ಚಾಮರಾಜನಗರ: ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮAಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮನ್ನು ತಾವು ಮಾರಿಕೊಂಡು ಹೋದವರು ಎಂದಿದ್ದಾರೆ. ಚಾಮರಾಜನಗರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ನಮ್ಮ ಸರ್ಕಾರದ ಮೇಲೆ ಬಂದಿದ್ದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಅದಕ್ಕೆ ಹೆದರಿರಲಿಲ್ಲ. ಡಿವೈಎಸ್‌ಪಿ ಗಣಪತಿ, ಡಿ.ಕೆ ರವಿ ಅವರ ಸಾವು, ಪರೇಶ್ ಮೇಸ್ತಾ ಸಾವು, ಒಂದಂಕಿ ಲಾಟರಿ ಇವುಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಅವುಗಳ ಬಿ ರಿಪೋರ್ಟ್ ಬಂದು ಬಿಜೆಪಿ ಆರೋಪಗಳು ಸುಳ್ಳು ಎಂದು ಈಗ ಸಾಬೀತಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಲಿ. ಇದಕ್ಕೆ ಉತ್ತರ ಕೊಡಲಾಗದೆ ಸುಳ್ಳಿನ ಸಾಮ್ರಾಟ ಸುಧಾಕರ್ ಅವರ ಕೈಲಿ ಉತ್ತರ ಕೊಡಿಸುತ್ತಾರೆ. ಈ ಸುಧಾಕರ ಅಲಿಬಾಬಾ ಮತ್ತು 40 ಜನ ಕಳ್ಳರ ತಂಡದ ಸದಸ್ಯ. ತನ್ನನ್ನು ತಾನು ಮಾರಿಕೊಂಡು ನಮ್ಮ ಪಕ್ಷ ಬಿಟ್ಟು ಹೋದ ಆಸಾಮಿ ಆತ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 36 ಮಂದಿ ಸಾವಿಗೀಡಾದಾಗ ಸುಧಾಕರ್ ಮತ್ತು ಸುರೇಶ್ ಕುಮಾರ್ ಅವರು ಬಂದಿದ್ದರು. ಈ ದುರಂತದಲ್ಲಿ ಸತ್ತವರು ಮೂರೇ ಜನ ಎಂದು ಸುಳ್ಳು ಹೇಳಿದ್ರು. ಹೀಗೆ ಹೆಣದ ಮೇಲೆ ರಾಜಕೀಯ ಮಾಡುವ ದುಷ್ಟರು ಅವರು. ನಮ್ಮ ಪಕ್ಷದ ಮುಖಂಡರೆಲ್ಲ ಜಿಲ್ಲಾಸ್ಪತ್ರೆಗೆ ಹೋಗಿ, ವೈದ್ಯರ ಜೊತೆ ಸಭೆ ಮಾಡಿದಾಗ ಆಮ್ಲಜನಕ ಇಲ್ಲದೆ ಸತ್ತವರು 36 ಜನ ಎಂಬುದನ್ನು ಅವರು ಒಪ್ಪಿಕೊಂಡರು. ಡಿ.ಕೆ ಶಿವಕುಮಾರ್ ಅವರು ರಾತ್ರಿಯಿಡಿ ನಿದ್ದೆ ಬಿಟ್ಟು ಪರಿಹಾರದ ಹಣ ವಿತರಣೆ ಮಾಡಿದರು. ಆದರೆ ಸರ್ಕಾರ ಈ ವರೆಗೆ ಸತ್ತವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಕೋರ್ಟ್ ಆದೇಶ ಆದಮೇಲೆ ಕೆಲವರಿಗೆ ಮಾತ್ರ ಪರಿಹಾರ ನೀಡಿದ್ದಾರೆ, ಇನ್ನುಳಿದವರಿಗೆ ಕೊಟ್ಟಿಲ್ಲ.
ನಾವು ಅಧಿಕಾರಕ್ಕೆ ಬಂದ ನಂತರ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ. ಸಾಮಾನ್ಯ ಕುಟುಂಬವೊಂದು 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ, ಹಾಗಾಗಿ ನೀವು ಒಂದು ಪೈಸೆ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿರುವುದಿಲ್ಲ. ಬಿಜೆಪಿಯವರು ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿ ಬಡವರು ಬದುಕದಂತೆ ಮಾಡಿದ್ದಾರೆ. ಹಾಗಾಗಿ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುತ್ತೇವೆ.
ಇದನ್ನೂ ಓದಿ : Karnataka Congress : ಡಾ. ಸುಧಾಕರ್ ಒಬ್ಬ ಪೆದ್ದ, ಅವನಿಗೆ ಸಿಎಜಿ ರಿಪೋರ್ಟ್ ಓದೋಕೆ ಬರಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬಿಜೆಪಿ ಅವರಿಂದ ಜನ ಇಂದು ಆತಂಕದಲ್ಲಿ ದಿನ ದೂಡಬೇಕಾದ ಸ್ಥಿತಿ ಇದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಮಾಡಿ ಒಡೆದಿರುವ ಜನರ ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಹನೂರಿನಲ್ಲಿ ನರೇಂದ್ರ ಅವರು ಗೆದ್ದರೆ ಅದು ನಾನು ಗೆದ್ದಂತೆ, ಕಾಂಗ್ರೆಸ್ ಪಕ್ಷ ಗೆದ್ದಂತೆ, ಸೋನಿಯಾ ಗಾಂಧಿ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಗೆದ್ದಂತೆ ಎಂದರು.