Site icon Vistara News

ಚಾಮರಾಜಪೇಟೆ | ಸಮೀಪಿಸುತ್ತಿದೆ ಗಣೇಶೋತ್ಸವ: ಆದರೂ ಇನ್ನೂತೀರ್ಮಾನಕ್ಕೆ ಸರಕಾರ ಮೀನಮೇಷ

chamarajpet maidan

ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದರೆ, ಚಾಮರಾಜಪೇಟೆ ಆಟದ ಮೈದಾನದಲ್ಲಿ ನಡೆಸಬೇಕೆಂದು ತೀರ್ಮಾನಿಸಲಾಗಿರುವ ಗಣೇಶೋತ್ಸವಕ್ಕೆ ಸಂಬಂಧಿಸಿ ಸರಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಇರುವುದರಿಂದ ಗೊಂದಲ ಮುಂದುವರಿದಿದೆ. ಗಣೇಶೋತ್ಸವಕ್ಕೆ ಇನ್ನು ಕೇವಲ ಆರು ದಿನವಷ್ಟೇ ಬಾಕಿ ಉಳಿದಿದೆ. ಉಳಿದೆಲ್ಲ ಕಡೆಗಳಲ್ಲಿ ಗಣೇಶನ ಹಬ್ಬಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದರೂ ಇಲ್ಲಿ ಏನಾಗಲಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇಂದಿಗೆ ಗಡುವು ಅಂತ್ಯ
ಚಾಮರಾಜಪೇಟೆ ಈದ್ಗಾ ಮೈದಾನವನ್ನು ಕಾನೂನು ಮತ್ತು ಇತರ ಹೋರಾಟದ ಮೂಲಕ ಸರಕಾರದ ಆಸ್ತಿ ಎಂದೂ, ಸಾರ್ವಜನಿಕ ಆಟದ ಮೈದಾವೆಂದೂ ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಗರಿಕ ಒಕ್ಕೂಟ ವೇದಿಕೆ ಈಗ ಗಣೇಶೋತ್ಸವದ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದೆ.
ಸ್ವಾತಂತ್ರ್ಯ ದಿನಾಚರಣೆ ವಿಷಯದಲ್ಲೂ ಆರಂಭದಲ್ಲಿ ಗೊಂದಲವಿದ್ದರೂ ಅಂತಿಮವಾಗಿ ಸರಕಾರ ಕಂದಾಯ ಇಲಾಖೆಯ ಮೂಲಕವೇ ಧ್ವಜಾರೋಹಣಕ್ಕೆ ಸೂಚನೆ ನೀಡುವ ಮೂಲಕ ಯಾವುದೇ ಪ್ರಕ್ಷುಬ್ಧತೆ ಉಂಟಾಗದಂತೆ ನೋಡಿಕೊಂಡಿತ್ತು. ಸಹಾಯಕ ಕಮೀಷನರ್‌ ನೇತೃತ್ವದಲ್ಲಿ ನಡೆದ ಈ ಧ್ವಜಾರೋಹಣದಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಗಣೇಶೋತ್ಸವ ವಿಚಾರದಲ್ಲಿ ಹಿಂದು ಮತ್ತು ಮುಸ್ಲಿಮರಿಗೆ ಸಂಬಂಧಿಸಿ ಯಾವುದೇ ಗೊಂದಲಗಳಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಹಲವಾರು ಮುಸ್ಲಿಂ ಮುಖಂಡರು ಗಣೇಶೋತ್ಸವ ಆಚರಣೆಯ ಪರವಾಗಿವೆ. ಆದರೆ, ಸರಕಾರವೇ ಈ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಚಾಮರಾಜಪೇಟೆಯ ನಾಗರಿಕ ಒಕ್ಕೂಟ ವೇದಿಕೆ ಆಗಸ್ಟ್‌ ೨೫ರೊಳಗೆ ಸರಕಾರ ಒಂದು ತೀರ್ಮಾನವನ್ನು ಮಾಡಬೇಕು ಎಂದು ಅಂತಿಮ ಗಡುವನ್ನು ನೀಡಿದೆ. ಆ ಗಡುವು ಇಂದಿಗೆ ಮುಕ್ತಾಯವಾಗುತ್ತಿದೆ.

