ಗದಗ, ಕರ್ನಾಟಕ: ಬಹು ನಿರೀಕ್ಷೆಯ ಚಂದ್ರಯಾನ-3 ಮಿಷನ್ (Chandrayaan 3) ಸಕ್ಸೆಸ್ ಆಗಿದೆ. ಆಗಸ್ಟ್ 23ರಂದ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್ ನಿಧಾನವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿದೆ(Lander Soft landing). ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೊಸ ಇತಿಹಾಸ ರಚಿಸಿದೆ. ಈ ಸಾಧನೆಯ ಹಿಂದೆ ಅನೇಕ ವಿಜ್ಞಾನಿಗಳು, ಎಂಜಿನಿಯರ್ಸ್ ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಆ ಪೈಕಿ ಗದಗಿನ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ವೆಂಕಣ್ಣಾಚಾರ್ಯ ಬಿಂದಗಿ (Sudhindra Bindagi) ಕೂಡ ಪ್ರಮುಖರು.
ಕಳೆ ತಿಂಗಳು ಅಂದರೆ 2023ರ ಜುಲೈ 30ರಂದು ಸುಧೀಂದ್ರ ಬಿಂದಗಿ ಅವರು ಇಸ್ರೋ ಸೇವೆಯಿಂದ ನಿವೃತ್ತರಾಗಿದ್ದಾರೆ. 1986ರಿಂದ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಸೇವೆ ಮಾಡಿದ್ದಾರೆ.
1992ರಲ್ಲಿ ಉಡಾವಣೆ ಉಪಗ್ರಹದ ಥರ್ಮಲ್ ಡಿಸೈನರ್ ಆಗಿ ಬಿಂದಗಿ ಅವರು ಇಸ್ರೋ ತಮ್ಮ ಸೇವೆ ಆರಂಭಿಸಿದರು. ತದನಂತರ ಇಸ್ಯಾಟ್ ಎಲ್ ಎಲ್ ಇ ಯೋಜನೆಯ ಮ್ಯಾನೆಜರ್ ಆಗಿ, ಜಿಸ್ಯಾಟ್ 2 ಸಂವಹನ ಉಪಗ್ರಹದ ನಿರ್ದೇಶಕರಾಗಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಈವರೆಗೂ 15 ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
ವೈರಲ್ ಆಯ್ತು ಇಸ್ರೋ ಪೋಸ್ಟ್
ಚಂದ್ರನ ಅಂಗಳದಲ್ಲಿ ಚಂದ್ರಯಾನ-3 (Chandrayaan 3) ಲ್ಯಾಂಡರ್ (Vikram Lander) ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಹೊಸ ಇತಿಹಾಸವನ್ನು ಬರೆದಿದೆ. ಈ ಸಂಭ್ರಮವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಚಂದ್ರಯಾನ – 3 ಮಿಷನ್; ಭಾರತ, ನಾನು ನನ್ನ ಗಮ್ಯ ಸ್ಥಾನವನ್ನು ತಲುಪಿದ್ದೇನೆ ಮತ್ತು ನೀವು ಕೂಡ!; ಚಂದ್ರನ ಮೇಲೆ ಚಂದ್ರಯಾನ – 3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ (Soft Landing on Moon) ಮಾಡಿದೆ. ಶುಭಾಶಯಗಳು ಭಾರತ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral Post).
ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್ ಮಾಡುವ ಮೂಲಕ ಇಂಥ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತವು ಪಾತ್ರವಾಗಿದೆ. ಈ ಪ್ರದೇಶದ ಚಂದ್ರನಲ್ಲಿ ನೀರಿನ ಕುರುಹುಗಳ ಕಂಡ ಬಳಿಕ, ಜಗತ್ತಿನ ಬಹುತೇಕ ರಾಷ್ಟ್ರಗಳ ಆಸಕ್ತಿಗೆ ಕಾರಣವಾಗಿದೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ
ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಮಾಡಲಾಗಿತ್ತು. 5.20 ನಿಮಿಷಕ್ಕೆ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಲಾಯಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯುವ ಮುಂಚೆ ಅದು ನಾಲ್ಕು ಕಠಿಣ ಹಂತಗಳನ್ನು ಪೂರೈಸಿತು. ಪ್ರತಿ ಹಂತದಲ್ಲೂ ವಿಕ್ರಮ್ ಲ್ಯಾಂಡರ್ ನಿಧಾನವಾಗಿ ಚಂದ್ರನತ್ತ ತೆರಳುತ್ತಾ, ಚಂದ್ರನ ಮೇಲ್ಮೈಗೆ ಲಂಭವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಪ್ರತಿ ಹಂತದ ಯಶಸ್ಸು ವಿಜ್ಞಾನಿಗಳಲ್ಲಿ ಹುಮ್ಮಸ್ಸು ತುಂಬಿತು. ಮಿಷನ್ ಕಂಟ್ರೋಲ್ ರೂಮ್ನಲ್ಲಿ ಸಂಭ್ರಮ ಮನೆ ಮಾಡಿತ್ತು.
ಈ ಸುದ್ದಿಯನ್ನೂ ಓದಿ: Chandrayaan -3 : ಚಂದ್ರಯಾನದ ಯಶಸ್ಸಿನ ಹಿಂದಿರುವ ಮಹಿಳೆ ಯಾರು?