ಚಾಮರಾಜನಗರ: ಪಾಪಿ ತಮ್ಮನೊಬ್ಬ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಚಾಮರಾಜನಗರದ (chamarajanagara News) ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚೌಡಹಳ್ಳಿ ಗ್ರಾಮದ ಪ್ರಸಾದ್ (45) ಕೊಲೆಯಾದ ದುರ್ದೈವಿ. ಪ್ರಸಾದ್ ಸಹೋದರ ಕುಮಾರ್ (39) ಎಂಬಾತನಿಂದ ಈ ಕೃತ್ಯ ನಡೆದಿದೆ.
ಆರೋಪಿ ಕುಮಾರ್‌ನ ಕಾಮುಕತ್ವ ಎಷ್ಟರ ಮಟ್ಟಿಗೆ ಇತ್ತೆಂದರೆ, ಅತ್ತಿಗೆಗೆ ತನ್ನ ಜತೆ ಅನೈತಿಕ ಸಂಬಂಧ ಹೊಂದುವಂತೆ ಕಾಮುಕ ಮೈದುನ ನಿತ್ಯ ಪೀಡಿಸುತ್ತಿದ್ದನಂತೆ. ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಶನಿವಾರ ರಾತ್ರಿ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ನಿನ್ನ ಹೆಂಡತಿ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದಿದ್ದಾನೆ.
ಇದರಿಂದ ಸಿಟ್ಟಾದ ಪ್ರಸಾದ್ ತಮ್ಮ ಕುಮಾರ್‌ಗೆ ಹೊಡೆಯಲು ಹೋಗಿದ್ದಾರೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಕುಮಾರ್ ಸಿಟ್ಟಿನಲ್ಲಿ ಅಣ್ಣ ಪ್ರಸಾದ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು
ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ
ಬೆಳಗಾವಿ: ವಿವಾದಾತ್ಮಕ ಜಮೀನಿನ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ (Family Fighting) ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಜಮೀನಿನಲ್ಲೇ ಎರಡು ಗುಂಪುಗಳು ಕುಡುಗೋಲು, ದೊಣ್ಣೆ ಹಿಡಿದು ಹೊಡೆದಾಡಿಕೊಂಡಿದ್ದಾರೆ.
ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ 7 ಜನರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಕತಿ ನಿವಾಸಿ ಅನಿಲ್ ಮುಂಗಾರಿ ಸೇರಿ 7 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಕೃಷಿಯಲ್ಲಿ ತೊಡಗಿದ್ದ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಕಾಕತಿ ನಿವಾಸಿ ಸಿದ್ದರಾಯಿ ತುಂಬರಿ ಎಂಬಾತ ಗುಂಡಾಗಳನ್ನು ಕರೆಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಿಲ್ ಮುಂಗಾರಿಗೆ ಸೇರಿದ ಜಮೀನು ಲಪಟಾಯಿಸಲು ಸಿದ್ದರಾಯಿ ತುಂಬರಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಕೋರ್ಟ್ ವಿಚಾರಣೆಯಲ್ಲಿರುವ ಜಮೀನು ಬಿಟ್ಟುಕೊಡುವಂತೆ ಸಿದ್ದರಾಯಿ ತುಂಬರಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದಾಗ ಅನಿಲ್ ಮುಂಗಾರಿ ಕುಟುಂಬಸ್ಥರ ಮೇಲೆ ಗುಂಡಾಗಳನ್ನು ಕರೆಯಿಸಿ ಹಲ್ಲೆ ನಡೆಸಿದ್ದಾನೆ. ಸದ್ಯ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