Site icon Vistara News

Channapatna By Election: ಚನ್ನಪಟ್ಟಣದಿಂದ ಡಿಕೆಶಿ ಸ್ಪರ್ಧಿಸಲ್ಲ: ಅಚ್ಚರಿ ಹೇಳಿಕೆ ಕೊಟ್ಟ ಜಿ.ಟಿ. ದೇವೇಗೌಡ

DK Shivakumar

ಮೈಸೂರು: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಚನ್ನಪಟ್ಟಣದ ಉಪ ಚುನಾವಣೆಯಲ್ಲಿ (Channapatna By Election) ಸ್ಪರ್ಧೆ ಮಾಡುವುದಿಲ್ಲ. ಅವರ ಮಾತಲ್ಲಿ ರಾಜಕೀಯ ತಂತ್ರಗಾರಿಕೆ ಇದೆ ಅಷ್ಟೇ. ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಡಿ.ಕೆ. ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸುವ ದೃಷ್ಟಿಯಿಂದ ನಾನು ಬಂದರೇ ಮತ ಹಾಕುತ್ತೀರಾ ಎಂದು ಜನರನ್ನು ಡಿಕೆಶಿ ಕೇಳುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಚನ್ನಪಟ್ಟಣ ಉಪಚುನಾವಣೆ ಅಖಾಡ ಎಲ್ಲಾ ಕ್ಷೇತ್ರಗಿಂತ ಜೋರಾಗಿರಲಿದೆ. ಜಿದ್ದಾಜಿದ್ದಿನ ಫೈಟ್ ನಡೆಯುತ್ತದೆ. ನಿಖಿಲ್ ನಾನೇ ಸ್ಪರ್ಧೆ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಸಿ.ಪಿ. ಯೋಗೇಶ್ವರ್ ಜನರು ನನ್ನ ಪರವಾಗಿದ್ದಾರೆ ಅಂತ ಅಷ್ಟೆ ಹೇಳಿದ್ದಾರೆ. ಅಂತಿಮವಾಗಿ ಮೈತ್ರಿ ನಾಯಕರು ಕುಳಿತು ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದ ತಿಳಿಸಿದ್ದಾರೆ.

ಎಲ್ಲಾ ಉಪಚುನಾವಣೆಗಳು ಸರ್ಕಾರದ ಪರವಾಗಿಯೇ ಇರುವುದಿಲ್ಲ. ಒಂದೊಂದು ಬಾರಿ ಒಂದೊಂದು ಟ್ರೆಂಡ್ ನಡೆಯುತ್ತದೆ. ನಮ್ಮ ಅಭ್ಯರ್ಥಿ ಯಾರು ಎಂಬುದನ್ನು ನಾವು ಇನ್ನೂ ತೀರ್ಮಾನ ಮಾಡಿಲ್ಲ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ನಾನೇ ಅದನ್ನು ಹೇಳುತ್ತೇನೆ. ಕೋರ್ ಕಮಿಟಿಯ ಅಧ್ಯಕ್ಷ ನಾನೇ ಆಗಿರುವ ಕಾರಣ ಅಭ್ಯರ್ಥಿ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯ ಹೇಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ವಿಚಾರ ಪ್ರತಿಕ್ರಿಯಿಸಿ, ಪೊಲೀಸರು ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ನಂಬಿಕೆ ಇದ್ದು, ಗೌರವ ಹೆಚ್ಚಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳೇ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿದ್ದಾರೆ. ಸ್ವತಃ ನಾನೇ ವೀಡಿಯೊ ನೋಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಇದರಿಂದ ಯಾರು ದರ್ಶನ್ ಪರ ಮಾತನಾಡಬಾರದು ಎಂದು ಸೂಚನೆ ನೀಡಿದ್ದಾರೆ. ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Channapatna By Election: ಚನ್ನಪಟ್ಟಣದಲ್ಲಿ ಡಿಕೆಶಿ ಎದುರು ಸೈನಿಕ; ಬಿಜೆಪಿಯಿಂದಲಾ, ಜೆಡಿಎಸ್‌ನಿಂದಲಾ?

