ಬೆಂಗಳೂರು: ಇಡೀ ದೇಶವೇ ಚಂದ್ರಯಾನ (Chandrayaan-3) ಆರಂಭದ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಕೆಲವು ಚಿಂತಕರು ವ್ಯಕ್ತಪಡಿಸಿರುವ ಅಭಿಪ್ರಾಯ ಭಾರಿ ಚರ್ಚೆಗೆ ಕಾರಣವಾಗಿದೆ. ಅವರು ಚಂದ್ರಯಾನದ ಸಾಹಸವನ್ನು ಅಭಿನಂದಿಸಿದ್ದಾರೆ. ಆದರೆ, ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ (Prayer at Tirupati) ನೆರವೇರಿಸಿದ ನಿಲುವನ್ನು ಆಕ್ಷೇಪಿಸಿದ್ದಾರೆ. ಆದರೆ, ಇದನ್ನು ಆಕ್ಷೇಪಿಸುವ ಖಂಡನಾ ಹೇಳಿಕೆಯಲ್ಲಿ ಎಡವಟ್ಟು ಮಾಡಿದ್ದಾರೆ. ಚಂದ್ರಯಾನ ಎಂದು ಹೇಳುವ ಬದಲು ಮಂಗಳಯಾನ ಎಂದಿದ್ದಾರೆ. ಈ ಎಡವಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ (BL Santosh) ಅವರು ಕೂಡಾ ಈ ಎಡವಟ್ಟನ್ನು ಗೇಲಿ ಮಾಡಿದ್ದಾರೆ. ಚಂದ್ರಯಾನಕ್ಕೂ ಮಂಗಳಯಾನಕ್ಕೂ ಇವರಿಗೆ ವ್ಯತ್ಯಾಸ ಗೊತ್ತಿಲ್ಲವೇ ಎಂದು ಕೇಳಿದ್ದಾರೆ.
ಹಾಗಿದ್ದರೆ ಚಿಂತಕರ ಪತ್ರದಲ್ಲಿ ಏನಿತ್ತು?
ಇಸ್ರೋ ಸಂಸ್ಥೆಯ ನಡೆ ಖಂಡನೀಯ
ಮಂಗಳಯಾನ-3ಕ್ಕೆ ಇಸ್ರೋ ಸಂಸ್ಥೆ ಸಜ್ಜಾಗಿರುವುದು ಅಭಿನಂದನೀಯ. ಇದೇ ಸಂದರ್ಭದಲ್ಲಿ ಮಂಗಳಯಾನದ ಯಶಸ್ವಿಗಾಗಿ ಇಸ್ರೋದ ಕೆಲವು ವಿಜ್ಞಾನಿಗಳು ಮಂಗಳಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದು ತಿಳಿದುಬಂದಿದೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುವಂತಿದೆ.
ಭಾರತದ ಸಂವಿಧಾನ 51ಎ(ಹೆಚ್) ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಇಸ್ರೋದ ವಿಜ್ಞಾನಿಗಳು ತಾವು ಸತತವಾಗಿ ಹಲವಾರು ವರ್ಷಗಳಿಂದ ಎಲ್ಲ ಎಡರು ತೊಡರುಗಳ ನಡುವೆ ಸಂಶೋಧಿಸಿ, ಪರೀಕ್ಷಿಸಿ, ರೂಪಿಸಿರುವ ಯಾನದ ಬಗೆಗೆ ತಮಗೇ ನಂಬಿಕೆ ಇಲ್ಲವೆಂಬುದನ್ನು ಈ ಮೂಲಕ ಸಾಬೀತುಗೊಳಿಸಿದ್ದಾರೆ. ಇದರಿಂದ ಆತ್ಮಸ್ಥೆರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತವೆ. ವೈಜ್ಞಾನಿಕ ನಡೆಯ ಬಗೆಗೆ ಈ ರೀತಿಯಾದ ಅನುಮಾನ ಮತ್ತು ಸಂಶಯ ದೃಷ್ಟಿಗೆ ಎಡೆಯಿಲ್ಲದಂತೆ ನಡೆದುಕೊಳ್ಳಬೇಕಾಗಿರುವುದು ವೈಜ್ಞಾನಿಕ ಸಂಸ್ಥೆಗಳ ಆಶಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮೇಲೆ ಎಸಗಿರುವ ಕೃತ್ಯವು ಖಂಡನಾರ್ಹವಾಗಿದೆ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ.
