ಚಾಮರಾಜನಗರ: ಸಹಾಯಕ ಚುನಾವಣಾಧಿಕಾರಿಯನ್ನೇ ಪೊಲೀಸರು ಮತ ಎಣಿಕೆ ಕೇಂದ್ರದ ಒಳಕ್ಕೆ ಬಿಡದ ಘಟನೆ ಇಲ್ಲಿನ ಸ್ಟ್ರಾಂಗ್ ರೂಂ ಬಳಿ ನಡೆದಿದೆ.
ಚಾಮರಾಜನಗರ ಮತ ಎಣಿಕೆ ಕೇಂದ್ರದಲ್ಲಿ, ಭದ್ರತೆಯ ನೆಪದಲ್ಲಿ ಸಹಾಯಕ ಚುನಾವಣಾಧಿಕಾರಿಯಾದ ತಹಸೀಲ್ದಾರರನ್ನೇ ಪೊಲೀಸರು ಬಿಡದ ಕಾರಣ ಸ್ಟ್ರಾಂಗ್ ರೂಂ ತೆರೆವ ಪ್ರಕ್ರಿಯೆ ಕೆಲಕಾಲ ವಿಳಂಬವಾಯಿತು. ಇದರಿಂದ ತಹಸೀಲ್ದಾರ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಟ್ರಾಂಗ್ ರೂಂ ಕೀ ಹೊಂದಿದ್ದ ತಹಸೀಲ್ದಾರ್ ಬಸವರಾಜು ಅವರನ್ನು ಪೊಲೀಸರು ಒಳಬಿಡಲಿಲ್ಲ. ಅವರ ಕೀ ಪೌಚ್ ಮೊಬೈಲ್ ರೀತಿ ಇದ್ದ ಕಾರಣ, ಮೊಬೈಲ್ ಹೊಂದಿದ್ದಾರೆಂದು ಪೊಲೀಸರು ಒಳಬಿಡಲಿಲ್ಲ. ತಾನು ತಹಸೀಲ್ದಾರ್ ಎಂದು ಹೇಳಿದರೂ ಪೊಲೀಸರು ಜಗ್ಗಲಿಲ್ಲ. ಯಾರಾದರೇನು, ಮೊಬೈಲ್ ಬಿಡುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಟ್ರಾಂಗ್ ರೂಂನತ್ತ ತೆರಳಿದರು.