ಚಾಮರಾಜನಗರ: ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಆಟೋ ಓಡಿಸಿಕೊಂಡು ಇದ್ದಿದ್ದರೆ ಆತ ಜೀವಂತವಾಗಿ ಇರುತ್ತಿದ್ದನೇನೊ. ಆಟೋ ಚಾಲಕನೊಬ್ಬ ಪತ್ನಿ ಇದ್ದರೂ ಬೇರೆ ಹೆಂಗಸಿನ ಸಹವಾಸ ಮಾಡಿ ಶಿವನ ಸಮುದ್ರದಲ್ಲಿ ಹೆಣವಾದ ಪ್ರಕರಣ ಇದು. ಕಳೆದ ಒಂದು ವಾರದ ಹಿಂದೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದಲ್ಲಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರ ತಂಡ ಬಂದು ನಿಂತಿದ್ದು ರಾಮನಗರದಲ್ಲಿ.
ಇದನ್ನೂ ಓದಿ | ನ್ಯಾಯ ಪಡೆಯಲು ಅನ್ಯಾಯದ ಮಾರ್ಗ ಹಿಡಿದರು: ವೃದ್ಧನ ಮನೆಯಲ್ಲಿ ₹2 ಕೋಟಿ ಕದ್ದರು
ಕೊಲೆಯಾದ ವ್ಯಕ್ತಿ ಸೈಯದ್ ಆರೀಫ್ ಪಾಷಾ ಅಲಿಯಾಸ್ ಬರ್ನಿಂಗ್ ಬಾಬಾ. ಈತ ಮೂಲತಃ ರಾಮನಗರದ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗೆ ಇದ್ದವನಿಗೆ ಅದ್ಯಾವ ಕೆಟ್ಟ ಯೋಚನೆ ಬಂತೋ! ತನ್ನದೇ ಊರಿನ ಸೈಯದ್ ಸಿಕಂದರ್ ಎಂಬಾತನ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಸಿಕಂದರ್‌ಗೆ ಮೂವರು ಪತ್ನಿಯರಿದ್ದು, ಇವರಲ್ಲಿ ಒಬ್ಬಳ ಜತೆ ಆರೀಫ್ ಪಾಷಾ ಸಂಬಂಧ ಇಟ್ಟುಕೊಂಡಿದ್ದ.
ಈ ವಿಚಾರ ತಿಳಿದ ಸಿಕಂದರ್ ಇಬ್ಬರಿಗೂ ಬುದ್ಧಿವಾದ ಹೇಳಿದ್ದ. ಆದರೆ ಸಿಕಂದರ್ ಮಾತು ಕೇಳದೇ ಇಬ್ಬರೂ ತಮ್ಮ ಚಟುವಟಿಕೆ ಮುಂದುವರಿಸಿದ್ದರು. ಇದರಿಂದ ಸಿಡಿದೆದ್ದ ಸಿಕಂದರ್ ತನ್ನ ಸ್ನೇಹಿತರ ಜತೆ ಸೇರಿ ಸೈಯದ್ ಆರೀಫ್ ಪಾಷಾ ಹತ್ಯೆಗೆ ಸಂಚು ರೂಪಿಸಿದ. ಶಿವನಸಮುದ್ರದ ದರ್ಗಾ ದರ್ಶನ ಮಾಡಿಕೊಂಡು ಬರೋಣ ಎಂದು ಕರೆದುಕೊಂಡು ಬಂದ ಸಿಕಂದರ್, ಸೈಯದ್ ಆರೀಪ್ ಪಾಷಾನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಏನೂ ಗೊತ್ತಿಲ್ಲದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.
ತನಿಖೆ ನಡೆಸಿದ ಪೊಲೀಸರು
ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೈಯದ್ ಸಿಕಂದರ್, ಈತನ ಸ್ನೇಹಿತರಾದ ಮುಸಾವೀರ್, ಶೌಕತ್ ಅಲಿ, ಹಬೀಬ್ ವುಲ್ಲಾ, ಸೈಯದ್ ಸಲೀಂ ಎಂಬುವವರನ್ನು ಬಂಧಿಸಿರುವುದಾಗಿ ಎಸ್‌ಪಿ ಶಿವಕುಮಾರ್ ತಿಳಿಸಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ | ಹೆಣ್ಣಿನಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್ ಡ್ರೆಸ್ಸರ್ ಕೊಲೆ, ರಿಕ್ಷಾ ಚಾಲಕನ ಕೃತ್ಯ