ಬೆಂಗಳೂರು: ಚಾಮರಾಜಪೇಟೆ ಮೈದಾನದ ಕುರಿತು ಅನೇಕ ದಿನಗಳಿಂದ ನಡೆಯುತ್ತಿರುವ ವಿವಾದ ಇದೀಗ ಸ್ಪಷ್ಟವಾಗಿ ರಾಜಕೀಯ ತಿರುವು ಪಡೆದಿದೆ. ಮೈದಾನವನ್ನು ಬಿಬಿಎಂಪಿ ಸುಪರ್ದಿಗೆ ಪಡೆದುಕೊಂಡು ಇತರೆ ಸಾಮಾನ್ಯ ಮೈದಾನಗಳಂತೆಯೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಜುಲೈ 12ರಂದು ಕರೆ ನೀಡಿದ್ದ ಬಂದ್ ಯಶಸ್ವಿಯಾದ ಹಿನ್ನೆಲೆಯಲ್ಲಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶದ ಬಾಗಿಲು ತೆರೆದಿದೆ.
ಅನೇಕ ದಿನಗಳಿಂದ ಚಾಮರಾಜಪೇಟೆ ನಾಗರಿಕರ ಹಿತರಕ್ಷಣ ವೇದಿಕೆ ಹೆಸರಿನಲ್ಲಿ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ಸಮಯದಲ್ಲಿ ಬಿಜೆಪಿಯ ಪ್ರಮುಖ ರಾಜಕಾರಣಿಗಳಾರೂ ಇತ್ತ ಕಾಣಿಸಿಕೊಂಡಿರಲಿಲ್ಲ. ಇದೀಗ ಗುರುವಾರದ ದಿಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್ ರಂಗ ಪ್ರವೇಶಿಸಿದ್ದಾರೆ.
ಬಿಜೆಪಿಯ ಮತಗಳಿವೆ
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ 1957ರಿಂದಲೂ ಚುನಾವಣೆಗೆ ಒಳಪಡುತ್ತಿದೆ. ಕೆಲವೊಮ್ಮೆ ಅಭ್ಯರ್ಥಿಗಳ ಹೆಸರಿನಲ್ಲಿ ಗೆದ್ದರೆ ಕೆಲವೊಮ್ಮೆ ಪಕ್ಷದ ಹೆಸರಿಗೆ ಮತದಾರರು ಮಣೆ ಹಾಕಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ಒಟ್ಟಾಗಿವೆ ಎನ್ನುವುದು ಸತ್ಯವಾದರೂ ರಾಜಕೀಯ ತಂತ್ರಗಾರಿಕೆ ಬಳಸಿದರೆ ಹಿಂದು ಅಭ್ಯರ್ಥಿಯೂ ಗೆಲ್ಲಬಹುದು ಎಂದು ನಿರೂಪಿತವಾಗಿದೆ. ಈ ಹಿಂದೆ ಲಕ್ಷ್ಮೀದೇವಿ, ದಯಾನಂದ್ ಸಾಗರ್ ಮುಂತಾದವರಿಗೆ ಒಂದೊಂದೆ ಅವಕಾಶ ಸಿಕ್ಕಿದೆ. 1991ರಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ ಅವರು ಕಾಂಗ್ರೆಸ್‌ನ ಪ್ರಬಲ ಸ್ಪರ್ಧಿ ಆರ್.ವಿ. ದೇವರಾಜ್ ವಿರುದ್ಧ ಜಯ ಗಳಿಸಿದ್ದರು. 1999ರಲ್ಲಿ ಆರ್.ವಿ. ದೇವರಾಜ್ ಆಯ್ಕೆಯಾದರು. ನಂತರ 2004ರಲ್ಲಿ ಅಂದಿನ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಆಯ್ಕೆಯಾದ ಒಂದು ವರ್ಷದಲ್ಲೆ ಮಹಾರಾಷ್ಟ್ರ ರಾಜ್ಯಪಾಲರಾಗಿ ಆಯ್ಕೆಯಾದ ಎಸ್.ಎಂ. ಕೃಷ್ಣ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಂತರ 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿ.ಜಡ್ ಜಮೀರ್ ಅಹ್ಮದ್ ಖಾನ್ ಆಯ್ಕೆಯಾದರು. ಅಲ್ಲಿಂದ ಮುಂದಕ್ಕೆ ಕ್ಷೇತ್ರವನ್ನು ಜಮೀರ್ ಅಹ್ಮದ್ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ. 2008 ಹಾಗೂ 2013ರಲ್ಲಿ ಜೆಡಿಎಸ್‌ನಿಂದಲೇ ಗೆದ್ದು, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಿಸಿದರು.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಹೆಸರಿಡಿ: ಸಂಸದ ಪಿ.ಸಿ. ಮೋಹನ್
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇತ್ತೀಚಿನ ವರ್ಷಗಳಲ್ಲಿ ಜಯಿಸಿಲ್ಲ ಎಂದಾದರೂ ಬಿಜೆಪಿ ಮತಗಳಿವೆ. ಒಟ್ಟು ಏಳು ವಾರ್ಡ್‌ಗಳಿದ್ದು, ಮೂರರಲ್ಲಿ ಕಾಂಗ್ರೆಸ್, ತಲಾ ಎರಡರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿದ್ದರು. ಮುಸ್ಲಿಂ ಮತಗಳು ಒಟ್ಟಾಗಿ ಹಿಂದು ಮತಗಳು ವಿಭಜನೆಯಾದರೆ ಮುಸ್ಲಿಂ ಅಭ್ಯರ್ಥಿಯೇ ಗೆಲ್ಲುತ್ತಾರೆ. ಆದರೆ ಹಿಂದು ಮತಗಳನ್ನು ಕ್ರೋಢೀಕರಿಸಿಕೊಂಡು, ಮುಸ್ಲಿಂ ಸಮಯದಾಯದ ಇಬ್ಬರು ಅಭ್ಯರ್ಥಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಕಣಕ್ಕಿಳಿದರೆ ಬಿಜೆಪಿಗೆ ಗೆಲುವಿನ ಅವಕಾಶವಿದೆ.