ಈ ಹಿಂದೆಯೂ ಇದೇ ರೀತಿಯ ಆಚಾತುರ್ಯವನ್ನು ಆಗಿರುವುದನ್ನು ಅನೇಕ ಪ್ರಾಜ್ಞರು ಖಂಡಿಸಿದ್ದರೂ ಸಹ ಮತ್ತೊಮ್ಮೆ ಪುನರಾವರ್ತನೆಯಾಗಿರುವುದು ಒಪ್ಪತಕ್ಕ ವಿಚಾರವಲ್ಲ. ಈ ನಡೆಯು ಸಂಸ್ಥೆಯ ಸಂವಿದಾನವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಇದಕ್ಕೆ ಕಾರಣೀಭೂತರಾದ ವ್ಯಕ್ತಿಗಳಿಗೆ ಸೂಕ್ತ ಸಲಹೆ ನೀಡುವುದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರ ಕರ್ತವ್ಯವಾಗಿದೆ.
ಎಂದು ಬರೆದಿರುವ ಈ ಪತ್ರಕ್ಕೆ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ವೆಂಕಟಯ್ಯ ಅಪ್ಪಗೆರೆ, ಸನತ್ ಕುಮಾರ್ ಬೆಳಗಲಿ, ಎಲ್.ಎನ್. ಮುಕುಂದರಾಜ್, ಡಾ. ಆರ್.ಎನ್.ರಾಜಾನಾಯಕ್, ಕೆ. ಬಿ. ಮಹದೇವಪ್ಪ, ನಾಗೇಶ್ ಆರಳಕುಪ್ಪೆ, ಡಾ. ಹುಲಿಕುಂಟೆಮೂರ್ತಿ, ಹೆಚ್.ಕೆ, ವಿವೇಕಾನಂದ, ಡಾ.ಹೆಚ್.ಕೆ.ಎಸ್.ಸ್ವಾಮಿ, ಡಿ. ಎಂ. ಮಂಜುನಾಥಸ್ವಾಮಿ, ಕೆ. ಮಹಂತೇಶ್, ಡಾ. ನಾಗೇಶ್ ಕೆ.ಎನ್, ಪ್ರಭಾ ಬೆಳವಂಗಲ, ಅಲ್ಲೂರು ಶಿವರಾಜ ಅವರು ಸಹಿ ಹಾಕಿದ್ದಾರೆ.
ಬಿ.ಎಲ್ ಸಂತೋಷ್ ಹೇಳಿದ್ದೇನು?
ಎಡಪಂಥೀಯ ಚಿಂತಕರ ಈ ಅಭಿಪ್ರಾಯವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಗೇಲಿ ಮಾಡಿದ್ದಾರೆ.
ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ , ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ , ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು ….!!!! ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ತರಾಟೆ
ಇದೇ ಅಭಿಪ್ರಾಯವನ್ನು ಇತರ ಕೆಲವರೂ ವ್ಯಕ್ತಪಡಿಸಿದ್ದಾರೆ.
1 ತಿರ್ಬೋಕಿ ಬುದ್ಧಿಜೀವಿಗಳು ಚೀನಾದಲ್ಲಿ ಮಳೆ ಬಂದರೆ ಭಾರತದಲ್ಲಿ ಕೊಡೆ ಹಿಡೀತಾವೆ.. Paid Artist.. ಎಂದು ಸಚಿನ್ ಎಂಬವರು ಹೇಳಿದ್ದಾರೆ.
2. ವಿಚಾರವ್ಯಾಧಿಗಳು…ಏನು ಮಾಡಿದರೂ ಏನು ಮಾತಾಡಿದರೂ ಅಷ್ಟೇ…ಅಲಕ್ಷ್ಯ ಮಾಡಿ…. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ನಟೇಶ್ ವಿಟ್ಲ ಅಭಿಪ್ರಾಯಿಸಿದ್ದಾರೆ.
