ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ವಾರ್ಡ್ ಮೀಸಲು ಅಧಿಸೂಚನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆಕಾಂಕ್ಷಿಗಳಾಗಿದ್ದ ಮಾಜಿ ಮೇಯರ್‌ಗಳು, ಉಪಮೇಯರ್‌ಗಳು, ಕೌನ್ಸಿಲ್‌ನಲ್ಲಿರುವ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು ಈಗ ಪ್ರಕಟಗೊಂಡಿರುವ ಮೀಸಲಾತಿಯ ಪ್ರಕಾರ ಚುನಾವಣೆ (BBMP Election) ನಡೆದರೆ ಸ್ಪರ್ಧಿಸಲು ಅಡಚಣೆಯಾಗಿದೆ. ಇದು ಎಲ್ಲರನ್ನೂ ಆತಂಕಕೀಡು ಮಾಡಿದೆ.
ವಾರ್ಡ್ ನಂಬರ್ ಮಾತ್ರ ಬದಲಾವಣೆ ಆಗುತ್ತದೆ. ಮೀಸಲಾತಿ ಹಳೆಯದೇ ಇರುತ್ತದೆ ಎಂದುಕೊಂಡಿದ್ದ ಮಾಜಿ ಕಾರ್ಪೊರೇಟರ್‌ಗಳು ಈಗ ಗೊಂದಲದಲ್ಲಿದ್ದಾರೆ. ಸಾಕಷ್ಟು ಕ್ಷೇತ್ರದಲ್ಲಿ ಬೇರೆ ಬೇರೆ ಮೀಸಲಾತಿ ನೀಡಲಾಗಿದ್ದು, ಹೊಸ ವಾರ್ಡ್‌ನಿಂದ ಸ್ಪರ್ಧಿಸುವುದಾ? ಅಥವಾ ಹಳೆಯ ವಾರ್ಡ್ ಮೀಸಲಾತಿ ಬದಲಾವಣೆಗೆ ಪಟ್ಟು ಹಿಡಿಯುವುದಾ ಎಂಬ ಗೊಂದಲದಲ್ಲಿ ಬಿಜೆಪಿ ಮಾಜಿ ಸದಸ್ಯರೂ ಇದ್ದಾರೆ. ಇನ್ನು ಬಿಜೆಪಿಗೆ ಅನುಕೂಲವಾಗುವಂತೆ ಮೀಸಲಾತಿ ಪ್ರಕಟ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಬಿಬಿಎಂಪಿ ಮೀಸಲಾತಿ ಪಟ್ಟಿಗೆ ಆಕ್ಷೇಪ ಸಲ್ಲಿಸಲು ಒಂದು ವಾರದ ಗಡುವು ನೀಡಲಾಗಿದೆ.
ಇದನ್ನೂ ಓದಿ | ಬೆಂಗಳೂರಿನ ಅಶೋಕ ಪಿಲ್ಲರ್ ಸಿಂಹಗಳೂ ಗರ್ಜಿಸಲಿವೆ?: ಬಿಬಿಎಂಪಿ ನಡೆಗೆ ಪ್ರತಿಪಕ್ಷ ಆಕ್ಷೇಪ
ಯಾವ ಯಾವ ನಾಯಕರಿಗೆ ವಾರ್ಡ್ ಕೈ ತಪ್ಪುವ ಭೀತಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತೆ ಮಾಜಿ ಮೇಯರ್ ಜಿ. ಪದ್ಮಾವತಿಗೆ ಟಿಕೆಟ್ ಕೈ ತಪ್ಪುವ ಆತಂಕ ಉಂಟಾಗಿದೆ. ಪ್ರಕಾಶ್‌ನಗರ ವಾರ್ಡ್‌ನಲ್ಲಿ ಸಾಮಾನ್ಯ ಮೀಸಲಿನಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ, ಈ ಬಾರಿ ಈ ವಾರ್ಡ್ ಮೀಸಲಾತಿಯನ್ನು ಹಿಂದುಳಿದ ವರ್ಗ “ಎ”ಗೆ ನೀಡಲಾಗಿದೆ.
ಇನ್ನು ರಾಮಲಿಂಗಾರೆಡ್ಡಿ ಆಪ್ತೆ ಗಂಗಾಬಿಕೆ ಮಲ್ಲಿಕಾರ್ಜುನ್ ಅವರು ಜಯನಗರ ವಾರ್ಡ್ ಪ್ರತಿನಿಧಿಸುತ್ತಿದ್ದರು. ವಾರ್ಡ್ ಮರುವಿಂಗಡಣೆ ವೇಳೆ ಜಯನಗರ ತೆಗೆದುಹಾಕಿ ಅಶೋಕ ಸ್ತಂಭ ಎಂದು ಮಾಡಲಾಗಿದೆ. ಈ ವಾರ್ಡ್ ಮೀಸಲಾತಿ ಮಹಿಳೆಗೆ ಇತ್ತು. ಇದೀಗ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಅದೇ ರೀತಿ ಮಾಜಿ ಮೇಯರ್ ಮಂಜುನಾಥ್‌ರೆಡ್ಡಿಗೂ ವಾರ್ಡ್ ಕೈತಪ್ಪುವ ಭೀತಿ ಇದ್ದು, ಮಂಜುನಾಥ್‌ರೆಡ್ಡಿ ಮಡಿವಾಳ ವಾರ್ಡ್‌ನಿಂದ ಸ್ಪರ್ಧಿಸುತ್ತಿದ್ದರು. ಈಗ ಈ ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಹಾಗೆಯೇ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ವಾರ್ಡ್ ಕೂಡ ಬದಲಾಗಿದೆ. ಇವರು ಮನೋರಾಯನ ಪಾಳ್ಯ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದರು. ಆ ಕ್ಷೇತ್ರವನ್ನು ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಶಂಕರಮಠ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿದ್ದ ಆಡಳಿತ ಪಕ್ಷದ ಮಾಜಿ ನಾಯಕ ಶಿವರಾಜ್‌ಗೂ ಆತಂಕ ಶುರುವಾಗಿದ್ದು, ಇವರ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲು ಮಾಡಲಾಗಿದೆ.
