ಚಾಮರಾಜನಗರ: ಕಾಂಗ್ರೆಸ್ ಸರ್ಕಾರ ಇದ್ದಾಗ ಚಾಮರಾಜನಗರಕ್ಕೆ ಅನೇಕ ಕೊಡುಗೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಚಾಮರಾಜನಗರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಸಮಸಮಾಜ ನಿರ್ಮಾಣ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಈ ಸಮಾನತೆಗೆ ವಿರುದ್ಧವಾದುದ್ದು. ಅಸಮಾನತೆ ಇದ್ದರೆ ಜನರ ಶೋಷಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ. ಇದಕ್ಕೆ ಉದಾಹರಣೆ ಎಂದರೆ ನರೇಂದ್ರ ಮೋದಿ ಅವರು ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು ಇಲ್ಲ.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್,ಸಿ,ಪಿ/ಟಿ,ಎಸ್,ಪಿ ಕಾಯ್ದೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ಈ ಯೋಜನೆಗೆ 88,000 ಕೋಟಿ ರೂ. ಖರ್ಚು ಮಾಡಿದ್ದೇವೆ. ಮೋದಿ ಸರ್ಕಾರ ಅಲ್ಪಸಂಖ್ಯಾತರು, ದಲಿತರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಮನ್ ಕಿ ಬಾತ್ ನಲ್ಲಿ ನಿರುದ್ಯೋಗ, ಬೆಲೆಯೇರಿಕೆ ಬಗ್ಗೆ ಮೋದಿ ಒಂದಾದರೂ ಮಾತನಾಡುತ್ತಾರ?
ಮಹದೇಶ್ವರ ಬೆಟ್ಟಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಮ್ಮ ಸರ್ಕಾರ. ಚಾಮರಾಜನಗರಕ್ಕೆ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಿದ್ದು ನಾವು, ಕೃಷಿ ಕಾಲೇಜ್, ಕಾನೂನು ಕಾಲೇಜು, ಮೊರಾರ್ಜಿ ಶಾಲೆಗಳನ್ನು ನೀಡಿದವರು ನಾವು. 200ಕ್ಕೂ ಹೆಚ್ಚು ಭವನಗಳನ್ನು ನಿರ್ಮಾಣ ಮಾಡಿದ್ದು, 500 ಕೋಟಿ ಹಣ ನೀಡಿ ರಸ್ತೆ ಅಭಿವೃದ್ಧಿ ಮಾಡಿದ್ದು, 3.5 ಕೋಟಿ ಹಣ ಕೊಟ್ಟು ಚಾಮರಾಜೇಶ್ವರ ದೇವಾಲಯದ ರಥ ನಿರ್ಮಾಣ ಮಾಡಿಕೊಟ್ಟಿದ್ದು, ನಳಂದ ಬುದ್ಧ ವಿಹಾರಕ್ಕೆ 25 ಎಕರೆ ಜಮೀನು ನೀಡಿದ್ದು, ಹನೂರಿಗೆ 250 ಕೋಟಿ ನೀಡಿ ನೀರಿನ ವ್ಯವಸ್ಥೆ ಮಾಡಿದ್ದು, 1400 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದ್ದು, ಭಗೀರಥ ಜಯಂತಿ ಆರಂಭ ಮಾಡಿದ್ದು, ಉಪ್ಪಾರ ಅಭಿವೃದ್ಧಿ ನಿಗಮ ಮಾಡಿದ್ದು ನಮ್ಮ ಸರ್ಕಾರ. ಉಪ್ಪಾರರನ್ನು ಎಸ್,ಟಿ ಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ಮಾಡಲು ಆದೇಶ ನೀಡಿದ್ದು ನಾವು, ಮೋದಿ ಅವರು ಬಂದು 9 ವರ್ಷ ಆಯಿತು, ಚಾಮರಾಜನಗರಕ್ಕೆ ಅವರ ಕೊಡುಗೆ ಏನು? ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ಇದ್ದಾಗ 200 ಕೋಟಿ ಅನುದಾನ ನೀಡಿದ್ದೆ, ಈಗ ಬಿಜೆಪಿ 80 ಕೋಟಿ ರೂ. ನೀಡಿದೆ.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಚಾಮರಾಜನಗರ ಜಿಲ್ಲೆಗೆ 10,000 ಕೋಟಿ ರೂ. ಅನುದಾನ ನೀಡಿ ರಸ್ತೆ, ಚರಂಡಿ, ಆಸ್ಪತ್ರೆ, ಶಾಲೆಗಳನ್ನು ನಿರ್ಮಾಣ ಮಾಡಿದ್ದೆವು. ಹನೂರಿಗೆ ಕುಡಿಯುವ ನೀರು ಕೊಟ್ಟಿದ್ದು ನಮ್ಮ ಸರ್ಕಾರ. 78 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದು ನಾವು. ಮಹದೇವ ಪ್ರಸಾದ್ ಅವರು ಇಂದು ನಮ್ಮೊಂದಿಗಿಲ್ಲ, ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಚಾಮರಾಜನಗರದ ಅಭಿವೃದ್ಧಿಗೆ ಅವರ ಕೊಡುಗೆಯೂ ಇದೆ.
ಇದನ್ನೂ ಓದಿ : Padma Awards 2023 : ಮೋದಿ ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ ಅಂದ ಭೈರಪ್ಪ