ಚನ್ನಪಟ್ಟಣದಲ್ಲಿ ಡಿಕೆಶಿ ಎದುರು ಸೈನಿಕ; ಬಿಜೆಪಿಯಿಂದಲಾ, ಜೆಡಿಎಸ್‌ನಿಂದಲಾ?

ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರು ಕಣಕ್ಕಿಳಿಯುವ ಆಕಾಂಕ್ಷೆ ತೋರಿಸಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಉಪ ಚುನಾವಣೆ (Channapatna By Election) ಕಣ ತೀವ್ರ ಕುತೂಹಲ ಕೆರಳಿಸಿದೆ. ಇವರ ಎದುರು ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್‌ (CP Yogeshwar) ನಿಲ್ಲುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿಯಿಂದ (BJP) ನಿಲ್ತಾರಾ ಅಥವಾ ಜೆಡಿಎಸ್‌ನಿಂದಲಾ (JDS) ಎಂಬ ಕುತೂಹಲ ಮೂಡಿದೆ.

ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಅಥವಾ ಸಹೋದರ ಡಿಕೆ ಸುರೇಶ್ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬೊಂಬೆನಾಡಿನಲ್ಲಿ ಬೈ ಎಲೆಕ್ಷನ್ ಜಿದ್ದಾಜಿದ್ದಿನ ಕಾದಾಟದ ಕಣವಾಗುವುದು ಫಿಕ್ಸ್‌ ಆಗಿದೆ. ಈಗ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರೆಂಬ ತೀವ್ರ ಕುತೂಹಲ ಮೂಡಿದೆ.

ಚನ್ನಪಟ್ಟಣದಲ್ಲಿ ʼಸೈನಿಕʼ ಸಿಪಿ ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ.‌ ಸಿಪಿವೈ ಬಿಜೆಪಿ ಅಭ್ಯರ್ಥಿಯಾಗುವ ಬದಲು ಜೆಡಿಎಸ್ ಅಭ್ಯರ್ಥಿಯಾದರೆ ಹೇಗೆ ಅಂತಲೂ ಚರ್ಚೆ ಶುರುವಾಗಿದೆ. ಯಾಕೆಂದರೆ ಡಿಕೆಶಿ ಎಂಟ್ರಿಯಿಂದ ಕ್ಷೇತ್ರ ʼಕೈʼ ವಶ ಆಗದಂತೆ ತಡೆಯಲು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಈಗ ತಲೆ ಕೆಡಿಸಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿ ಗೆಲುವು ಸಾಧಿಸಬೇಕಾಗಿದ್ದರೆ, ಯೋಗೇಶ್ವರ್ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಗೆಲುವು ಸುಲಭ ಅನ್ನುವ ಲೆಕ್ಕಾಚಾರದಲ್ಲಿ ಹೆಚ್‌ಡಿಕೆ ಇದ್ದಾರೆ. ಇಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಂಪ್ರದಾಯಿಕ ಒಕ್ಕಲಿಗ ಮತಗಳು ಜೆಡಿಎಸ್‌ ಪರವಾಗಿವೆ.

ಜೊತೆಗೆ ಚನ್ನಪಟ್ಟಣದಲ್ಲಿ ಸಿಪಿವೈ ತಮ್ಮದೇ ಆದ ಸ್ವತಃ ಶಕ್ತಿಯನ್ನು ಹೊಂದಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಗೆ ಮತಗಳ ಬೇಸ್ ಇಲ್ಲ. ಇಲ್ಲಿರುವುದು ಯೋಗೇಶ್ವರ್ ಮತಗಳೇ ಆಗಿವೆ. ಕಳೆದ ನಾಲ್ಕು ಬಾರಿ ಬೇರೆ ಬೇರೆ ಚಿಹ್ನೆಗಳಿಂದ ನಿಂತಿದ್ದರೂ ಸಿಪಿವೈ ಗೆದ್ದು ಬಂದಿದ್ದಾರೆ. 1999ರಲ್ಲಿ ಪಕ್ಷೇತರನಾಗಿ, 2004, 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ, 2011ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 2013ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.

