ಹುಬ್ಬಳ್ಳಿ: ಗುರೂಜಿ ನನ್ನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕೆ ಪ್ರಯತ್ನಗಳನ್ನೂ ನಡೆಸಿದ್ದರು. ಹೀಗಾಗಿ ಅವರನ್ನೇ ಹತ್ಯೆ ಮಾಡಿದೆ. ಹೀಗೆಂದು ಹೇಳಿಕೆ ಕೊಟ್ಟು ತನಿಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ್ದಾನೆ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಆರೋಪಿ ಮಹಾಂತೇಶ ಶಿರೂರ್.
ಕೊಲೆ ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ತೀವ್ರ ವಿಚಾರಣೆ ಒಳಪಡಿಸಲಾಗುತ್ತಿದ್ದು, ಕ್ಷಣಕ್ಷಣಕ್ಕೂ ಅಚ್ಚರಿಯ ಸಂಗತಿಗಳನ್ನು ಬಾಯ್ಬಿಡುತ್ತಿದ್ದಾರೆ.
ತನ್ನನ್ನು ಕೊಲೆ ಮಾಡಲು ಗುರೂಜಿ ಸ್ಕೆಚ್ ಹಾಕಿದ್ದರು. ಅಲ್ಲದೇ ತಮ್ಮ ಹಿಂಬಾಲಕರ ಮೂಲಕ ಹಲ್ಲೆ ಮಾಡಿಸಿದ್ದರು. ಹುಬ್ಬಳ್ಳಿಯ ಅಮರಗೋಳದ ನ್ಯಾಯಾಧೀಶರ ಕಾಲೊನಿಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿ ಮಹಾಂತೇಶ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ.
ಸರಳವಾಸ್ತು ಕಚೇರಿ ಸಿಬ್ಬಂದಿಯಿಂದಲೇ ಹಲ್ಲೆ
ನನ್ನ ಮೇಲೆ ಚಂದ್ರಶೇಖರ ಗುರೂಜಿಯವರ ಸರಳವಾಸ್ತು ಕಚೇರಿಯ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅವರು ಹಲ್ಲೆ ನಡೆಸಿದ ಬಳಿಕ ಜೀವ ಭಯ ಕಾಡುತ್ತಿತ್ತು ಎಂಬುದು ಮಹಾಂತೇಶನ ಹೇಳಿಕೆಯಾಗಿದೆ.
4.5 ಎಕರೆ ಜಮೀನಿನ ಗಲಾಟೆ
ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 4.5 ಎಕರೆ ಜಮೀನಿಗಾಗಿ ಚಂದ್ರಶೇಖರ ಗುರೂಜಿ ಹಾಗೂ ಹಂತಕ ಮಹಾಂತೇಶನ ನಡುವೆ ತಿಕ್ಕಾಟವಿತ್ತು ಎಂದು ಹೇಳಲಾಗುತ್ತಿದೆ.
10 ಕೋಟಿ ಬೆಲೆ ಬಾಳುವ ಆ ಆಸ್ತಿಗಾಗಿ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು. ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಹಾಂತೇಶನ ಹೆಸರಲ್ಲಿ ಗುರೂಜಿ ಆಸ್ತಿ ಖರೀದಿ ಮಾಡಿದ್ದರು. ಆದರೆ ಕೆಲಸ ಬಿಟ್ಟ ಬಳಿಕ ಜಮೀನು ವಾಪಸ್ ಕೊಡಲು ನಿರಾಕರಿಸಿದ್ದ. ಹೀಗಾಗಿ ಚಂದ್ರಶೇಖರ ಗುರೂಜಿ ತನ್ನ ಮೇಲೆ ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ಆತಂಕದಿಂದ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ನಂತರ ಹುಬ್ಬಳ್ಳಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸುದರ್ಶನ ಹೋಮ!