Site icon Vistara News

Chandrayaan 3 : ಚಂದ್ರ ಗ್ರಹದಲ್ಲಿ ಮಾನವನ ವಾಸ ಕಷ್ಟಸಾಧ್ಯ; ಅಲ್ಲಿ ಎಲ್ಲವೂ Extreme! ಡಾ. ಬಿ.ಆರ್.‌ ಗುರುಪ್ರಸಾದ್ ಹೇಳಿದ್ದೇನು?

ISRO Scientist Dr BR Guruprasad and Hariprakash konemane and Chandrayaan 3 vistara news interview

ಬೆಂಗಳೂರು: ಇಂದಿನ ಪರಿಸ್ಥಿತಿಯಲ್ಲಿ ಚಂದ್ರ ಗ್ರಹದಲ್ಲಿ ಮಾನವನ ವಾಸ ಅಸಾಧ್ಯವಾಗಿದೆ. ಅಲ್ಲಿನ ಹವಾಮಾನದ ಬಗ್ಗೆ ಹೇಳಬೇಕೆಂದರೆ ಎಲ್ಲವೂ ವಿಪರೀತ (Extreme) ಆಗಿರುತ್ತದೆ. ಆದರೆ, ಚಂದ್ರಯಾನ 3 (Chandrayaan 3 ) ಈ ಎಲ್ಲದಕ್ಕೂ ಬುನಾದಿಯನ್ನು ಒದಗಿಸುತ್ತದೆ ಎಂದು ಇಸ್ರೋ ಮಾಜಿ ಹಿರಿಯ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಬಿ.ಆರ್.‌ ಗುರುಪ್ರಸಾದ್ (Dr BR Guruprasad) ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ. ಬಿ.ಆರ್.‌ ಗುರುಪ್ರಸಾದ್, ಚಂದ್ರ ಗ್ರಹದಲ್ಲಿ ಸದ್ಯದ ಮಟ್ಟಿಗೆ ಮಾನವನ ವಾಸ ಅಸಾಧ್ಯ. ಚಂದ್ರ ಲೋಕಕ್ಕೂ ಭೂಲೋಕಕ್ಕೂ ಯಾವುದೇ ಸಾದೃಷ್ಯವಿಲ್ಲ. ಮೊದಲನೆಯದಾಗಿ ಚಂದ್ರ ಗ್ರಹದಲ್ಲಿ ಗುರುತ್ವಾಕರ್ಷಕ ಶಕ್ತಿ ಭೂಮಿಯ ಆರನೇ ಒಂದು ಭಾಗದಷ್ಟಿದೆ. ಇಲ್ಲಿ ನಿಮ್ಮ ತೂಕ 60 ಕೆಜಿ ಇದ್ದರೆ ಅಲ್ಲಿ ಕೇವಲ ಹತ್ತೇ ಕೆಜಿ ಆಗಿರುತ್ತದೆ. ಜತೆಗೆ ಅಲ್ಲಿ ಉಸಿರಾಡಲು ಆಮ್ಲಜನಕ ಇರುವುದಿಲ್ಲ. ಅಲ್ಲಿ ನಾವು ಬದುಕಲೇ ಆಗುವುದಿಲ್ಲ. ಇನ್ನು ಉಷ್ಣತೆಯನ್ನು ನೋಡುವುದಾದರೆ ಅದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ ಎಂದು ಹೇಳಿದರು.

ವಾತಾವರಣವೇ ಕಷ್ಟ

ಚಂದ್ರ ಗ್ರಹದಲ್ಲಿ ಬೆಳಗ್ಗೆ ವೇಳೆ ಉಷ್ಣತೆ 100 ಡಿಗ್ರಿ ಪ್ಲಸ್‌ ಇದ್ದರೆ, ರಾತ್ರಿ ವೇಳೆ ಮೈನಸ್ 100 ಡಿಗ್ರಿಯಷ್ಟು ಇರಬಹುದಾಗಿದೆ. ಆದರೆ, ಭೂ ಗ್ರಹದಲ್ಲಿ ಆ ರೀತಿ ಆಗುವುದೇ ಇಲ್ಲ. ಮೈನಸ್‌ ಅಥವಾ ಪ್ಲಸ್‌ 100 ಡಿಗ್ರಿ ಆಗಲು ಸಾಧ್ಯವೇ ಇಲ್ಲ. ಒಂದೆರಡು ಡಿಗ್ರಿ ಆ ಕಡೆ, ಈ ಕಡೆ ಆದರೂ ನಮಗೆ ಅದನ್ನು ತಡೆದುಕೊಳ್ಳುವುದು ಕಷ್ಟವಾಗುತ್ತದೆ. ಇನ್ನು ಅಲ್ಲಿ ಮಾರಕ ಕಿರಣಗಳು ಇರುತ್ತದೆ. ಹಾಗಾಗಿ ಮಾನವ ಅಲ್ಲಿ ಜೀವಿಸಲು ಸಾಧ್ಯವೇ ಇಲ್ಲ. ಆದರೆ, ಮುಂದೊಂದು ದಿನ ಮಾನವ ವಾಸಯೋಗ್ಯ ಸ್ಥಿತಿಯನ್ನು ನಿರ್ಮಾಣ ಮಾಡಬಹುದು ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ವಿವರಿಸಿದರು.

