ಚಾಮರಾಜನಗರ: ಮಾವನೊಬ್ಬ ಅಳಿಯನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರದ ಜನ್ನೂರು ಗ್ರಾಮದಲ್ಲಿ (Murder Case) ನಡೆದಿದೆ. ಉಮೇಶ್ (28) ಹತ್ಯೆಯಾದವನು. ಮಾವ ನಂಜುಂಡಯ್ಯ ಆರೋಪಿ ಆಗಿದ್ದಾರೆ.
ಹುಬ್ಬಳ್ಳಿ ಮೂಲದ ಉಮೇಶ್ (28) ನಿತ್ಯ ಕುಡಿದು ಬಂದು ನಂಜುಂಡಯ್ಯರ ಮಗಳಿಗೆ ತೊಂದರೆ ಕೊಡುತ್ತಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ಮಾತ್ರವಲ್ಲ ಕುಡಿದು ಬಂದು ಪತ್ನಿಗೆ ಹೊಡೆದು ಬಡಿದು ಮಾಡುತ್ತಿದ್ದ.
ಹೀಗೆ ನಿನ್ನೆ ಗುರುವಾರ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ರೋಸಿ ಹೋಗಿ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ನಂಜುಂಡಯ್ಯ ಕೊಲೆ ಮಾಡಿದ್ದಾರೆ. ಉಮೇಶ್ ಮುಖಕ್ಕೆ ಕೊಡಲಿಯಿಂದ ಹೊಡೆದು ಛಿದ್ರ ಮಾಡಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುದೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುದೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾವ ನಂಜುಂಡಯ್ಯನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : Suspicious death : ಹಾಸನದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು; ಆಕೆಯ ಪತಿಗೆ ಇತ್ತಾ ಮತ್ತೊಬ್ಬಳ ಸಹವಾಸ
ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಳೆ ವ್ಯಾಪಾರಿಯ ಕತ್ತು ಸೀಳಿ ಕೊಲೆ
ಯಾದಗಿರಿ: ಬಳೆ ವ್ಯಾಪಾರಿಯೊಬ್ಬನನ್ನು ಬರ್ಬರವಾಗಿ ಕತ್ತು ಸೀಳಿ ಕೊಲೆ (Murder Case) ಮಾಡಲಾಗಿದ್ದು, ಕೊಲೆ ಮಾಡಿದ (bangles merchant killed) ಪಕ್ಕದ ಅಂಗಡಿಯ ವ್ಯಾಪಾರಿಯೂ ಹೆಣದ ಪಕ್ಕದಲ್ಲೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ಯಾದಗಿರಿ (Yadgir news) ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿಯ ಬಳೆ ವ್ಯಾಪಾರಿ ಮಲ್ಲಪ್ಪ (38) ಕೊಲೆಯಾದ ವ್ಯಕ್ತಿ. ಬುರ್ರಾನ್ ಎಂಬಾತ ಕೊಲೆ ಮಾಡಿದ ವ್ಯಕ್ತಿ. ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಕೊಲೆ ನಡೆದಿದೆ.
ತಿಂಥಣಿ ಗ್ರಾಮದಲ್ಲಿ ಮೌನೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು, ಇಂದು ಸಂಜೆ ರಥೋತ್ಸವ ಕೂಡ ಇದೆ. ಈ ಜಾತ್ರೆಯಲ್ಲಿ ಅಂಗಡಿ ಹಾಕಲೆಂದು ಕೊಲೆಯಾದವನು ಹಾಗೂ ಆರೋಪಿ ಇಬ್ಬರೂ ಬಂದಿದ್ದರು. ಇಬ್ಬರೂ ಅಕ್ಕಪಕ್ಕದಲ್ಲಿ ಅಂಗಡಿ ಹಾಕಿದ್ದಾರೆ. ರಾತ್ರಿ, ಬಳೆ ವ್ಯಾಪಾರಿ ಮಲ್ಲಪ್ಪ, ಬಳೆ ವ್ಯಾಪಾರದ ವಿಷಯದಲ್ಲಿ ಹಾಗೂ ಬುರ್ರಾನ್ ಪತ್ನಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದಾಗಿ ಸಿಟ್ಟಿಗೆದ್ದ ಬುರ್ರಾನ್, ಚಾಕುವಿನ ಮೂಲಕ ಕೋಳಿ ಕತ್ತು ಕಯ್ಯುವಂತೆ ಮಲ್ಲಪ್ಪನ ಕತ್ತು ಸೀಳಿ ಹಾಕಿದ್ದಾನೆ.
ಬುರ್ರಾನ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವನಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ತಡರಾತ್ರಿ ಅಕ್ಕಪಕ್ಕದ ಅಂಗಡಿಯವರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಲ್ಲಪ್ಪನ ಮೃತದೇಹವನ್ನು ಸುರಪುರ ತಾಲೂಕು ಆಸ್ಪತ್ರೆಗೆ ಒಯ್ಯಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