ಬೆಂಗಳೂರು: ಚಂದ್ರಯಾನ 3ರ (Chandrayaan 3) ಯಶಸ್ಸಿನ ನಂತರ ಮಿಷನ್ ಆದಿತ್ಯ ನಮ್ಮ ಮುಂದಿನ ಗುರಿ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆ ಸಾಗಲಿದೆ. ಆದಿತ್ಯ ಎನ್ನುವ ನೌಕೆಯ ಹೆಸರು “ಆದಿತ್ಯ ಎಲ್ 1” ಎಂಬುದಾಗಿದೆ. ಆದಿತ್ಯ ಎಂದರೆ ಸೂರ್ಯನ ಹೆಸರು. ಎಲ್ 1 ಎಂದರೆ, ಆದಿತ್ಯ ಎನ್ನುವ ನೌಕೆಯು ಸೂರ್ಯನ ಅನ್ವೇಷಣೆಗಾಗಿಯೇ ಮುಡಿಪಾಗಿಟ್ಟ ಒಂದು ರೋಬೋಟ್ ಅಂತರಿಕ್ಷ ನೌಕೆಯಾಗಿದೆ ಎಂದು ಹಿರಿಯ ವಿಜ್ಞಾನಿ ಡಾ. ಬಿ.ಆರ್. ಗುರುಪ್ರಸಾದ್ (Dr BR Guruprasad) ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ರೋಬೋಟ್ ಅಂತರಿಕ್ಷ ನೌಕೆ ಏಕೆಂದರೆ ಸೂರ್ಯನಲ್ಲಿ ಮನುಷ್ಯರು ಇಳಿಯಲು ಆಗುವುದಿಲ್ಲ. ಆ ಉಷ್ಣತೆಯನ್ನು ತಡೆದುಕೊಳ್ಳಲು ಈ ರೋಬೋಟ್ ನೌಕೆಯನ್ನು ಸಿದ್ಧಪಡಿಸಲಾಗುತ್ತದೆ. ಚಂದ್ರನ ಮೇಲೆ ಹೇಗೋ ಇಳಿದಾಯಿತು. ಆಧರೆ, ಸೂರ್ಯನ ಮೇಲೆ ಇಳಿಯುವುದು ಕಷ್ಟವಿದೆ. ಏಕೆಂದರೆ ಅಲ್ಲಿನ ಉಷ್ಣತೆ 6 ಸಾವಿರ ಡಿಗ್ರಿ ಸೆಂಟಿಗ್ರೇಡ್ ಇರಲಿದೆ. ಇನ್ನು ಸೂರ್ಯ ಹಾಗೂ ಭೂಮಿಗೆ ಇರುವ ಅಂತ 15 ಕೋಟಿ ಕಿಲೋ ಮೀಟರ್ ಆಗಿದೆ. ಆದರೆ, ಚಂದ್ರ ಹಾಗೂ ಭೂಮಿಯ ನಡುವಿನ ಅಂತರ ಕೇವಲ 4 ಲಕ್ಷ ಕಿ.ಮೀ. ಇದೆ. ಒಬ್ಬ ಫ್ರೆಂಚ್ ಗಣಿತ ಶಾಸ್ತ್ರಜ್ಞನ ಗೌರವಾರ್ಥ ಎಲ್ 1 (ಲೆಗ್ರಾಂಜಿಯನ್ ಪಾಯಿಂಟ್) ಎಂದು ಇಡಲಾಗಿದೆ. ಈ ಲೆಗ್ರಾಂಜಿಯನ್ ಪಾಯಿಂಟ್‌ನಿಂದ ಸಾಮಾನ್ಯವಾಗಿ ಸ್ವಲ್ಪ ಆಚೀಚೆ ಸರಿಯಬಹುದೇ ವಿನಃ ಬೇರೆಲ್ಲೋ ಹೊರಟು ಹೋಗಲು ಸಾಧ್ಯವಿಲ್ಲ. ಏಕೆಂದರೆ, ಭೂಮಿ ಹಾಗೂ ಸೂರ್ಯನ ಗುರುತ್ವಾಕರ್ಷಕ ಶಕ್ತಿ ಬಹುಮಟ್ಟಿಗೆ ಸಮಾನವಾಗಿರಲಿದೆ. ಅಲ್ಲಿಂದ 24 ಗಂಟೆಗಳ ಕಾಲ ಸೂರ್ಯನನ್ನು ಅಧ್ಯಯನ ಮಾಡಬಹುದು. ಆ ಒಂದು ಕಾರ್ಯಕ್ಕಾಗಿ ಆದಿತ್ಯ ನೌಕೆಯನ್ನು ಉಡಾಯಿಸಲಾಗುತ್ತದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ಅವರು ತಿಳಿಸಿದರು.