ಯಶಸ್ವಿಯಾದ ಬಂದ್
ಚಾಮರಾಜಪೇಟೆ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಂ ಸಮುದಾಯ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ನಮಾಜ್ ಮಾಡುವ ಸಲುವಾಗಿ ಸಮುದಾಯದಿಂದ ಒಂದು ಗೋಡೆಯನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಅನೇಕ ವರ್ಷಗಳಿಂದ ಈ ಮೈದಾನವನ್ನು ಈದ್ಗಾ ಮೈದಾನ ಎಂದೇ ಕರೆಯಲಾಗುತ್ತಿದ್ದು, ಆಗಿಂದಾಗ ಹಿಂದು ಸಮುದಾಯ ಅಥವಾ ಸಂಘಟನೆಗಳು ಕಾರ್ಯಕ್ರಮ ನಡೆಸಲು ಅನುಮತಿ ಕೇಳುತ್ತಿದ್ದವು. ಆದರೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸ್ಪಷ್ಟತೆ ಇಲ್ಲದ್ದರಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರಬಹುದು ಎಂಬ ಆತಂಕದಲ್ಲಿ ಅನುಮತಿ ನಿರಾಕರಿಸಲಾಗುತ್ತಿತ್ತು.
ಇತ್ತೀಚೆಗೆ ಈ ವಿಚಾರವನ್ನು ಕೈಗೆತ್ತಿಕೊಂಡ ಹಿಂದು ಸಂಘಟನೆಗಳು ಹಾಗೂ ಸ್ಥಳೀಯರು, ಮೈದಾನದಲ್ಲಿ ಇತರೆ ಸಮುದಾಯಗಳ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಈ ಮನವಿಯನ್ನು ಬಿಬಿಎಂಪಿ ತಿರಸ್ಕರಿಸಿದ ನಂತರ ವಿವಾದದ ಭುಗಿಲೆದ್ದಿದೆ. ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಒಮ್ಮೆ ಆಸ್ತಿ ಸರ್ಕಾರದ್ದು ಎಂದರೆ ಮತ್ತೊಮ್ಮೆ, ದಾಖಲೆ ಯಾರು ತಂದುಕೊಡುತ್ತಾರೊ ಅವರದ್ದು ಎಂದಿದ್ದರು ಗೊಂದಲಕ್ಕೆ ಕಾರಣವಾಗಿತ್ತು.
ವಿವಾದದ ತೀವ್ರವಾದ ನಂತರ ಜುಲೈ 12ರಂದು ಚಾಮರಾಜಪೇಟೆ ಬಂದ್‌ಗೆ ಕರೆ ನೀಡಿರುವುದಾಗಿ ನಾಗರಿಕರ ಹಿತರಕ್ಷಣಾ ಒಕ್ಕೂಟ ಘೋಷಿಸಿತು. ಅದರಂತೆ ಬಂದ್ ಆಚರಿಸಲಾಯಿತು. ಸರ್ಕಾರದಿಂದಲೂ ಬಿಗಿ ಭದ್ರತೆ ಕಲ್ಪಿಸಿಕೊಳ್ಳಲಾಗಿತ್ತು. ಚಾಮರಾಜಪೇಟೆ ನಾಗರಿಕರು, ಅಂಗಡಿ ಮುಂಗಟ್ಟುಗಳು, ಖಾಸಗಿ ಶಾಲೆಗಳು ಬಂದ್‌ಗೆ ಬೆಂಬಲ ನೀಡಿದ್ದವು. ಬಂದ್ ಯಶಸ್ವಿಯಾಗಿದ್ದು ಇದೀಗ ಬಿಜೆಪಿ ನಾಯಕರಿಗೆ ಅವಕಾಶಗಳ ಬಾಗಿಲನ್ನು ತೆರೆದಿದೆ.
