Site icon Vistara News

ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಭದ್ರತೆ, ಮತ್ತೆ ಕೋರ್ಟಿಗೆ ಹೋಗಲು ವಕ್ಫ್‌ ಬೋರ್ಡ್‌ ಸಿದ್ಧತೆ

chamarajpet maidan

ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ವತ್ತು ಎಂಬ ಬಿಬಿಎಂಪಿ ಪ್ರಕಟಿಸಿದೆ. ಇದು ನಾಗರಿಕ ವೇದಿಕೆಗೆ ಸಂಭ್ರಮದ ಕ್ಷಣವಾದರೆ, ವಕ್ಫ್‌ ಬೋರ್ಡ್‌ ಈ ಪ್ರಕಟಣೆಗೆ ಆಕ್ಷೇಪ ಎತ್ತಿದೆ. ಬಿಬಿಎಂಪಿ ಆದೇಶವನ್ನು ಮುಂದಿಟ್ಟು ಕೆಲವು ಸಂಘಟನೆಗಳು ವಿಜಯೋತ್ಸವ ಆಚರಿಸಲು ಮುಂದಾದರೆ, ವಕ್ಫ್‌ ಬೋರ್ಡ್‌ ಕೋರ್ಟ್‌ ಮೆಟ್ಟಿಲು ಹತ್ತಲು ಚಿಂತನೆ ನಡೆಸುತ್ತಿದೆ. ಈ ನಡುವೆ, ಈದ್ಗಾ ಮೈದಾನಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಈದ್ಗಾ ಮೈದಾದಾನ ಸರ್ಕಾರದ ಆಸ್ತಿ ಎಂದು‌ ಬಿಬಿಎಂಪಿ ಘೋಷಿಸಿದ ವಿಚಾರಕ್ಕೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ ಕಿಡಿ ಕಾರಿದ್ದಾರೆ. ಸುಪ್ರೀಂ ಕೋರ್ಟ್ 1965ರಲ್ಲಿ ಮೈದಾನ ವಕ್ಫ್ ಬೋರ್ಡ್ ನದು ಎಂದು ತೀರ್ಪು ಕೊಟ್ಟಿದೆ. ಈಗ ಬಿಬಿಎಂಪಿ ಅವರದ್ದೇ ಒಂದು ಆದೇಶ ಹೊರಡಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ. ನಾವು ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಬಿಬಿಎಂಪಿಯೇ ಒಂದು ಘಟ್ಟದಲ್ಲಿ ಇದು ನಮ್ಮ ಆಸ್ತಿಯಲ್ಲ ಎಂದು ಹೇಳಿತ್ತು. ಈಗ ರಾಜ್ಯ ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶ ಮಾಡಿದೆ. ಈ ಬಗ್ಗೆ ನಾವು ಕಾನೂನು ತಜ್ಞರಲ್ಲಿ ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಅದಿ ಹೇಳಿದ್ದಾರೆ.

ಬಿಬಿಎಂಪಿ ತನ್ನ ಆದೇಶದಲ್ಲಿ ಹೇಳಿದ್ದೇನು?

ʻʻಮೈದಾನ ನಮಗೆ ಸೇರಿದ್ದು, ಖಾತೆ ಮಾಡಿಕೊಡಬೇಕು ಎಂದು ವಕ್ಫ್‌ ಬೋರ್ಡ್‌ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಆ ಬಳಿಕ ಅರ್ಜಿ‌ ಪರಿಶೀಲನೆ ನಡೆಸಿದ ಬಿಬಿಎಂಪಿ ಇನ್ನೂ ಹೆಚ್ಚುವರಿ ದಾಖಲೆಗಳನ್ನು ಪ್ರಸ್ತುತ ಪಡಿಸುವಂತೆ ವಕ್ಫ್‌ ಬೋರ್ಡ್‌ಗೆ ನೋಟಿಸ್‌ ನೀಡಿ 45 ದಿನಗಳ ಕಾಲಾವಧಿ ನೀಡಿತ್ತು. ಬಿಬಿಎಂಪಿ ನೀಡಿದ್ದ ಕಾಲಾವಧಿ ಅಗಸ್ಟ್‌ 3ಕ್ಕೆ ಮುಗಿದಿದೆ. ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬ ತೀರ್ಮಾನಕ್ಕೆ ಬರಲಾಗಿದೆʼʼ ಎಂದು ಬಿಬಿಎಂಪಿ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಪ್ರಕಟಿಸಿದ್ದರು.

ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಆದೇಶ ನೀಡಿದ್ದಾರೆ.

ವಕ್ಫ್ ಬೋರ್ಡ್‌ ಅರ್ಜಿ ತಿರಸ್ಕರಿಸಲು ಬಿಬಿಎಂಪಿ ನೀಡಿದ ಮೂರು ಕಾರಣಗಳು

  1. ಚಾಮರಾಜಪೇಟೆ ಮೈದಾನವು ಬೆಂಗಳೂರು ದಕ್ಷಿಣ ತಾಲೂಕು ಗುಟ್ಟಹಳ್ಳಿಯ ಸರ್ವೆ 40ರ ಭಾಗಶಃ ಆಸ್ತಿ.
    ಚಾಮರಾಜಪೇಟೆ ಬಡಾವಣೆಯಾದಾಗ‌ ಇದು ನಗರ ವ್ಯಾಪ್ತಿಗೆ ಸೇರಿದೆ‌ ಮತ್ತು ಚೆಕ್ಕುಬಂದಿಯ ಬಗ್ಗೆ ವಿವಾದಗಳಿಲ್ಲ.
  2. ನ್ಯಾಯಾಲಯದಲ್ಲಿ ಪ್ರಾರ್ಥನೆ ನಿಷೇಧದ ಕುರಿತು ಮಾತ್ರ ವಾದಗಳಾಗಿವೆ. 1964ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಮುಸ್ಲಿಮರು ಮೈದಾನದಲ್ಲಿ ಸಾಂದರ್ಭಿಕ ಸಾಮೂಹಿಕ ಪ್ರಾರ್ಥನೆ ಹಕ್ಕು‌ ಮಾತ್ರ ಪಡೆದಿದ್ದಾರೆ, ಮಾಲೀಕತ್ವವಲ್ಲ.
  3. ಮೈದಾನ ಕುರಿತು ಕೋರ್ಟ್‌ನಲ್ಲಿ ಮುಸ್ಲಿಮರು ಪ್ರಾರ್ಥನಾ ಹಕ್ಕು ಮಾತ್ರ ಮಂಡಿಸಿದ್ದಾರೆ, ಮಾಲೀಕತ್ವದ ಹಕ್ಕು ಮಂಡಿಸಿಲ್ಲ. ಸುಪ್ರೀಂ ತೀರ್ಪಿನ ಪ್ರಕಾರ ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 36 ರ ಅನ್ವಯ ಮೈದಾನವು ಸರ್ಕಾರದ ಸ್ವತ್ತು ಎಂದು ಪರಿಗಣಿಸಬಹುದು.
    ಇದನ್ನೂ ಓದಿ| ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್‌, ಬಿಜೆಪಿಗೆ ಅವಕಾಶದ ಬಾಗಿಲು ಓಪನ್!
Exit mobile version