ಸ್ವಂತ ಶಕ್ತಿಯಿಂದ ಬಿಜೆಪಿ ಮತಗಳನ್ನು ಯೋಗೇಶ್ವರ್ ಪಡೆಯಬಹುದು. ಜೊತೆಗೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿದರೆ ಜೆಡಿಎಸ್ ಮತಗಳನ್ನೂ ಪಡೆಯಬಹುದು. ಜೆಡಿಎಸ್ ಚಿಹ್ನೆಯಿಂದ ಸಿಪಿವೈ ಸ್ಪರ್ಧಿಸಿದರೆ ನಮ್ಮ ಕಾರ್ಯಕರ್ತರು ಪಕ್ಷದ ಪರ ಕೆಲಸ ಮಾಡುತ್ತಾರೆ. ಯಾವುದೇ ಗೊಂದಲವಿಲ್ಲದೇ ಚುನಾವಣೆ ಗೆದ್ದು ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಬಹುದು. ಈ ಹಿನ್ನೆಲೆಯಲ್ಲಿ ಸಿಪಿವೈ ಜೆಡಿಎಸ್‌ನಿಂದ ಸ್ಪರ್ಧೆ ಮಾಡಬೇಕು ಎಂಬ ಚಿಂತನೆಯಲ್ಲಿ ಎಚ್‌ಡಿಕೆ ಇದ್ದಾರೆ.

ಇದನ್ನೂ ಓದಿ | BY Vijayendra: ʼರಣಹೇಡಿ ಕಾಂಗ್ರೆಸ್‌ ಸರ್ಕಾರ…ʼ ವಿಜಯೇಂದ್ರ ಆಕ್ರೋಶ, ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಆದರೆ ಇದಕ್ಕೆ ಸಿಪಿವೈ ಒಪ್ಪುತ್ತಾರಾ? ಬಿಜೆಪಿ ನಾಯಕರು ಏನ್ ಹೇಳ್ತಾರೆ? ಎಂಬ ಚಿಂತೆಯೂ ಇದೆ. ಚನ್ನಪಟ್ಟಣ ಕ್ಷೇತ್ರ ಇದುವರೆಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದೆ. ಯೋಗೇಶ್ವರ್‌ ಇಲ್ಲಿ ಭದ್ರ ಹಿಡಿತ ಸಾಧಿಸಿದ್ದಾರೆ. ಆದರೆ ಡಿಕೆಶಿ ಸ್ಪರ್ಧಿಸಿದರೆ ಇಲ್ಲಿ ಲೆಕ್ಕಾಚಾರ ತಲೆಕೆಳಗಾಗಬಹುದು ಎಂಬ ಆತಂಕವೂ ಇದೆ. 2008ರಲ್ಲಿ ಕಾಂಗ್ರೆಸ್‌ನಿಂದಲೇ ಯೋಗೇಶ್ವರ್ ಗೆದ್ದಿದ್ದು ಬಿಟ್ಟರೆ ಮತ್ತೆ ಕಾಂಗ್ರೆಸ್ ಅಲ್ಲಿ ಮತ್ತೆ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಡಿಸಿಎಂ ತಮ್ಮ ಶಕ್ತಿ ಹಾಗೂ ಹಣವನ್ನೆಲ್ಲ ಈ ಕ್ಷೇತ್ರದಲ್ಲಿ ತಂದು ಸುರಿಯುವ ಸಾಧ್ಯತೆ ಇರುವುದರಿಂದ ಬಿಜೆಪಿ- ಜೆಡಿಎಸ್‌ ಕೂಡ ತಲೆ ಕೆಡಿಸಿಕೊಳ್ಳಬೇಕಾಗಿದೆ.

Exit mobile version