ಬೆಂಗಳೂರು: ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ನಾವು ತಲೆಬಾಗಲೇಬೇಕು, ಬಾಗುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ʻʻಸುಪ್ರೀಂಕೋರ್ಟ್ ಜಾಗದ ಮಾಲೀಕತ್ವದ ಬಗ್ಗೆ ಏನೂ ಹೇಳಿಲ್ಲ. ನಾನು ಸಿಎಂ ಜೊತೆ ಚರ್ಚೆ ಮಾಡಿ, ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಕಂದಾಯ ಇಲಾಖೆ ಜಮೀನು ಎಂಬುದಕ್ಕೆ ದಾಖಲೆಗಳಿವೆ. ಹೀಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲʼʼ ಎಂದು ಅವರು ಸ್ಪಷ್ಟಪಡಿಸಿದರು.
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡದಿರುವ ಸುಪ್ರೀಂಕೋರ್ಟ್ ತೀರ್ಮಾನದಿಂದ ಸ್ವಲ್ಪ ಹಿನ್ನಡೆಯಾಗಿದೆ. ನ್ಯಾಯ ಸಿಗುವ ವಿಶ್ವಾಸವಿತ್ತು. ಹಿಂದುಪರ ಸಂಘಟನೆಗಳು ಬೆಂಗಳೂರು ಜನಕ್ಕೆ ನಿರಾಸೆ ಆಗಿದೆ. ಆದರೆ, ಇಂಥ ವಿಷಯದಲ್ಲಿ ತಾಳ್ಮೆ ಇರಬೇಕು. ಹೈಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ ಎಂದು ಅಶೋಕ್ ಹೇಳಿದರು.
ಒಕ್ಕೂಟ ಹೇಳಿಕೆ
ಸುಪ್ರೀಂಕೋರ್ಟ್ ತೀರ್ಮಾನದಿಂದ ಚಾಮರಾಜಪೇಟೆ ನಾಗರಿಕ ವೇದಿಕೆ ಒಕ್ಕೂಟಕ್ಕೆ ನಿರಾಸೆಯಾಗಿದೆ. ಆದರೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಅದು ಹೇಳಿದೆ.
ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಾಮೇ ಗೌಡರು, ಮಾಲೀಕತ್ವ ಇಲ್ಲದವರು ಕಾನೂನು ಹೋರಾಟ ನಡೆಸಿದ್ದಾರೆ. ನಾವೂ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು. ಬೇರೆ ಕಡೆ ಗಣಪತಿ ಮೂರ್ತಿ ಇಟ್ಟು ಉತ್ಸವ ಆಚರಿಸಬಹುದು ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು,ʻʻಮೈದಾನದಲ್ಲೇ ಗಣೇಶೋತ್ಸವ ಮಾಡುವ ಆಸೆ ಇತ್ತು. ಆದರೆ, ನಾವು ನಮ್ಮ ಸಮಿತಿ ಮೂಲಕ ಬೇರೆ ಕಡೆ ಗಣಪತಿ ಮೂರ್ತಿ ಕೂರಿಸುವುದಿಲ್ಲʼʼ ಎಂದರು.
ಮಾಹಿತಿ ಪಡೆದ ಸಿಎಂ
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಕರೆಸಿಕೊಂಡು ಸುಪ್ರೀಂಕೋರ್ಟ್ ತೀರ್ಪಿನ ವಿಚಾರವಾಗಿ ಚರ್ಚೆ ನಡೆಸಿದರು.
ಹೈಕೋರ್ಟ್‌ಗೆ ಹೋಗಲಿ ಎಂದ ಮುತಾಲಿಕ್
ಇದೇವೇಳೆ, ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ಅವರು ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ಹೋಗುವಂತೆ ತಿಳಿಸಿದೆ. ರಾಜ್ಯ ಸರಕಾರ ಕೂಡಲೇ ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಗಣೇಶೋತ್ಸವಕ್ಕೆ ಅವಕಾಶ ಪಡೆಯಬೇಕು ಎಂದು ಸಲಹೆ ನೀಡಿದೆ.
ಇದನ್ನೂ ಓದಿ| ಚಾಮರಾಜಪೇಟೆ ಮೈದಾನ| 200 ವರ್ಷದಿಂದ ಆಗಿಲ್ವಲ್ಲ, ಈ ಸಾರಿಯೂ ಬೇಡ ಬಿಡಿ ಎಂದ ಸುಪ್ರೀಂಕೋರ್ಟ್