Site icon Vistara News

ಚಾಮರಾಜಪೇಟೆ ಮೈದಾನ | ಇಂದು ನಿರ್ಣಾಯಕ ದಿನ: ಅತ್ತ ಸುಪ್ರೀಂ ತೀರ್ಮಾನ, ಇತ್ತ ಸರಕಾರ ನಿರ್ಧಾರ

Chamarajapete maidan

ಬೆಂಗಳೂರು: ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿ ಇಂದು ನಡೆಯಬಹುದಾದ ಎರಡು ಮಹತ್ವದ ಬೆಳವಣಿಗೆಗಳಿಗಾಗಿ ರಾಜ್ಯ ಎದುರು ನೋಡುತ್ತಿದೆ. ಒಂದು ಕಡೆ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ರಾಜ್ಯ ಸರಕಾರ ಒಂದು ಮಹತ್ವದ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ. ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಸರಕಾರ ತನ್ನ ವಿವೇಚನೆ ಬಳಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಇದೇ ವೇಳೆ ಈ ಗ್ರೀನ್‌ ಸಿಗ್ನಲನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದು ತೀರ್ಪು ಹೊರಬೀಳಲಿದೆ. ಇದರ ನಡುವೆಯೇ ಚಾಮರಾಜಪೇಟೆ ಮೈದಾನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ.

ಚಾಮರಾಜಪೇಟೆ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ಸಂಬಂಧಿಸಿ ಸರಕಾರ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದ್ದರೂ ರಾಜ್ಯ ಸರಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆಗಸ್ಟ್‌ ೩೧ರಂದು ಗಣೇಶೋತ್ಸವ ಇದ್ದು, ಆಗಸ್ಟ್‌ ೩೦ರಂದು ಸಂಜೆಯೊಳಗೆ ತೀರ್ಮಾನ ಮಾಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದರು.

ಇಲ್ಲಿ ರಾಜ್ಯ ಸರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡುವುದು ಖಚಿತವಾಗಿದೆ. ಆದರೆ, ಯಾರ ಮೂಲಕ ಆಚರಿಸಬೇಕು, ಹೇಗೆ ಆಚರಿಸಬೇಕು ಎನ್ನುವ ವಿಚಾರ ಇಲ್ಲಿ ಪ್ರಮುಖವಾಗಿ ಚರ್ಚೆಯಲ್ಲಿದೆ. ಹಲವರು ತಾವು ಮಾಡುತ್ತೇವೆ ಎಂದು ಅನುಮತಿ ಕೇಳಿದ್ದಾರೆ. ಸರಕಾರ ಯಾರಿಗೆ ಅವಕಾಶ ಕೊಡುತ್ತದೆ ಎನ್ನುವುದು ಇಲ್ಲಿರುವ ಪ್ರಶ್ನೆ. ಸ್ವಾತಂತ್ರ್ಯೋತ್ಸವದ ಮಾದರಿಯಲ್ಲೇ ಮುಜರಾಯಿ ಇಲಾಖೆಯ ವತಿಯಿಂದ ಆಚರಿಸುತ್ತದೆಯಾ ಅಥವಾ ಯಾವುದಾದರೂ ಒಂದು ಸಂಘಟನೆಗೆ ಜವಾಬ್ದಾರಿ ಕೊಡುತ್ತದೆಯಾ ಕಾದು ನೋಡಬೇಕು.

ಈ ನಡುವೆ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆದು ತೀರ್ಪು ಬರಲಿ ಎಂದು ಕಾಯುತ್ತಿರುವ ಹಾಗೆಯೂ ಕಾಣುತ್ತಿದೆ. ಒಂದೊಮ್ಮೆ ಎಲ್ಲ ಸಿದ್ಧತೆಗಳನ್ನು ಮಾಡಿದ ಬಳಿಕ ಸುಪ್ರೀಂಕೋರ್ಟ್‌ ಏನಾದರೂ ಅವಕಾಶ ನೀಡದಿದ್ದರೆ ಗೊಂದಲ ಉಂಟಾಗುತ್ತದೆ. ಒಂದೊಮ್ಮೆ ಸುಪ್ರೀಂಕೋರ್ಟೇ ಅವಕಾಶ ನೀಡಿದರೆ ಅದ್ಧೂರಿಯಾಗಿ ಆಚರಿಸಬಹುದು ಎನ್ನುವುದು ಸರಕಾರದ ಲೆಕ್ಕಾಚಾರವಾಗಿರುವಂತೆ ಕಾಣುತ್ತಿದೆ.

ವಕ್ಫ್‌ ಬೋರ್ಡ್‌ಗೂ ಕಾತರ
ಈ ನಡುವೆ ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿರುವ ವಕ್ಫ್‌ ಬೋರ್ಡ್‌ಗೆ ಇವತ್ತಿನ ತೀರ್ಪು ಏನಿದ್ದೀತು ಎನ್ನುವ ಕಾತರ. ಏಕ ಸದಸ್ಯ ಪೀಠವು ಕೇವಲ ಎರಡು ಬಾರಿ ನಮಾಜ್‌ಗೆ ಅವಕಾಶ ನೀಡಿ ಉಳಿದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದರಿಂದ ಅದು ನಿರಾಳವಾಗಿತ್ತು. ಇದೀಗ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಮತ್ತೆ ತನಗೆ ಮೈದಾನದ ಮೇಲೆ ಇರುವ ಹಿಡಿತ ತಪ್ಪಿಹೋದೀತು ಎನ್ನುವ ಆತಂಕ ಅದರದು.

ಬಿಗಿ ಪೊಲೀಸ್‌ ಭದ್ರತೆ
ಈ ನಡುವೆ, ಚಾಮರಾಜಪೇಟೆ ಮೈದಾನ ಭದ್ರತೆಗೆ 1240 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಡಿಸಿಪಿಗಳು, 21 ಜನ ಎಸಿಪಿ, 50 ಜನ ಇನ್ಸ್’ಪೆಕ್ಟರ್, 120 ಮಂದಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರು ಕೆಎಸ್‌ಆರ್‌ಪಿ ವಾಹನ ಸೇರಿ ಒಟ್ಟು ೧೨೪೦ ಮಂದಿ ಪೊಲೀಸರು ಕಾವಲು ಕಾಯಲಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಭದ್ರತೆ ಉಸ್ತುವಾರಿ ನೀಡಲಾಗಿದೆ.

ಎರಡು ಎಕರೆ ಮೈದಾನದ ನಾಲ್ಕು ದಿಕ್ಕಲ್ಲೂ ಬ್ಯಾರಿಕೇಡ್ ಹಾಕಲಾಗಿದ್ದು, ಮೈದಾನಕ್ಕೆ ಒಂದು ಕಡೆ ಮಾತ್ರ ಪ್ರವೇಶ ನೀಡಲಾಗಿದೆ. ಈ ನಡುವೆ ಈ ಪ್ರದೇಶದಲ್ಲಿ ಪೊಲೀಸ್‌ ಪಥಸಂಚಲನವೂ ನಡೆದಿದೆ.

Exit mobile version