕ್ಷೆ ಪ್ರಮಾಣ ಶೂನ್ಯ ಎಂಬ ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ ಅಚ್ಚರಿಪಟ್ಟರು. ಮಾತ್ರವಲ್ಲ, ಎಸ್ಪಿ ಪದ್ಮಿನಿ ಸಾಹುಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ʻʻಪ್ರತಿ ವರ್ಷ 20- 25 ಕೇಸ್ ದಾಖಲಾಗುತ್ತಿದೆ. ಮೂರು ವರ್ಷಗಳಿಂದ ಒಂದೇ ಒಂದು ಕೇಸ್‌ಗೆ ಶಿಕ್ಷೆ ಆಗಿಲ್ಲ. 5 ಕೇಸ್ ವಜಾ ಆಗಿವೆʼʼ ಎಂದು ಎಸ್‌ಪಿ ವಿವರಿಸಿದರು.
ಇದನ್ನೂ ಓದಿ : CM Siddaramaiah : ಆಕ್ಸಿಜನ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಕಾಯಂ ಉದ್ಯೋಗ; ಸಿಎಂ ಭರವಸೆ
ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ʻʻʻಅಲ್ಲಮ್ಮ, ಶಿಕ್ಷೆ ಆಗಲ್ಲ ಅಂದ್ರೆ ಭಯ ಹೇಗೆ ಬರುತ್ತೆ ? ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕುʼʼ ಎಂದರು. ಆಗ ಪದ್ಮಿನಿ ಸಾಹೋ ಅವರು ಏನೋ ಹೇಳಲು ಹೋದಾಗ, ʻʻನೀನು ಹೊಸಬಳು ಇರಬಹುದು. ಆದರೆ, ಸುಮ್ಮನೆ ವಾದ ಮಾಡಬೇಡʼʼ ಎಂದು ಸೂಚನೆ ನೀಡಿದರು. ಪರಿಶೀಲನೆ ನಡೆಸುವಂತೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯಗೆ ಸೂಚನೆ ನೀಡಿದರು.