Site icon Vistara News

Chandru Murder Case | ಉರ್ದುವಿನಲ್ಲಿ ಮಾತನಾಡದ್ದೇ ಜೆಜೆ ನಗರ ಚಂದ್ರು ಕೊಲೆಗೆ ಕಾರಣ

ಚಂದ್ರು

ಬೆಂಗಳೂರು: ಜೆಜೆ ನಗರದ ಹಳೆಗುಡ್ಡದಹಳ್ಳಿ ನಡೆದ ವಿ.ಚಂದ್ರು (16) ಕೊಲೆ (Chandru Murder Case) ಪ್ರಕರಣದ ನೈಜ ಕಾರಣ ಕೊನೆಗೂ ಬಯಲಾಗಿದೆ. ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಅಪರಾಧ ತನಿಖಾ ದಳ (ಸಿಐಡಿ)ಕ್ಕೆ ಒಪ್ಪಿಸಿತ್ತು. ಸೂಕ್ಷ್ಮ ಪ್ರಕರಣದ ತನಿಖೆ ನಡೆಸಿರುವ ಸಿಐಡಿ, ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಉರ್ದುವಿನಲ್ಲಿ ಮಾತನಾಡದಿರುವುದೇ ಪ್ರಮುಖ ಕಾರಣ ಎಂದು ಉಲ್ಲೇಖಿಸಲಾಗಿದೆ.

ಏಪ್ರಿಲ್‌ 5ರಂದು ನಡೆದಿದ್ದ ಚಂದ್ರು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿದ್ದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೇಳಿಕೆಗಳು ದ್ವಂದ್ವವನ್ನು ಹುಟ್ಟುಹಾಕಿತ್ತು. ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಈಗ ಸಿಐಡಿ ಡಿವೈಎಸ್‌ಪಿ ಡಿ‌.ಸಿ. ನಂದಕುಮಾರ್ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಕೊಲೆಗೆ ನೈಜ ಕಾರಣ ಏನೆಂಬುದನ್ನು ತಿಳಿಸಲಾಗಿದೆ.

೧೭೧ ಪುಟಗಳ ಚಾರ್ಜ್‌ಶೀಟ್‌

ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ 171 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಚಂದ್ರು ಕೊಲೆ ಸಂಬಂಧ 49 ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಎ1 ಆರೋಪಿ ಶಾಹೀದ್ ಪಾಷ ಅಲಿಯಸ್ ನ್ಯಾರೋ, ಎ2 ಶಾಹೀದ್ ಪಾಷ ಅಲಿಯಾಸ್ ಗೇಣ, ಎ3 ಮೊಹಮ್ಮದ್ ನಬಿಲ್ ಅಲಿಯಾಸ್ ನಬಿಲ್, 17 ವರ್ಷದ ಬಾಲಕನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