ಇಂದಲ್ಲ ನಾಳೆ ಚಂದ್ರ ಗ್ರಹದಲ್ಲಿ ಮಾನವ ನೆಲೆಯನ್ನು ಸ್ಥಾಪಿಸುತ್ತಾನೆ. ಇಲ್ಲಿ ಭಾರತ, ಅಮೆರಿಕ ಎಂದು ನಾನು ಹೇಳುವುದಿಲ್ಲ. ಒಟ್ಟಾರೆಯಾಗಿ ಮಾನವ ತಾನು ಅಲ್ಲಿ ವಾಸ ಮಾಡಲು ನೆಲೆಗಳನ್ನು ಸ್ಥಾಪನೆ ಮಾಡುವತ್ತ ಹೆಜ್ಜೆ ಇಡುತ್ತಾನೆ. ಆ ನಿಟ್ಟಿನಲ್ಲಿಯೇ ಇಂದು ಅಮೆರಿಕ ಆರ್ಟೆಮಿಸ್‌ ಎನ್ನುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಉದ್ದೇಶವೇನೆಂದರೆ, ಚಂದ್ರನ ಮೇಲೆ ಹೋಗಿ ಎರಡು- ಮೂರು ದಿನ ಇದ್ದು ವಾಪಸ್‌ ಬರುವುದಲ್ಲ. ಅಲ್ಲಿಯೇ ನಿರಂತರವಾಗಿ ವಾಸ ಮಾಡಲು ಆಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ತಿಳಿಸಿದರು.

ಇದನ್ನೂ ಓದಿ: Chandrayaan 3 : ಚಂದ್ರಯಾನ 2 ವಿಫಲವಲ್ಲ; 3ರ ಸಕ್ಸಸ್‌ ಹಿಂದೆ ಅದರದ್ದೇ ದೊಡ್ಡ ಪಾತ್ರ: ಡಾ. ಬಿ.ಆರ್.‌ ಗುರುಪ್ರಸಾದ್

ಅಂತರಿಕ್ಷದ ಕನಸು ನನಸಾಗಬಹುದು!

ನಾನು ಅಂತರಿಕ್ಷಕ್ಕೆ ಪ್ರವಾಸ ಹೋಗಿ ಬರುತ್ತೇನೆ ಎಂದು ಕನಸು ಇಟ್ಟುಕೊಂಡವರಿಗೆ ನಿರಾಸೆ ಆಗುವುದಿಲ್ಲ. ಈಗ ನಿಮ್ಮ ಬಳಿ ಕಾಲು ಲಕ್ಷ ಡಾಲರ್‌ (20 ಲಕ್ಷ ರೂಪಾಯಿ) ಇದ್ದರೆ ಅಂತರಿಕ್ಷಕ್ಕೆ ಪ್ರವಾಸಿಯಾಗಿ ಹೋಗಿ ಬರಬಹುದು. ಅಂದರೆ, ಭೂಮಿಯನ್ನು ಸುತ್ತುವುದಕ್ಕೆ ಅಲ್ಲ. ಕೇವಲ ಅಂತರಿಕ್ಷಕ್ಕೆ ಹೋಗಿ ಕೆಲವು ನಿಮಿಷಗಳ ಕಾಲ ವಿಹರಿಸಿ, ತೂಕರಹಿತ ಸ್ಥಿತಿಯನ್ನು ಅನುಭವಿಸಿ, ಅಲ್ಲಿಂದ ಅದ್ಭುತವಾಗಿ ಕಾಣುವ ಭೂಮಿಯ ದೃಶ್ಯವನ್ನು ನೋಡಿ ತಾವು ಕೆಳಗೆ ಬರಬಹುದು ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ತಿಳಿಸಿದರು.

Exit mobile version