ಬೆಂಗಳೂರು: ಇಲ್ಲಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರ ತೀರ್ಮಾನ ಆಗುವುದು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಮಹತ್ವದ ವಿಚಾರಣೆಯ ತೀರ್ಪು ಬಂದ ಬಳಿಕ. ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ವಕ್ಫ್ ಮಂಡಳಿ ಸಲ್ಲಿಸಿರುವ ಅರ್ಜಿಯ ಆಧಾರದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ರಾಜ್ಯ ಸರಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಆಶೋಕ್ ತಿಳಿಸಿದ್ದಾರೆ. ತೀರ್ಪು ಯಾವುದೇ ಕ್ಷಣ ಹೊರಬೀಳುವ ನಿರೀಕ್ಷೆ ಇದೆ.
ಇಷ್ಟರ ನಡುವೆಯೇ ಸುಪ್ರೀಂಕೋರ್ಟ್ ಅವಕಾಶ ನೀಡಿದರೆ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದರೆ ಯಾರು ಅದರ ನೇತೃತ್ವ ವಹಿಸುವುದು ಎನ್ನುವ ವಿಚಾರದಲ್ಲಿ ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಗಣೇಶೋತ್ಸವ ನಡೆಸಲು ಈ ಹಿಂದೆ ಐದು ತಂಡಗಳು ಅನುಮತಿ ಕೇಳಿದ್ದವು. ಆದರೆ, ಮೂರು ಅರ್ಜಿಗಳು ಬೆಂಗಳೂರಿನಿಂದ ಹೊರಭಾಗದವು ಎಂಬ ಕಾರಣಕ್ಕೆ ಎರಡು ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಬಳಿಕವೂ ಯಾರು ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಚಿವರು ಹೇಳಿದ್ದರು. ಅಂತಿಮವಾಗಿ ಈಗ ಎರಡು ಗಣೇಶೋತ್ಸವ ಸಮಿತಿಗಳು ಅಂತಿಮವಾಗಿ ಕಣದಲ್ಲಿದ್ದು ಯಾರಿಗೆ ಅವಕಾಶ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.
ಹಾಗಿದ್ದರೆ ಯಾರಿಗೆ ಅವಕಾಶ?
ಅಂತಿಮವಾಗಿ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆ ಮತ್ತು ಬೆಂಗಳೂರು ಗಣೇಶೋತ್ಸವ ಸಮಿತಿ ನಡುವೆ ಯಾರು ಗಣೇಶ ಕೂರಿಸುವ ಅವಕಾಶ ಪಡೆಯುತ್ತಾರೆ ಎನ್ನುವುದು ನಿರ್ಧಾರವಾಗಲಿದೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟ ಈ ಮೈದಾನಕ್ಕಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅದರ ಹೋರಾಟಕ್ಕೊಂದು ದೊಡ್ಡ ಜಯ ಸಿಗುವ ಕಾಲ ಸನ್ನಿಹಿತವಾಗಿದೆ. ಹೀಗಾಗಿ ತನಗೆ ಪೂಜೆ ಅವಕಾಶ ಕೊಡಿ ಎಂದು ಕೇಳಿಕೊಂಡಿದೆ. ಈ ನಡುವೆ ಬೆಂಗಳೂರು ಗಣೇಶೋತ್ಸವ ಸಮಿತಿ ಕೂಡಾ ಅವಕಾಶ ಕೋರಿದೆ.