ಇದನ್ನೂ ಓದಿ | ಜಾಲತಾಣದಲ್ಲಿ ಕೊಡವ ಜನಾಂಗ, ಮಹಿಳೆಯರನ್ನು ಅವಮಾನಿಸಿದವನ ವಿರುದ್ಧ FIR

ಚಂದ್ರು ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 4ರಂದು ಸ್ನೇಹಿತ ಸೈಮನ್ ರಾಜು ಜತೆ ಚಿಕನ್ ರೋಲ್ ತಿನ್ನಲು ಮೈಸೂರು ರಸ್ತೆಗೆ ಹೋಗಿದ್ದ. ವಾಪಸ್ ಆಗುವಾಗ ಜೆಜೆ ನಗರದಲ್ಲಿ ಚಂದ್ರು ಮತ್ತು ಶಾಹೀದ್ ಪಾಷ ನಡುವೆ (ಏ.5ರ ನಸುಕಿನಲ್ಲಿ) ನಡೆದ ಗಲಾಟೆಯಲ್ಲಿ ಚಾಕುವಿನಿಂದ ಚಂದ್ರು ತೊಡೆಗೆ ಇರಿಯಲಾಗಿತ್ತು. ಚಂದ್ರುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆ ಒಂದು ಮಾತು ಚಂದ್ರು ಕೊಲೆಗೆ ಕಾರಣವಾಯಿತು
ಆರೋಪಿ ಶಾಹೀದ್ ಪಾಷ ಅಲಿಯಾಸ್ ನ್ಯಾರೋ ಕನ್ನಡ ನಹೀ ಆತಾ ಉರ್ದು ಮೇ ಬೋಲೋ ಎಂದು ಹೇಳಿ ಜಗಳಕ್ಕೆ ಬಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಶಾಹೀದ್ ಪಾಷ ದಾಳಿ ನಡೆಸಲು ಮುಂದಾಗಿದ್ದು, ಚಂದ್ರು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದ. ಆರೋಪಿ ತನ್ನ ಬಳಿಯಿದ್ದ ಚಾಕು ತೆಗೆದು ಇರಿಯಲು ಮುಂದಾಗಿದ್ದ ಈ ವೇಳೆ ಆತನನ್ನು ಚಂದ್ರು ಸ್ನೇಹಿತ ಸೈಮನ್ ರಾಜ್ ಹಿಡಿದುಕೊಂಡಿದ್ದ. ಆಗ ಕೂಗಿಕೊಂಡ ಶಾಹೀದ್ ಪಾಷ ಇನ್ನೊಬ್ಬ ಆರೋಪಿ ಶಾಹೀದ್ ಗೇಣಾನನ್ನು ಕರೆದಿದ್ದಾನೆ. “ಆರೆ ಮುಜೆ ಮಾರ್ ರಹಾ ಹೈ” ಎಂದು ಉರ್ದುವಿನಲ್ಲಿ ಕೂಗಿ ಕರೆದಿದ್ದ.

ಈ ವೇಳೆ ಜೋರು ಗಲಾಟೆಯಾಗಿದ್ದು, ಚಂದ್ರು ತೊಡೆಗೆ ಆರೋಪಿ ಶಾಹಿದ್ ಪಾಷ ಇರಿದುಬಿಟ್ಟಿದ್ದ. ಅದೇ ವೇಳೆ ಸ್ಥಳಕ್ಕೆ ಓಡಿ ಬಂದ ಬಾಲಾಪರಾಧಿಯೊಬ್ಬ ಕೈಯಲ್ಲಿ ಲಾಂಗ್ ಹಿಡಿದು ಬಂದಿದ್ದ. ಎ2 ಆರೋಪಿ ಶಾಹೀದ್@ ಗೇಣಾ ಇಬ್ಬರು ಸಹ “ಛೋಡೋ ನಹಿ, ಮಾರ್ ಡಾಲೋ” ಅಂತ ಉರ್ದುವಿನಲ್ಲಿ ಕೂಗುತ್ತಾ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಎ2 ಶಾಹೀದ್ ಪಾಷ ಸೈಮನ್ ರಾಜ್ ಮೇಲೆ ಲಾಂಗ್ ಬೀಸಿದ್ದಾನೆ. ಆದರೆ, ಸೈಮನ್‌ ಕೂದಳೆಲೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಇನ್ನೊಂದೆಡೆ ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರು ಬಲತೊಡೆಗೆ ಚುಚ್ಚಿದ ಎ1 ಆರೋಪಿ ಶಾಹೀದ್ ಪಾಷ ಪರಾರಿ ಆಗಿದ್ದರು.

ಅವನಿಗೆ ಕನ್ನಡ, ಇವನಿಗೆ ಉರ್ದು ಬರುತ್ತಿರಲಿಲ್ಲ
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದ ವಿಚಾರವೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಭಾಷೆಯ ಸಮಸ್ಯೆಯೇ ಜಗಳಕ್ಕೆ ನಾಂದಿ ಹಾಡಿದೆ. ಜತೆಗೆ ರಸ್ತೆಯಲ್ಲಿ ಗುರಾಯಿಸಿದ್ದಕ್ಕೆ ಚಂದ್ರು ಹಾಗೂ ಶಾಹಿದ್‌ ಪಾಷ ನಡುವೆ ಜಗಳ ಶುರುವಾಗಿ ಹತ್ಯೆ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | `ಬಾಹುಬಲಿ’ ರೀತಿ ಮಗುವನ್ನು ಎತ್ತಿ ಹಿಡಿದು ರಸ್ತೆ ಮಧ್ಯೆ ರಾದ್ಧಾಂತ ಮಾಡಿದ ವ್ಯಕ್ತಿ

Exit mobile version