3. ಸರ್ಕಾರ ದೇವಸ್ಥಾನಗಳ ದುಡ್ಡು ತಿಂದರೆ ತಪ್ಪಿಲ್ಲ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಿಂದೂ ದೇವರ ಬಳಿ ಹೋಗುವಂತಿಲ್ಲ…. ಪ್ರತಿ ಯುಗದಲ್ಲೂ ಇಂತ ಅಪ್ರಯೋಜಕರ ಪಟಾಲಂ ಇದ್ದೇ ಇರುತ್ತದೆ ಅಂತ ನಮ್ಮ ಇತಿಹಾಸವೇ ಹೇಳುತ್ತದೆ ಇಂಥವರನ್ನ ಗಣನೆಗೆ ತೆಗೆದುಕೊಳ್ಳುವುದೇ ಒಂದು ದೊಡ್ಡ ಅಪರಾಧ ಎಂದಿದ್ದಾರೆ ಪವನ್ ಪಡುವಾಳ್.
4. ಇವರು ಯಾವುದರಲ್ಲಿ ದೊಡ್ಡವರು? ವಿಜ್ಞಾನಿಗಳು ಅವರ ಆಲೋಚನೆಯಂತೆ ಮಾಡಿದ್ದಾರೆ ಅಷ್ಟೇ. ಭಾರತ ಮೂಲತಃ ಆಸ್ತಿಕರ ದೇಶ ಬೆರಳೆಣಿಕೆಯ ನಾಸ್ತಿಕರೂ ಇದ್ದಾರೆ ಸತ್ಯ. ಆದರೆ ಮಾನ್ಯತೆ ಬಹುಮತಕ್ಕೋ ಅಲ್ಪಮತಕ್ಕೋ?! ವಿಜ್ಞಾನಿಗಳು ಅವರ ಭಾವನೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಈ ಮೇಲಿನ ಪ್ರಭೃತಿಗಳು ಇಸ್ರೋ ವಿಜ್ಞಾನಿಗಳಾದ ಕಾಲಕ್ಕೆ ಅವರಿಗೆ ಅನಿಸಿದಂತೆ ಮಾಡಲಿ ಬೇಡ ಎಂದವರಾರು?! ಸದ್ಯಕ್ಕೆ ಕೊಂಕು ನಡೆ ನಿಲ್ಲಿಸಲಿ ಎನ್ನುವುದು ಡ್ಯಾನಿ ಪಿರೇರಾ ಅವರ ಅಭಿಮತ.
5. ವೈದ್ಯಕೀಯ ಕ್ಷೇತ್ರದ ಮನೋವಿಜ್ಞಾನ ವಿಭಾಗವು, ಶ್ರೀಮದ್ಭಗವದ್ಗೀತೆಯನ್ನು ಅತ್ಯಂತ ವೈಜ್ಞಾನಿಕ ಮನಃಶಾಸ್ತ್ರ ಅಂತ ಸ್ವೀಕರಿಸಿದೆ. ಭಗವದ್ಗೀತೆಯ 18ನೇ ಅಧ್ಯಾಯದಲ್ಲಿ ಬರುವ 14ನೆ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಯಾವುದೇ ಒಂದು ಕಾರ್ಯದ ಸಫಲತೆಗೆ 5 ಸಂಗತಿಗಳು ಅವಶ್ಯಕ ಎಂದು ಬೋಧಿಸಿದ್ದಾನೆ..
1.ಅಧಿಷ್ಠಾನ
2.ಕರಣಮ್ ಚ ಪೃಥಿಗ್ವಿದಮ್
3.ಪೃಥಕ್ಚ್ಚೇಷ್ಟ
4.ಕರ್ತಾ
5.ದೈವಂ..
ನಾಲ್ಕೂ ಇದ್ದು ಭಗವಂತನ ಆಶೀರ್ವಾದ ಇಲ್ಲದೆ ಹೋದರೆ, ಕಾರ್ಯ ಸಾಧುವಾಗೊಲ್ಲ.. ಅದನ್ನೇ,ISRO ಅಧಿಕಾರಿಗಳು ಮಾಡಿದ್ದು.. ಈ ನೆಲದ ಸಂಸ್ಕೃತಿಯನ್ನು ಗೌರವಿಸಿದ್ದಾರೆ ಎನ್ನುತ್ತಾರೆ ಗಣೇಶ್ ಯು. ಮಧುಕರ್
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ; ಸಾಫ್ಟ್ ಲ್ಯಾಂಡ್‌ಗೆ ಎಷ್ಟು ದಿನ ಬೇಕು?