ನಾಸಾ ಮತ್ತು ಇಸ್ರೊ ಭವಿಷ್ಯದಲ್ಲಿ ಭೂ ವೀಕ್ಷಣಾ ಉಪಗ್ರಹ ಕಳಿಸಲು ಒಪ್ಪಂದ ಮಾಡಿಕೊಂಡಿವೆ. ನಿಸಾರ್ (NISAR – ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್) ಎಂದು ಇದನ್ನು ಕರೆಯಲಾಗುತ್ತದೆ. ಇದು ಭೂಮಿಯ ವೀಕ್ಷಣೆಗಾಗಿ ಇರುವ ಒಂದು ರೇಡಾರ್ ಉಪಗ್ರಹವಾಗಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ರೇಡಾರ್‌ನಿಂದ ಉತ್ತಮ ಚಿತ್ರ ಸಿಗಲಿದೆ
ನಮಗೆ ಯಾಕೆ ರೇಡಾರ್ ಉಪಗ್ರಹ ಬೇಕೆಂದರೆ, ನಾವು ಮೇಲಿನಿಂದ ಭೂಮಿಯನ್ನು ವೀಕ್ಷಣೆ ಮಾಡುವಾಗ ಕೆಲವು ಬಾರಿ ಮೋಡ ಇದ್ದರೆ, ಹವಾಮಾನ ಚೆನ್ನಾಗಿಲ್ಲದಿದ್ದರೆ ಇಲ್ಲವೇ ರಾತ್ರಿ ವೇಳೆಯಾಗಿದ್ದರೆ ಅತ್ಯುತ್ತಮ ಚಿತ್ರವನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಅದೇ ರೇಡಾರ್ ಉಪಗ್ರಹ ಇದ್ದರೆ ಹಗಲು-ರಾತ್ರಿ ಚಿತ್ರವನ್ನು ತೆಗೆಯಬಹುದಾಗಿದೆ. ಹೀಗಾಗಿ ನಾಸಾ ಹಾಗೂ ಇಸ್ರೋ ಒಂದು ಬಗೆಯ ರೇಡಾರ್ ಅನ್ನು ನಿರ್ಮಾಣ ಮಾಡುತ್ತದೆ. ಜತೆಗೆ ಉಪಗ್ರಹ ಕೂಡಾ ನಮ್ಮದೇ, ಉಡಾವಣೆಯೂ ನಮ್ಮದೇ ಆಗಿರುತ್ತದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಇಂದು ನಾಸಾ ನಮ್ಮ ಜತೆ ಕೆಲಸ ಮಾಡಲು ಯಾಕೆ ಸಿದ್ಧವಾಗಿದೆ ಎಂದರೆ ಭಾರತದ ಶಕ್ತಿ, ಸಾಮರ್ಥ್ಯ ಕಾರಣವಾಗಿದೆ. ನಾಸಾದವರು ಗೌರವಯುತವಾಗಿ ಕೈಜೋಡಿಸಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ಹೇಳಿದರು.
