ಚಾಮರಾಜನಗರ/ಮೈಸೂರು: ಯಾವುದೇ ವಿಚಾರದಲ್ಲೂ ಮೌಢ್ಯ ಇರಬಾರದು (Superstition) ಎಂದು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮುಖ್ಯಮಂತ್ರಿಯಾಗಿ 13ನೇ ಬಾರಿ ಚಾಮರಾಜ ನಗರಕ್ಕೆ ಭೇಟಿ (Chamaraja nagara visit) ನೀಡುವ ಮೂಲಕ ಜಿಲ್ಲೆಗೆ ಅಂಟಿದ್ದ ಕಳಂಕವನ್ನು ಶಾಶ್ವತವಾಗಿ ತೊಡೆದು ಹಾಕಿದ್ದಾರೆ.
ಶಾಪಗ್ರಸ್ತ ಹಣೆಪಟ್ಟಿ ಹೊತ್ತ ನಗರವಾದ ಚಾಮರಾಜ ನಗರಕ್ಕೆ ಬುಧವಾರ ಭೇಟಿ ನೀಡಿದ ಅವರು, ನಾನು ಚಾಮರಾಜನರಕ್ಕೆ ಅಂಟಿದ್ದ ಮೌಢ್ಯವನ್ನು ತೊಡೆದು ಹಾಕಿದ್ದೇನೆ, ಕಳೆದ ಬಾರಿ ಸಿಎಂ ಆಗಿ 12 ಭೇಟಿ ನೀಡಿದ್ದೆ. ಆದರೆ, 5 ವರ್ಷ ಗಟ್ಟಿಯಾಗಿ ಆಡಳಿತ ನಡೆಸಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅಧಿಕಾರ ಪಡೆಯುವುದು, ಕಳೆದುಕೊಳ್ಳುವುದು ಮೌಢ್ಯದ ಮೇಲೆ ನಿಂತಿರುವುದಿಲ್ಲ, ಅದು ಜನರ ಆಶೀರ್ವಾದ ಮತ್ತು ರಾಜಕೀಯ ಬೆಳವಣಿಗೆಗಳ ಮೇಲೆ ನಿಂತಿರುತ್ತದೆ ಎಂದು ಹೇಳಿದರು.
ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳುವರು ಎಂಬ ಮೂಢನಂಬಿಕೆ ಬಹು ಕಾಲದಿಂದಲೇ ಇತ್ತು. ಮೂಢನಂಬಿಕೆ ಹಿನ್ನೆಲೆಯಲ್ಲಿ ಸಿಎಂ ಸೇರಿ ಹಲವು ಜನಪ್ರತಿನಿಧಿಗಳು ಚಾಮರಾಜನಗರ ಭೇಟಿಗೆ ಹಿಂದೇಟು ಹಾಕುತ್ತಿದ್ದರು. ಮುಖ್ಯಮಂತ್ರಿಗಳಾಗಿದ್ದವರು. ಜಿಲ್ಲೆಗೆ ಬಂದರೂ ಪಟ್ಟಣಕ್ಕೆ ಬಾರದೆ ಹೋಗುತ್ತಿದ್ದರು. ಈ ಮೌಢ್ಯಕ್ಕೆ ಹಿಂದಿನ ಕೆಲವು ಸಿಎಂಗಳು ಚಾಮರಾಜ ನಗರ ಭೇಟಿಯ ಬಳಿಕ ಅಧಿಕಾರ ಕಳೆದುಕೊಂಡಿದ್ದೂ ಕಾರಣವಾಗಿತ್ತು. ಆದರೆ, ಸಿದ್ದರಾಮಯ್ಯ ಈ ಮೌಢ್ಯವನ್ನು ವಿರೋಧಿಸುವವರಾಗಿ ಚಾಮರಾಜ ನಗರದ ಮೌಢ್ಯಕ್ಕೆ ಸಡ್ಡು ಹೊಡೆದೇ ಭೇಟಿ ನೀಡಿದ್ದರು. ಆದರೆ, ಅವರ ಅಧಿಕಾರ ಸ್ಥಿರವಾಗಿ ಉಳಿದಿತ್ತು. ದೇವರಾಜ ಅರಸು ಅವರ ಬಳಿಕ ಐದು ವರ್ಷದ ಆಡಳಿತ ಪೂರ್ಣಗೊಳಿಸಿದ ಖ್ಯಾತಿಯೂ ಅವರಿಗೆ ಬಂದಿತ್ತು.
ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಇಲ್ಲಿ ಭೇಟಿ ನೀಡಿದ್ದರಾದರೂ ಅಧಿಕಾರದ ಕೊನೆ ದಿನಗಳಲ್ಲಿ ಆಗಿತ್ತು. ಅಲ್ಲಿವರೆಗೆ ಬಂದಿರಲಿಲ್ಲ.
ಮಹದೇಶ್ವರ ಬೆಟ್ಟದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಮಂಗಳವಾರವೇ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ತಂಗಿದ್ದರು. ಬೆಳಗ್ಗೆ ಅಲ್ಲಿ ದೇವರ ದರ್ಶನ ಮಾಡಿ, ಬೆಳ್ಳಿ ರಥೋತ್ಸವದಲ್ಲಿ ಪಾಲ್ಗೊಂಡರು. ಸಾಮೂಹಿಕ ವಿವಾಹದಲ್ಲಿ ವಧೂವರರನ್ನು ಹರಸಿದರು. ಬಳಿಕ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡರು.
ಮಹದೇಶ್ವರ ಬೆಟ್ಟಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಅಧಿಕಾರಿಗಳು ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಮಲೆಮಾದಪ್ಪನಿಗೆ ಸೇರಿದ 122 ಎಕರೆ ಜಮೀನು ಸಂಪೂರ್ಣ ಹಿಡಿತದಲ್ಲಿ ಇಲ್ಲ. ಒತ್ತುವರಿಯಾಗಿದೆ, ಒತ್ತುವರಿ ತೆರವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ದೇವಾಲಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಸಂಪೂರ್ಣ ಕಡಿವಾಣ ಹಾಕಬೇಕು, ಮಲೆಮಹದೇಶ್ವರ ಬೆಟ್ಟಕ್ಕೆ ನೀರಿನ ಸಮಸ್ಯೆ ಇದೆ. ಕಾವೇರಿ ನದಿ ಬರಿದಾಗಿರುವುದರಿಂದ ಸಮರ್ಪಕ ನೀರು ಲಭ್ಯವಾಗುತ್ತಿಲ್ಲ. ತಮಿಳುನಾಡು-ಕರ್ನಾಟಕ ಗಡಿಯ ಪಾಲಾರ್ ಸಮೀಪ ಇರುವ ಪಂಪ್ ಹೌಸ್ ಗೆ ಪರ್ಯಾಯ ಪೈಪ್ ಲೈನ್ ಅಳವಡಿಸಬೇಕು. ಇದಕ್ಕಾಗಿ ಹೆಚ್ಚುವರಿ ಅನುದಾನ ನೀಡುವಂತೆ ಅಧಿಕಾರಿಗಳ ಮನವಿ ಮಾಡಿದರು.
ಇದನ್ನೂ ಓದಿ: CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
ಬುಡಕಟ್ಟು ಆಶ್ರಮ ಶಾಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ
ಮಲೈ ಮಹದೇಶ್ವರ ಬೆಟ್ಟದದಿಂದ ಚಾಮರಾಜ ನಗರಕ್ಕೆ ಬರುವ ದಾರಿ ಮಧ್ಯೆ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ ಧಿಡೀರ್ ಭೇಟಿ ನೀಡಿದ ಸಿಎಂ ಅವರು ಮಕ್ಕಳ ಜತೆ ಮಾತನಾಡಿದರು.
ಮಕ್ಕಳ ಊಟ, ಪಾಠ ಹಾಗೂ ವಸತಿ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದ ಅವರು, ಕರ್ನಾಟಕದ ಸಿಎಂ ಯಾರೂ ಅಂತ ಗೊತ್ತಾ ಎಂದು ಕೇಳಿದರು. ಮಕ್ಕಳು ಸಿದ್ದರಾಮಯ್ಯ ಎಂದು ಹೇಳಿದಾಗ ಇನ್ನೊಮ್ಮೆ ಜೋರಾಗಿ ಹೇಳಿಸಿ ಖುಷಿಪಟ್ಟರು. ಮಕ್ಕಳ ತಟ್ಟೆಯಲ್ಲಿ ಊಟ ರುಚಿ ನೋಡಿದ ಸಚಿವ ಮಹಾದೇವಪ್ಪ ಅವರು, ಊಟ ಚೆನ್ನಾಗಿದೆ ಎಂದು ಬಾಯಿ ಚಪ್ಪರಿಸಿದರು.