ಚಾಮರಾಜನಗರ: ತಮಗೆ ನಿವೇಶನ ಬೇಕು ಎಂದು ಕೇಳಲು ಬಂದ ಮಹಿಳೆಗೆ ವಸತಿ ಸಚಿವ ವಿ. ಸೋಮಣ್ಣ ಕಪಾಳಕ್ಕೆ ಹೊಡೆದಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಹಂಗಳ ಗ್ರಾಮದ ಮಹಿಳೆ ಕೆಂಪಮ್ಮ ಅವರ ಕೆನ್ನೆಗೆ ಬಾರಿಸಿದ್ದಾರೆ.
ಹಂಗಳ ಗ್ರಾಮದ ೧೭೫ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಧ್ಯಾಹ್ನ ೩.೩೦ಕ್ಕೆ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ ೬.೩೦ಕ್ಕೆ ಆಗಮಿಸಿದರು. ಈ ವೇಳೆ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಯಿತು.
ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿಗೆ ಓರ್ವ ಮಹಿಳೆ ತೆರಳಿದರು. ಈ ಸಮಯದಲ್ಲಿ ಕೋಪಗೊಂಡ ಸೋಮಣ್ಣ, ಸಿಟ್ಟಿನಿಂದ ಮಹಿಳೆಯ ಕೆನ್ನೆಗೆ ಹೊಡೆದರು. ತಕ್ಷಣವೇ ಪೊಲೀಸ್ ಸಿಬ್ಬಂದಿ ಆ ಮಹಿಳೆಯನ್ನು ಹೊರಕ್ಕೆ ಕರೆದೊಯ್ದರು.
ಕಪಾಳಕ್ಕೆ ಏಟು ಬಿದ್ದ ಮಹಿಳೆಯ ಕಂಪಮ್ಮ ಅವರ ಗಂಡ ನಿಧನರಾಗಿದ್ದಾರೆ. ಮೂರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ. ತಮ್ಮ ಕುಟುಂಬ ಕಷ್ಟದಲ್ಲಿದೆ ನಿವೇಶನ ನೀಡಿ ಎಂದು ಕೇಳಲು ಬಂದಿದ್ದರು. ನಿವೇಶನ ನೀಡುವುದಾಗಿ ಈ ಹಿಂದೆ ಸೋಮಣ್ಣ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೂ ಪದೇಪದೇ ಮಹಿಳೆ ಕೋರಿಕೆ ಸಲ್ಲಿಸುತ್ತಿದ್ದದ್ದನ್ನು ಕಂಡು ಕೋಪಗೊಂಡು ಸೋಮಣ್ಣ ಈ ರೀತಿ ವರ್ತಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ನಾನು ಮುಸ್ಲಿಮರ ಮತ ಕೇಳಿಲ್ಲ, ಅವರು BJPಗೆ ವೋಟ್ ಹಾಕುವುದೂ ಇಲ್ಲ: ವಿ. ಸೋಮಣ್ಣ ಹೀಗೆ ಹೇಳಿದ್ದೇಕೆ?