ನಾಳೆ ನಾಗರಿಕ ಒಕ್ಕೂಟದ ಸಭೆ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಸರಕಾರ ಮೌನ ಮುರಿಯದೇ ಇರುವುದು ನಾಗರಿಕ ಒಕ್ಕೂಟದ ಆಕ್ರೋಶಕೆ ಕಾರಣವಾಗಿದೆ. ಗಣೇಶ ಕೂರಿಸಲು ಅನುಮತಿ ಕೋರಿ ೧೫ ದಿನಗಳು ಕಳೆದಿವೆ. ಸರ್ಕಾರ, ಸಚಿವರು, ಸಂಸದರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಎಷ್ಟೇ ಮನವಿ ಮಾಡಿದರೂ ಗಣೇಶನ ಅನುಮತಿ ಕುರಿತು ಯಾವುದೇ ಸ್ಪಷ್ಟತೆ ನೀಡದೆ ಇರುವುದರಿಂದ ಸದಸ್ಯರು ಬೇಸರಗೊಂಡಿದ್ದಾರೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌.ರವಿ, ಸಂಸದ ಪಿ.ಸಿ.ಮೋಹನ್, ರೇಣುಕಾಚಾರ್ಯ ಅವರೆಲ್ಲ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಎಲ್ಲವೂ ಮಾತಿಗೆ ಸೀಮಿತವಾಗಿದೆ ಎನ್ನುವುದು ಒಕ್ಕೂಟದ ಬೇಸರ. ಹೀಗಾಗಿ ಗುರುವಾರ ಸಂಜೆಯೊಳಗೆ ಅನುಮತಿ ನೀಡದೆ ಹೋದರೆ ಮುಂದಿನ ಹೋರಾಟಕ್ಕೆ ಸಿದ್ಧವಾಗುವುದಾಗಿ ಒಕ್ಕೂಟ ಹೇಳಿದೆ.

ಆಗಸ್ಟ್‌ ೨೬ರಂದು ಮತ್ತೆ ಸಭೆ ನಡೆಸಿ ಹೋರಾಟವನ್ನು ನಿರ್ಧರಿಸಲಾಗುತ್ತದೆ. ಸರಕಾರ ಅನುಮತಿ ನೀಡದೇ ಹೋದರೂ ಗಣೇಶನನ್ನು ಕೂರಿಸುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ಸಭೆಯಲ್ಲಿ ಸಂಸದ ಪಿ.ಸಿ. ಮೋಹನ್‌ ಭಾಗಿಯಾಗಲಿದ್ದಾರೆ.

ಸಿಎಂ ನಿರ್ಧಾರಕ್ಕೆ ವೇಟಿಂಗ್‌?
ಗಣೇಶೋತ್ಸವದ ವಿಚಾರವನ್ನು ನಿರ್ಧಾರ ಮಾಡಬೇಕಾಗಿರುವುದು ಕಂದಾಯ ಇಲಾಖೆ. ಆದರೆ, ಸಚಿವರಾದ ಆರ್‌. ಅಶೋಕ್‌ ಅವರು ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದು ನಾಗರಿಕ ಒಕ್ಕೂಟದ ಬೇಸರ. ಗಣೇಶೋತ್ಸವಕ್ಕೆ ಸಂಬಂಧಿಸಿ ಪೊಲೀಸ್‌ ಮತ್ತು ಅಧಿಕಾರಿಗಳೇ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಯಾರೂ ನನ್ನ ಬಳಿ ಬಂದು ಮನವಿ ಮಾಡಿಲ್ಲ ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ ಎಂಬ ಮಾತು ಕೆಲವರಿಗೆ ಬೇಸರ ತಂದಿದೆ. ಒಕ್ಕೂಟದಿಂದ ಮನವಿ ಪತ್ರ ನೀಡಿದ್ದರೂ ಅಶೋಕ್‌ ಅವರು ಸ್ವೀಕರಿಸಿಲ್ಲ ಎನ್ನುವುದು ಸದಸ್ಯರ ದೂರು. ಚಾಮರಾಜಪೇಟೆ ಗಣೇಶೋತ್ಸವಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳೇ ತೀರ್ಮಾನ ಕೈಗೊಳ್ಳಬೇಕು ಎಂದು ಕಂದಾಯ ಸಚಿವರು ಬಯಸಿದ್ದಾರೆ ಎನ್ನಲಾಗುತ್ತಿದೆ.

ಒಕ್ಕೂಟದೊಳಗೂ ಒಮ್ಮತವಿಲ್ಲ
ಹಾಗಂತ ಚಾಮರಾಜಪೇಟೆ ಗಣೇಶೋತ್ಸವಕ್ಕೆ ಸಂಬಂಧಿಸಿ ನಾಗರಿಕ ಒಕ್ಕೂಟ ವೇದಿಕೆಯೊಳಗೂ ಒಮ್ಮತವಿಲ್ಲ. ಒಂದು ಗುಂಪು ಆಗಸ್ಟ್‌ ೩೧ರಿಂದ ಮೂರು ದಿನ ನಡೆಸಬೇಕು ಎಂದು ಹೇಳಿದರೆ, ಇನ್ನೊಂದು ಗುಂಪು ಆಗಸ್ಟ್‌ ೩೧ರಿಂದ ೧೧ ದಿನ ನಡೆಸಬೇಕು ಎಂದು ಆಗ್ರಹಿಸಿ ಪೋಸ್ಟರ್‌ ಕೂಡಾ ಬಿಡುಗಡೆ ಮಾಡಿದೆ. ಈ ರೀತಿ ದ್ವಂದ್ವಗಳಿಗೆ ಸಂಬಂಧಿಸಿಯೂ ಒಕ್ಕೂಟದ ಹಿರಿಯರ ನಡುವೆ ಬೇಸರವಿದೆ.

Exit mobile version