ಇಲ್ಲಿಯವರೆಗೆ ಸುಮ್ಮನಿದ್ದ ರಾಜಕಾರಣಿಗಳು
ಚಾಮರಾಜಪೇಟೆ ಮೈದಾನದ ವಿವಾದ ಆರಂಭವಾದಾಗಿನಿಂದಲೂ ಮಾಜಿ ಕಾರ್ಪೊರೇಟರ್ ಹಾಗೂ ಈ ಹಿಂದೆ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಬಿ.ವಿ. ಗಣೇಶ್ ಕಾಣಿಸಿಕೊಳ್ಳುತ್ತಿದ್ದರು. ಬಂದ್‌ಗೂ ಕೆಲ ದಿನಗಳ ಹಿಂದೆ ಆಯೋಜಿಸಿದ್ದ ಸಭೆಗೆ ಸಂಸದ ಪಿ.ಸಿ. ಮೋಹನ್, ಸೇರಿ ಅನೇಕರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹ್ಮದ್ ಬಂದಿದ್ದರಾದರೂ ಪಿ.ಸಿ. ಮೋಹನ್ ಆಗಮಿಸಿರಲಿಲ್ಲ. ಬಂದ್ ಯಶಸ್ವಿಯಾದ ನಂತರ ಇದೀಗ ಬಿಜೆಪಿ ನಾಯಕರಲ್ಲಿ ವಿಶ್ವಾಸ ಮೂಡಿದೆ. ಪ್ರದೇಶದಲ್ಲಿ ಹಿಂದುತ್ವದ ಪರ ಅಲೆ ಇದೆ ಎಂಬುದು ಬಂದ್‌ನಿಂದಾಗಿ ಸಾಬೀತಾಗಿದೆ. ಈ ಅವಕಾಶವನ್ನು ವಿಧಾನಸಭೆ ಚುನಾವಣೆಯಲ್ಲಿ ಬಳಸಿಕೊಳ್ಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ ಉಳಿಸಿಕೊಳ್ಳಲು ಇಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆ ತನಕ ಬಂದ್
ದಿಢೀರ್ ಬೆಳವಣಿಗೆಯಲ್ಲಿ ಸಂಸದ ಪಿ.ಸಿ. ಮೋಹನ್ ಗುರುವಾರ ಅಖಾಡಕ್ಕಿಳಿದಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ, ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರು ಇಡುವಂತೆ ಮನವಿ ಮಾಡಿದ್ದಾರೆ. ಮೈದಾನದಲ್ಲಿ ಆಟವಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆಯನ್ನೂ ಪಡೆಯುವ ಅಗತ್ಯವಿಲ್ಲ ಎಂದು ಗುಡುಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇರುವಾಗ ಬಿಜೆಪಿಗೆ ಅವಕಾಶದ ಬಾಗಿಲೊಂದು ತೆರೆದುಕೊಂಡಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಪಕ್ಷ ಯಾವ ತಂತ್ರ ಹೆಣೆಯುತ್ತದೆ, ಈಗಾಗಲೆ ಕ್ಷೇತ್ರದಲ್ಲಿ ಬೇರು ಬಿಟ್ಟಿರುವ ಜಮೀರ್ ಅಹ್ಮದ್ ಏನು ಪ್ರತಿತಂತ್ರ ಹೂಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಸಿದ್ದರಾಮಯ್ಯಗೆ ಅವಕಾಶ ಮಿಸ್?
2018ರಲ್ಲಿ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಸಿದ್ದರಾಮಯ್ಯ ಈ ಬಾರಿ ಮತ್ತೆ ಕ್ಷೇತ್ರ ಬದಲಾಯಿಸುವ ನಿರ್ಧಾರ ಮಾಡಿದ್ದಾರೆ. ತಮ್ಮ ಅತ್ಯಾಪ್ತ ಜಮೀರ್ ಪ್ರತಿನಿಧಿಸಿಸುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಹೇಗೆ ಎಂಬ ಆಲೋಚನೆಯೂ ಇದೆ. ಮುಸ್ಲಿಂ ಮತಗಳೇ ನಿರ್ಣಾಯಕವಾದ್ಧರಿಂದ ತಮ್ಮ ಗೆಲುವು ಸುಲಭ ಎಂದು ಭಾವಿಸಿದ್ದಾರೆ. ಆದರೆ ಇದೀಗ ಚಾಮರಾಜಪೇಟೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದನ್ನು ಸೇಫ್ ಸೀಟ್ ಎಂದು ಪರಿಗಣಿಸುವುದು ಕಷ್ಟವಾಗಬಹುದು. ಸಿದ್ದರಾಮಯ್ಯ ಸ್ಪರ್ಧೆ ಕುರಿತು ಕಾರ್ಮೋಡ ಎದುರಾಗಿದೆ.
ಇದನ್ನೂ ಓದಿ | ಸಿದ್ದರಾಮಯ್ಯರಿಂದ ʼಮುನಿʼದವರ ಸಮಾಧಾನಕ್ಕೆ ಡಿ.ಕೆ. ಶಿವಕುಮಾರ್ ಪ್ರಯತ್ನ