Site icon Vistara News

MM Hills : ಮಲೆಮಹದೇಶ್ವರ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ; ಒಬ್ಬರು ಸಾವು, ಮೂವರು ಗಂಭೀರ

MM Hills

ಚಾಮರಾಜನಗರ: ಕೌಟುಂಬಿಕ ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ನಾಲ್ವರು ವಿಷ ಸೇವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟರೆ, ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಲೆಮಹದೇಶ್ವರ ಬೆಟ್ಟ (MM Hills) ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿದೆ.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತ ದುರ್ದೈವಿ. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಪರಿಶೀಲನೆ ನಡೆಸಿದಾಗ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ. ಕೂಡಲೇ ಅಲ್ಲಿದ್ದವರು ನಾಲ್ವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಹದೇವನಾಯಕ ಅದಾಗಲೇ ಉಸಿರು ಚೆಲ್ಲಿದ್ದಾರೆ. ಮೂವರು ಮಹಿಳೆಯರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Electric shock : ಫ್ಯಾನ್‌ ಸ್ವಿಚ್‌ ಆನ್‌ ಮಾಡುವಾಗ ಕರೆಂಟ್‌ ಶಾಕ್‌; ವಿದ್ಯುತ್‌ ಕಂಬದಲ್ಲಿ ನೇತಾಡಿದ ಲೈನ್‌ಮ್ಯಾನ್‌ ಡೆಡ್‌ ಬಾಡಿ

ಪತಿಯ ಪೊಸೇಸೀವ್‌ನೆಸ್‌ಗೆ ಬೇಸತ್ತ ಪತ್ನಿ ಪರಾರಿ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಜಗಳ ನಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಇಲ್ಲೂ ಅಗಿರುವುದು ಅದೇ ರೀತಿಯ ಘಟನೆ. ಪತಿಯ ಅತಿಯಾದ ಕಾಳಜಿ, ಪೊಸೇಸೀವ್‌ನೆಸ್‌ನಿಂದ ಬೇಸತ್ತ ಪತ್ನಿ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪತಿ ಇದೀಗ ದೂರು ಕೊಟ್ಟಿದ್ದಾರೆ.

ಗೆಳೆಯರಿಗೆ ಡಿಯರ್ ಎಂದು ಮೆಸೇಜ್‌ ಮಾಡಬೇಡ, ಅಣ್ಣ, ಸರ್ ಎಂದು ಮೆಸೇಜ್ ಮಾಡು ಎಂದು ಪತಿ ಹೇಳಿದ್ದಕ್ಕೆ ಪತ್ನಿ ಮನೆಯನ್ನೇ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಗಂಡ ಬೈದ ಎನ್ನುವ ಕಾರಣವನ್ನೇ ನೆಪವಾಗಿಟ್ಟುಕೊಂಡು ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ಪತ್ನಿ ಮೊಬೈಲ್‌ಗೆ Good morning dear ಎಂಬ ಮೆಸೇಜ್ ಬಂದಿತ್ತು. ಇದನ್ನ ನೋಡಿದ ಪತಿ ದಿಲೀಪ್ ಕುಮಾರ್, ʼʼಡಿಯರ್ ಅಂತ ಮೆಸೇಜ್ ಹಾಕ್ಬೇಡ. ಸರ್ ಅಂತ ಕಳಿಸುʼʼ ಎಂದು ಪತ್ನಿಗೆ ಸೂಚಿಸಿದ್ದರು. ಇದರಿಂದ ಕೆರಳಿದ ಪತ್ನಿ ವಾಗ್ವಾದ ನಡೆಸಿದ್ದರು. ಇದು ಅತಿರೇಕಕ್ಕೆ ತಿರುಗಿ ದಂಪತಿ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು.

ಬಳಿಕ ʼʼಸರಿ ಹೋಗ್ಲಿ. ಕೋಪ ಮಾಡ್ಕೋಬೇಡʼʼ ಎಂದು ಮಗುವನ್ನು ಕರೆದುಕೊಂಡು ದಿಲೀಪ್‌ ಕುಮಾರ್‌ ರೂಂ ಒಳಗೆ ಹೋಗಿದ್ದರು. ಕೆಲವು ಸಮಯಗಳ ಬಳಿಕ ಕೆಲಸದವರು ದಿಲೀಪ್‌ ಬಳಿ ಬಂದು ಊಟ ಕೊಡಲು ಹೇಳಿ, ನಿಮ್ಮ ಪತ್ನಿ ಆಚೆ ಹೋದರು ಎಂದು ಹೇಳಿದಾಗಲೇ ಪತ್ನಿ ಮನೆ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಎಷ್ಟೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ದಿಲೀಪ್ ದೂರು ನೀಡಿದ್ದರು. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಗದಗ: ವಾಟ್ಸ್ಆ್ಯಪ್‌ ಗ್ರೂಪ್‌ಗೆ ಬಂದಿದ್ದ ಮೆಸೇಜ್‌ವೊಂದನ್ನು ತೆರೆದು ನೋಡಿದ ವ್ಯಾಪಾರಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಮೂರೂವರೆ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್‌ ವಂಚಕರು ಹಣ ಲಪಟಾಯಿಸಿದ್ದಾರೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನಿಲ್‌ ಮಲ್ಲಪ್ಪ ಚಿನ್ನಾಪುರ ಎಂಬುವವರೇ ಸೈಬರ್‌ ವಂಚನೆಗೆ ಒಳಗಾದ ವ್ಯಕ್ತಿ. ನಗರದ ಜಿ.ಎಸ್. ಪಾಟೀಲ್‌ ಲೇಔಟ್‌ನಲ್ಲಿ ವಾಸವಾಗಿರುವ ಇವರು, ಮೊದಲು ಜಿ.ಎಸ್. ಪಾಟೀಲ್‌ ಲೇಔಟ್‌ ವಾಟ್ಸ್ಆ್ಯಪ್‌ ಗ್ರೂಪ್‌ನಲ್ಲಿ ಯುನಿಯನ್ ಬ್ಯಾಂಕ್‌ನ ಎಪಿಕೆ ಹೆಸರಿನಲ್ಲಿ ಬಂದಿದ್ದ ಲಿಂಕ್ ಮೆಸೇಜ್ ಅನ್ನು ತೆರದು ನೋಡಿದ್ದಾರೆ. ಇದಾದ ಬಳಿಕ ಮರುದಿನ ಫೋನ್‌ ಕರೆಯೊಂದು ಬಂದಿದೆ. ಯೂನಿಯನ್ ಬ್ಯಾಂಕ್ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯು, ನಿಮ್ಮ ಬ್ಯಾಂಕ್ ಖಾತೆ ಡಿಆಕ್ಟಿವೇಟ್‌ ಆಗಿದೆ ಎಂದು ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಇದಾದ ಅರ್ಧಗಂಟೆಯಲ್ಲೇ ಅನಿಲ್‌ ಅವರ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಮೊದಲ ಹಂತದಲ್ಲಿ 50 ಸಾವಿರ ರೂ, 2ನೇ ಹಂತದಲ್ಲಿ 2,25,000 ರೂ. ಹೀಗೆ ಒಟ್ಟು 3,74,998 ರೂಗಳನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಈ ಕುರಿತು ಸೈಬರ್‌ ವಂಚನೆಗೆ ಒಳಗಾದ ಅನಿಲ್ ನಗರದ ರಾಜೀವ್‌ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version