Site icon Vistara News

ಪ್ರಧಾನಿ ಮೋದಿಗಾಗಿ ಊರುಗೋಲು ಹಿಡಿದು ಮಲೈ ಮಹದೇಶ್ವರ ಬೆಟ್ಟ ಹತ್ತಿದ ಶತಾಯುಷಿ

Elderly woman climbs Malai Mahadeshwara Hill

ಚಾಮರಾಜನಗರ: ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಶತಾಯುಷಿಯೊಬ್ಬರು ಪಾದಯಾತ್ರೆ ಮೂಲಕ ಮಲೈ ಮಹದೇಶ್ವರ ಬೆಟ್ಟ ಹತ್ತಿ ಪಾರ್ಥಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಭಕ್ತ ಸಾಗರವೇ ಹರಿದು ಬರುತ್ತಿದೆ. ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Maha Shivaratri 2024: ಶಿವರಾತ್ರಿ ಆಚರಣೆಯ ಮಹತ್ವ ಮತ್ತು ಹಿನ್ನೆಲೆ ತಿಳಿಯೋಣ…

ಈ ಪಾದಯಾತ್ರೆಯಲ್ಲಿ ತುಮಕೂರಿನ ತಿಪಟೂರು ಮೂಲದ ಶತಾಯುಷಿ 102 ವರ್ಷದ ಪಾರ್ವತಮ್ಮ ಎಂಬುವವರು ಪಾದಯಾತ್ರೆ ಮೂಲಕ ಬೆಟ್ಟ ಹತ್ತಿದ್ದಾರೆ. ದೇಶಕ್ಕೆ ಒಳಿತಾಗಬೇಕು ಜತೆಗೆ ರೈತರು ಬೆಳೆದ ಬೆಳೆಯು ಉತ್ತಮ ಫಸಲು ಕೊಡುವಂತಾಗಲಿ. ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಬಾರದಿರಲಿದೆ ಎಂದು ಮಾದಪ್ಪನನ್ನು ಪ್ರಾರ್ಥಿಸಿದರು.

ಇವೆಲ್ಲದರ ಜತೆಗೆ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾನೆ ಎಂದು ಶತಾಯುಷಿ ಪಾರ್ವತಮ್ಮ ತಿಳಿಸಿದ್ದಾರೆ. ಸುಮಾರು 18 ಕಿ.ಮೀ ಕಾಲ್ನಡಿಯ ಮೂಲಕ ಕೈಯಲ್ಲಿ ಊರುಗೋಲು ಹಿಡಿದು ಬೆಟ್ಟವನ್ನು ಹತ್ತಿ, ಮಾದಪ್ಪನ ದರ್ಶನ ಪಡೆದಿದ್ದಾರೆ. ಪಾರ್ವತಮ್ಮನವರು 5-6 ವರ್ಷಗಳಿಂದ ಪಾದಯಾತ್ರೆ ಮೂಲಕವೇ ಬೆಟ್ಟವನ್ನು ಏರಿತ್ತಿದ್ದಾರೆ. 102 ವರ್ಷದ ಅಜ್ಜಿಯ ಭಕ್ತಿ ಹಾಗೂ ಉತ್ಸಾಹ ಕಂಡು ಸಾರ್ವಜನಿಕರು ಬೆರಗಾಗಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಕ್ಸ್‌ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಚಾಟಿ ಬೀಸಿದ್ದಾರೆ. 102 ವರ್ಷದ ಅಜ್ಜಿಯೊಬ್ಬರು ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಸಾಗಿ, ರಾಷ್ಟ್ರದ ಹಿತದೃಷ್ಟಿಯಿಂದ ಮೋದಿರುವರು ಮತ್ತೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೂರ್ಖತನವನ್ನು ಪ್ರದರ್ಶಿಸುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರಿಗೆ, ಭಾರತದ ಮೂಲೆ ಮೂಲೆಯಲ್ಲೂಈಗ ಉತ್ತರ ಸಿಕ್ಕಿದೆ. ರಾಷ್ಟ್ರ ಮತ್ತು ನಮ್ಮ ಪ್ರಧಾನಿಯ ಬಗ್ಗೆ ಈ ಅಜ್ಜಿಯ ನಿಸ್ವಾರ್ಥ ಭಕ್ತಿ ಮತ್ತು ಪ್ರೀತಿಗೆ ನಾವು ತಲೆಬಾಗುತ್ತೇವೆ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version