ಬೆಂಗಳೂರು: ಚಾಮರಾಜಪೇಟೆಯ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರಕಾರ ಮುಕ್ತವಾಗಿದೆ ಎಂದು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಿಗೇ ಸರಕಾರ ಈ ಬಗ್ಗೆ ಗಂಭೀರ ಚರ್ಚೆಯನ್ನು ಆರಂಭಿಸಿದೆ. ಮೊದಲು ಸಿಎಂ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಲಾಗಿದ್ದ ಉನ್ನತ ಅಧಿಕಾರಿಗಳ ಸಭೆ ಬಳಿಕ ಕಂದಾಯ ಸಚಿವ ಆರ್. ಅಶೋಕ್ ಅವರ ಹೆಗಲೇರಿತ್ತು. ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದ ಕಂದಾಯ ಸಚಿವರು ಗಣೇಶೋತ್ಸವ ಆಚರಣೆ ಪಕ್ಕಾ ಎಂದು ಘೋಷಿಸಿದ್ದಾರೆ. ಆದರೆ, ಯಾರು ಅಲ್ಲಿ ಗಣೇಶೋತ್ಸವ ಆಚರಿಸಬೇಕು ಎನ್ನುವ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಸ್ವಾತಂತ್ರ್ಯೋತ್ಸವ ಆಚರಣೆಯ ರೀತಿಯಲ್ಲೇ ಒಂದು ಚಾಣಕ್ಯ ತಂತ್ರವನ್ನು ಇನ್ನೂ ಪ್ರಯೋಗಿಸಲಾಗುತ್ತದೆ ಎಂದು ಸಚಿವ ಅಶೋಕ್ ಅವರು ಹೇಳಿರುವುದು ಕುತೂಹಲ ಮೂಡಿಸಿದೆ.
ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ, ಕಂದಾಯ, ಬಿಬಿಎಂಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಇಲ್ಲಿ ಕೋರ್ಟ್ ಆದೇಶವನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.
ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಒಟ್ಟು ಐದು ಅರ್ಜಿಗಳು ಬಂದಿವೆ. ಅವುಗಳ ಪೈಕಿ ಸ್ಥಳೀಯವಾಗಿರುವುದು ಎರಡು ಮಾತ್ರ. ಇನ್ನೂ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಎಲ್ಲವನ್ನೂ ಪರಿಗಣಿಸಿ ಅಂತಿಮ ತೀರ್ಮಾನಿಸಲಾಗುತ್ತದೆ ಎಂದು ಸಭೆಯ ಬಳಿಕ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ಗೆ?
ಈ ನಡುವೆ, ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ಗೆ ಹೋಗಲಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಭೆಯಲ್ಲೂ ಚರ್ಚೆ ಮಾಡಿದ್ದೇವೆ. ಏನಾದರೂ ತೀರ್ಪು ಬಂದರೆ ಆಮೇಲೆ ನೋಡೋಣ ಎಂದು ಹೇಳಿದರು ಅಶೋಕ್.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್: ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದ ಹೈಕೋರ್ಟ್