Site icon Vistara News

CM Siddaramaiah : ಸಿಎಂ ಆಗಿ 17ನೇ ಭೇಟಿ; ಚಾಮರಾಜನಗರಕ್ಕೆ ಬಂದಷ್ಟೂ ನನ್ನ ಕುರ್ಚಿ ಗಟ್ಟಿ ಎಂದ ಸಿದ್ದರಾಮಯ್ಯ

CM siddaramaiah Chamarajanagara

ಚಾಮರಾಜನಗರ: ಚಾಮರಾಜನಗರಕ್ಕೆ (Chamaraja Nagara) ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆ (Superstition) ಜಿಲ್ಲೆಯ ಜನರಿಗೆ ಮಾಡುವ ಅವಮಾನ. ನಾನು ಚಾಮರಾಜನಗರಕ್ಕೆ ಬಂದಷ್ಟೂ ನನ್ನ ಕುರ್ಚಿ ಗಟ್ಟಿ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮಂಗಳವಾರ 17ನೇ ಬಾರಿ ಚಾಮರಾಜನಗರಕ್ಕೆ (Siddaramaiah visits Chamaraja Nagar for 17th time) ಭೇಟಿ ನೀಡಿದ ವೇಳೆ ಈ ಮಾತು ಹೇಳಿದರು. ಚಾಮರಾಜನಗರ ಜಿಲ್ಲೆಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ (Guarantee Samavesha) ಭಾಗವಹಿಸಲು ಅವರು ಆಗಮಿಸಿದ್ದರು.

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎ ಆಗಿದ್ದಾಗ 2013ರಿಂದ 2018ರ ನಡುವೆ 15ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು. ಇದೀಗ ಎರಡನೇ ಬಾರಿ ಸಿಎಂ ಆದ ಬಳಿಕ ಎರಡನೇ ಬಾರಿ ಜಿಲ್ಲೆಗೆ ಆಗಮಿಸಿದ್ದರು.

CM Siddaramaiah : ಅಧಿಕಾರ ಮತ್ತು ಸಂಪತ್ತಿನ ಸಮಾನ ಹಂಚಿಕೆಯೇ ಧ್ಯೇಯ

ಚಾಮರಾಜನಗರ ಜಿಲ್ಲೆಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಭರವಸೆಗಳನ್ನು ಈಡೇರಿಸಿದ್ದೇವೆ. ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ. 36000 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿ ಜನರ ಖಾತೆಗೆ ನೇರವಾಗಿ ಜಮೆ ಮಾಡಿದ್ದೇವೆ ಎಂದು ಹೇಳಿದರು.

ಅಧಿಕಾರ ಮತ್ತು ಸಂಪತ್ತು ಸಮಾಜದ ಎಲ್ಲರಲ್ಲೂ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಗ್ಯಾರಂಟಿಗಳನ್ನು ಕೊಟ್ಟಿದೆ. ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಸರ್ಕಾರದ ಸವಲತ್ತು ಜನರಿಗೆ ಸಿಗಬಾರದಾ?

ನಮ್ಮ ಐದು ಗ್ಯಾರಂಟಿಗಳಿಗೆ ನಾಲ್ಕೂವರೆ ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ರಾಜ್ಯದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 45 ಸಾವಿರದಿಂದ 50 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇದನ್ನು ಬಿಜೆಪಿ ಯಾಕೆ ವಿರೋಧಿಸುತ್ತಿದೆ? ನಾಡಿನ ಜನರಿಗೆ ಸರ್ಕಾರದ ಸವಲತ್ತುಗಳು ಸಿಗಬಾರದಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳ, ನಾಲ್ಕೂವರೆ ಕೋಟಿ ಜನಕ್ಕೆ ಈ ವರ್ಷ 36000 ಕೋಟಿ ಹಣ ಕೊಟ್ಟಿದ್ದೇವೆ. ಮುಂದಿನ ವರ್ಷಕ್ಕೆ 59000 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೇವೆ. ರಾಜ್ಯದ ಜನರ ಅಭಿವೃದ್ಧಿ ಕಾರ್ಯಗಳಿಗೆ ಒಂದು ಲಕ್ಷ ಇಪ್ಪತ್ತು ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದೇವೆ ಎಂದರು.

ಇದನ್ನೂ ಓದಿ : CM Siddaramaiah : ಪ್ರತಾಪ್‌ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ, ಅದಕ್ಕೇ ಟಿಕೆಟ್‌ ಕೊಡ್ತಿಲ್ಲ ಎಂದ ಸಿದ್ದರಾಮಯ್ಯ

ಮನುವಾದ ನಮ್ಮೆಲ್ಲರ ಶತ್ರು: ಎಚ್ಚರ

ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವ ಮನುವಾದಿಗಳು ಮತ್ತು ಮನುವಾದ ನಮ್ಮ ನಿಮ್ಮೆಲ್ಲರ ಶತ್ರು. ಇವರಿಗೆ ಸಂವಿಧಾನ ಬದಲಾಯಿಸಲು ಅವಕಾಶ ಆಗದಂತೆ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಿ ಎಂದು ವಿನಂತಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೇರಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version