ಅಂತರಿಕ್ಷದಲ್ಲಿ ಮಾನವ ಇದ್ದರೆ ಎಲ್ಲವೂ ಬದಲಾಗುತ್ತದೆ
ಅಂತರಿಕ್ಷದಲ್ಲಿ ಮಾನವ ಇದ್ದರೆ ಎಲ್ಲವೂ ಬದಲಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಭಾರತ ಶ್ರಮಿಸುತ್ತಿದೆ. ಇಸ್ರೋದಿಂದ ಮಾನವ ಸಹಿತ ಗಗನಯಾನಕ್ಕೆ ಸಂಬಂಧಪಟ್ಟಂತೆ ಒಂದಾದ ಮೇಲೆ ಒಂದರಂತೆ ತಯಾರಿಗಳು ನಡೆಯುತ್ತಿವೆ. ಇದಕ್ಕೆ ಕೋವಿಡ್ ಸಹಿತ ಅನೇಕ ಸವಾಲುಗಳು ಎದುರಾಗುತ್ತಿವೆ. ಎಲ್ಲದಕ್ಕಿಂತ ಮುಂಚಿತವಾಗಿ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಇದು ಖಾತ್ರಿಯಾದ ಮೇಲಷ್ಟೇ ಮಾನವ ಸಹಿತ ಗಗನಯಾನ ಸಾಧ್ಯವಾಗಲಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಅನೇಕ ಖಾಸಗಿ ವೈಜ್ಞಾನಿಕ, ತಾಂತ್ರಿಕ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು ಇಸ್ರೋದೊಂದಿಗೆ ಕೈಜೋಡಿಸಲು ಮುಂದಾಗಿವೆ. ಮಾನವ ಸಹಿತ ಗಗನಯಾನಕ್ಕೆ ಬೆಂಬಲವಾಗಿ ನಿಂತಿವೆ. ಈಗ ಚಂದ್ರಯಾನ 3 ರಲ್ಲಿ ಬಳಕೆಯಾದ ಎಲ್‌ವಿಎಂ 3 ರಾಕೆಟ್ ಅನ್ನೇ ಮಾನವ ಸಹಿತ ಗಗನಯಾನಕ್ಕೂ ಬಳಕೆ ಮಾಡಲಾಗುವುದು. ಆದರೆ, ಈಗ ಈ ರಾಕೆಟ್ ಮೇಲೆ ಇರುವ ಸುರಕ್ಷತೆಯ ನಂಬಿಕೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಳ್ಳಬೇಕಾಗುತ್ತದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ವಿವರಣೆ ನೀಡಿದರು.
ದೈತ್ಯ ಆಂಟೆನಾ ನಮಗೆ ಸಹಕಾರಿಯಾಗಿದೆ!
ಚಂದ್ರನ ಮೇಲೆ ನೌಕೆ ಇಳಿಯುವ ಮೊದಲ ಆ 17 ದಿನಗಳು ಅತ್ಯಂತ ಕಠಿಣವಾಗಿರುತ್ತವೆ. ಏಕೆಂದರೆ, ನೌಕೆಯು ಒಮ್ಮೆ ಚಂದ್ರನ ಕಕ್ಷೆಗೆ ಹೋದ ಮೇಲೆ ನಾವು ಕಕ್ಷೆಯ ಎತ್ತರವನ್ನು ಆಗಾಗ ಕಡಿಮೆ ಮಾಡಬೇಕಾಗುತ್ತದೆ. ಅದು ತುಂಬಾ ನಿಖರವಾಗಿ ಆಗಬೇಕಾದ ಕಾರ್ಯವಾಗಿದೆ. ಇದು ಹತ್ತಿರದಲ್ಲಿ ನಡೆಯುತ್ತಿರುವ ಕಾರ್ಯವಲ್ಲ. 4 ಲಕ್ಷ ಕಿ.ಮೀ. ದೂರದಲ್ಲಿ ನಡೆಯುತ್ತಿರುವುದಾಗಿದೆ. ನಾವು ಮಾಡಿರುವ ಕೆಲಸವು ಸರಿ ಇದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದಕ್ಕೆ ಬ್ಯಾಲಾಳುವಿನ ಹತ್ತಿರ 105 ಅಡಿ ಅಗಲದ ಒಂದು ದೈತ್ಯ ಆಂಟೆನಾ ಇದೆ. ಇದು ಭಾರತೀಯ ಎಂಜಿನಿಯರಿಂಗ್‌ನ ಅದ್ಭುತವಾಗಿದೆ. ಇದು ಚಂದ್ರ ಗ್ರಹದಲ್ಲಿ ಪಿಸುಗುಟ್ಟುವಂತಹ ಮಾಹಿತಿಯನ್ನು ಸಂಗ್ರಹಿಸಿ, ವೃದ್ಧಿಸಿ ವಿಜ್ಞಾನಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪರಿವರ್ತಿಸುತ್ತಿದೆ ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಮಂಗಳಯಾನ-ಚಂದ್ರಯಾನಕ್ಕಿರುವ ವ್ಯತ್ಯಾಸ ಏನು?