ಬಿಜೆಪಿ ನಾಯಕರಿಗೂ ವಾರ್ಡ್ ವಿಗಂಡನೆಯಿಂದ ನಷ್ಟ!
ಮೀಸಲಾತಿ ನೋಡಿ ಬಿಜೆಪಿಯ ಮಾಜಿ ಬಿಬಿಎಂಪಿ ಸದಸ್ಯರು ಕೂಡ ಆತಂಕಗೊಂಡಿದ್ದಾರೆ. ತಮಗೆ ಅನುಕೂಲವಾಗಲಿ ಎಂದು ವಾರ್ಡ್ ವಿಗಂಡನೆಯಾಗಿದ್ದರೂ ಈಗ ಮೀಸಲಾತಿ ನೋಡಿ ಕಂಗಾಲಾಗಿದ್ದಾರೆ. ಅವರಿಗೆ ಸದ್ಯ ತಾವು ಗೆಲ್ಲುವ ಕೇತ್ರದಲ್ಲೇ ತಮಗೆ ಸೀಟ್ ಸಿಗದಂತಹ ಪರಿಸ್ಥಿತಿ ಉದ್ಭವಿಸಿದೆ. ಆರ್.ಆಶೋಕ್ ಆಪ್ತ ಪದ್ಮನಾಭರೆಡ್ಡಿ ಕಾಚರಕನಹಳ್ಳಿ ವಾರ್ಡ್‌ನಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಇದೀಗ ಮೀಸಲಾತಿಯಿಂದ ಕೈ ತಪ್ಪಿ ಜನರಲ್ ವಾರ್ಡ್ ಆಗಿದೆ. ಮಾಜಿ ಕಾರ್ಪೊರೇಟರ್ ಸತ್ಯನಾರಾಯಣಗ್ ವಾರ್ಡ್ ವಿಗಂಡನೆಯಿಂದ ನಷ್ಟವಾಗಿದೆ, ಇವರು ಬಸವನಗುಡಿ ವಾರ್ಡ್‌ನಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈಗ ಈ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
ಇನ್ನು ಮಾಜಿ ಮೇಯರ್ ಎಲ್. ಶ್ರೀನಿವಾಸ್ ಕುಮಾರಸ್ವಾಮಿ ಲೇಔಟ್ ವಾರ್ಡ್‌ನಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಆದರೆ ಇವರ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆ ಆಗಿದೆ.
ಎನ್.ಜಯಪಾಲ ಪರ ಕಾರ್ಯಕರ್ತರಿಂದ ಪ್ರತಿಭಟನೆ
ಎನ್.ಜಯಪಾಲ್ ಅವರಿಗೆ ಬೇರೆ ವಾರ್ಡ್‌ನಿಂದ ಟಿಕೆಟ್ ಕೊಡುವ ಬಗ್ಗೆ ಮಾಹಿತಿ ಸೋರಿಕೆಯಾದ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಾರ್ಡ್‌ನಲ್ಲೇ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿ ಮಲ್ಲೇಶ್ವರಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತಿಕೆರೆ ವಾರ್ಡ್‌ನಿಂದ ಜಯಪಾಲ್ ಅವರಿಗೆ ಟಿಕೆಟ್ ನೀಡುವುದಾಗಿ ಸ್ಥಳೀಯ ಶಾಸಕ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ ಎನ್ನಲಾಗಿದೆ.
ಮತ್ತಿಕೆರೆ ವಾರ್ಡ್ ಬಿಸಿಎಗೆ ಮೀಸಲಾತಿ ನೀಡಲಾಗಿದ್ದು, ಮಲ್ಲೇಶ್ವರಂ ವಾರ್ಡ್ ಜನರಲ್ ಮೀಸಲಾತಿ ನೀಡಲಾಗಿದೆ.
ಮತ್ತಿಕೆರೆ ವಾರ್ಡ್‌ನಿಂದ ಬೇರೆ ಯಾರಿಗಾದರೂ ಟಿಕೆಟ್ ನೀಡಿ ಆದರೆ ಜಯಪಾಲ್ ಅವರಿಗೆ ಮಲ್ಲೇಶ್ವರಂನಲ್ಲೇ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | ಕಾಂಗ್ರೆಸ್ ಪ್ರತಿಭಟನೆ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ: ಬಿಜೆಪಿ ಮುಖಂಡರ ಆರೋಪ