ಚಾಮರಾಜಪೇಟೆ ಒಕ್ಕೂಟದ ಪರವಾಗಿ ಸ್ಥಳೀಯ ಸಂಸದರ ಪಿ.ವಿ. ಮೋಹನ್ ಅವರು ನಿಂತಿದ್ದಾರೆ. ಈ ಸಮಿತಿಗೆ ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ. ಬೆಂಗಳೂರು ಗಣೇಶೋತ್ಸವ ಸಮಿತಿಗೆ ಅವಕಾಶ ಕೊಡಬೇಕು ಎನ್ನುವುದು ಸಂಘ ಪರಿವಾರದಿಂದ ಬಂದಿರುವ ಒತ್ತಡ ಎಂದು ಹೇಳಲಾಗುತ್ತಿದೆ. ಸಂಘ ಪರಿವಾರದ ನಾಯಕರು ಈಗಾಗಲೇ ಸಚಿವ ಆರ್ ಅಶೋಕ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡಿದ್ದು, ಬೆಂಗಳೂರು ಗಣೇಶೋತ್ಸವ ಸಮಿತಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಈ ನಡುವೆ, ಸರ್ವ ಸಂಘಟನೆಗಳ ಸಭೆಯಲ್ಲಿ ತೀರ್ಮಾನ ಕೈಗೊಂಡು ಯಾರಿಗೆ ಗಣೇಶ ಕೂರಿಸುವ ಅವಕಾಶ ಎನ್ನುವುದನ್ನು ತೀರ್ಮಾನಿಸೋಣ ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಅಂತಿಮವಾಗಿ ಏನಾಗಲಿದೆ ಎಂಬ ಕುತೂಹಲ ಜೋರಾಗಿದೆ. ಇದುವರೆಗೂ ಹೋರಾಟ ಮಾಡಿದ ಚಾಮರಾಜಪೇಟೆ ನಾಗರಿಕ ವೇದಿಕೆಗಳ ಒಕ್ಕೂಟಕ್ಕೆ ಅವಕಾಶ ಸಿಗುತ್ತದಾ? ಅಥವಾ ಇಷ್ಟು ಕಾಲ ಹೋರಾಡಿ ಬರಿಗೈಯಲ್ಲಿ ಮರಳುತ್ತದಾ ಎನ್ನುವ ಕುತೂಹಲವಿದೆ.
ಮುಜರಾಯಿ ಇಲಾಖೆ ಮೂಲಕ ಪೂಜೆ?
ಈ ನಡುವೆ, ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಶುಭ ಸುದ್ದಿ ಸಿಗಲಿ ಎಂದು ಆಶಿಸಿ ಚಾಮರಾಜಪೇಟೆ ನಾಗರಿಕ ವೇದಿಕೆ ಒಕ್ಕೂಟದಿಂದ ೧೦೧ ತೆಂಗಿನ ಕಾಯಿ ಒಡೆದು ಪೂಜೆ ಮಾಡಲಾಯಿತು. ಇದೇವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಾಮೇಗೌಡರು, ಸರ್ಕಾರ ಮುಜರಾಯಿ ಇಲಾಖೆ ಮೂಲಕ ಗಣೇಶ ಕೂರಿಸಲು ಸಿದ್ದತೆ ನಡೆಸಿದೆ. ದೊಡ್ಡ ಗಣಪತಿ ದೇವಸ್ಥಾನ ಅರ್ಚಕರು ಪೂಜೆ ಮಾಡಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆಯಿಂದ ಸಂಜೆವರೆಗೂ ಪೂಜೆ ನೆರವೇರಲಿದೆ. ಈ ಬಗ್ಗೆ ಸಚಿವರಾದ ಆರ್ ಅಶೋಕ್ ಮತ್ತು ಸಂಸದರ ಜೊತೆ ಚರ್ಚಿಸಲಾಗಿದೆ ಎಂದು ರಾಮೇಗೌಡರು ಹೇಳಿದರು.
ಇದನ್ನೂ ಓದಿ| ಚಾಮರಾಜಪೇಟೆ ಮೈದಾನ | ಇಂದು ನಿರ್ಣಾಯಕ ದಿನ: ಅತ್ತ ಸುಪ್ರೀಂ ತೀರ್ಮಾನ, ಇತ್ತ ಸರಕಾರ ನಿರ್ಧಾರ