ಮಂಗಳ ಗ್ರಹ ಎಂಬುದು ಒಂದು ಗ್ರಹವಾಗಿದೆ. ಚಂದ್ರ ಎಂಬುದು ಭೂಮಿಯ ಉಪ ಗ್ರಹವಾಗಿದೆ. ಚಂದ್ರನ ಮೇಲೆ ಯಾವುದೇ ವಾತಾವರಣ ಇಲ್ಲ. ಆದರೆ, ಮಂಗಳನ ಮೇಲೆ ತುಂಬಾ ತೆಳುವಾದ ವಾತಾವರಣ ಇದೆ. ಚಂದ್ರ ತನ್ನ ಅಕ್ಷದ ಸುತ್ತ ಒಮ್ಮೆ ಸುತ್ತಲು 27.3 ದಿನವನ್ನು ತೆಗೆದುಕೊಳ್ಳುತ್ತದೆ. ಭೂಮಿ ಸುತ್ತ ಸುತ್ತಲೂ ಅಷ್ಟೇ ದಿನ ಬೇಕು. ಆದರೆ, ಮಂಗಳ ಗ್ರಹ ಸೂರ್ಯನನ್ನು ಸುತ್ತಲು 687 ದಿನವನ್ನು ತೆಗೆದುಕೊಳ್ಳುತ್ತದೆ. ತನ್ನ ಅಕ್ಷೆಯನ್ನು ಸುತ್ತಲು 24 ಗಂಟೆ 37 ನಿಮಿಷ. ಅಂದರೆ ಭೂಮಿಯ ರೀತಿಯಲ್ಲಾಗಿದೆ. ಹೀಗಾಗಿ ಮಂಗಳಯಾನ ಹಾಗೂ ಚಂದ್ರಯಾನದ ನಡುವೆ ಖಗೋಳ ಶಾಸ್ತ್ರದ ಅನುಸಾರ ಸಾಕಷ್ಟು ವ್ಯತ್ಯಾಸ ಇದೆ. ಈ ವ್ಯತ್ಯಾಸವೇ ನಮಗೆ ನೌಕೆಯನ್ನು ಕಳುಹಿಸಲು ಪ್ರತ್ಯೇಕ ಸವಾಲನ್ನು ಒಡ್ಡುತ್ತದೆ. ಆದರೆ, ಈ ಎರಡರಲ್ಲೂ ಭಾರತ ಯಶಸ್ವಿಯಾಗಿದೆ. ಎಂದು ಡಾ. ಬಿ.ಆರ್. ಗುರುಪ್ರಸಾದ್ ವಿವರಿಸಿದರು.
ಇದನ್ನೂ ಓದಿ: Chandrayaan 3 : 14 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಕತೆ ಏನು?
ಮಂಗಳಯಾನಕ್ಕೆ ತಲುಪಬೇಕಾದ ದೂರ 67 ಕೋಟಿ ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಬೇಕಾಯಿತು. ಆದರೆ, ಇಷ್ಟು ದೂರ ಕ್ರಮಿಸಿ ಕೇವಲ 400 ಕಿ.ಮೀ. ದೂರದಿಂದ ಮಂಗಳ ಗ್ರಹದಿಂದ ಹಾದುಹೋಗುವಂತೆ ಮಾಡಿದೆವು ಎಂದು ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.