Site icon Vistara News

ಜೆಡಿಎಸ್‌ ಸಮಾವೇಶದಲ್ಲಿ ಗದ್ದಲ; ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು

ಜೆಡಿಎಸ್‌

ಹಾಸನ: ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದ ಪ್ರಸಂಗ ನಡೆದಿದೆ.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಯಾರೂ ಕೂಡ ಶಿಳ್ಳೆ ಹೊಡೆಯೋ ಹಾಗಿಲ್ಲ, ಕೂಗಾಡೋ ಹಾಗಿಲ್ಲ, ಶಿಳ್ಳೆ ಹೊಡೆಯೋರು ಬೇಕಿದ್ದರೆ ಹೊರಗೆ ಹೋಗಿ ಎಂದು ರೇವಣ್ಣ ಗರಂ ಆಗಿದ್ದರಿಂದ, ಅವರ ವಿರುದ್ಧ ಸಿಟ್ಟಿಗೆದ್ದ ಸಾವಿರಾರು ಕಾರ್ಯಕರ್ತರು ಸಭೆ ಬಹಿಷ್ಕರಿಸಿ ಹೊರನಡೆದಿದ್ದಾರೆ.

ಸಮಾವೇಶದ ಆರಂಭದಲ್ಲಿ ಕೆಲ ಯುವಕರು ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್‌ಗೆ ಟಿಕೆಟ್‌ ಘೋಷಿಸಬೇಕು ಎಂದು ಕಿರುಚಿದಾಗ ಸಿಟ್ಟಾದ ರೇವಣ್ಣ, ಇದು ಯಾರಿಗೂ ಟಿಕೆಟ್‌ ಘೋಷಣೆ ಮಾಡುವ ಸಮಾವೇಶವಲ್ಲ. ಹಾಗಾಗಿ ಯಾರೂ ಕೂಗಾಡಬೇಡಿ ಎಂದು ಗದರಿದ್ದರಿಂದ ಕಾರ್ಯಕರ್ತರು ರೊಚ್ಚಿಗೆದ್ದು ಸ್ವರೂಪ್‌ ಪರ ಜೈಕಾರ ಕೂಗಿದದ್ದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಯಿತು.

ಇದನ್ನೂ ಓದಿ | Rain News | ORR ವ್ಯಾಪ್ತಿಯ ಐಟಿ ಕಂಪನಿ ಉದ್ಯೋಗಿಗಳಿಗೆ ಒಂದು ವಾರ ವರ್ಕ್‌ ಫ್ರಂ ಹೋಮ್‌

ರೇವಣ್ಣ ಆವಾಜ್‌ ಹಾಕುತ್ತಲೇ ಕಾರ್ಯಕರ್ತರಿಗೆ ಅಭಿಪ್ರಾಯ ಹೇಳಲು ಅವಕಾಶ ಕೊಡಬೇಕು ಎಂದು ನೂರಾರು ಮಂದಿ, ಸ್ವರೂಪ್‌ಗೆ ಟಿಕೆಟ್ ಘೋಷಣೆ ಮಾಡಿ ಎಂದು ಸ್ವರೂಪ್.. ಸ್ವರೂಪ್… ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಮುಖಂಡರು, ಶಾಂತವಾಗುವಂತೆ ಎಷ್ಟೇ ಮನವಿ ಮಾಡಿದರೂ ಬಗ್ಗದ ಸಾವಿರಾರು ಕಾರ್ಯಕರ್ತರು ಸಭೆ ನಡೆಯುತ್ತಿರುವಾಗಲೇ ಹೊರಹೋಗಿದ್ದಾರೆ.

ಫ್ಲೆಕ್ಸ್‌ ಹರಿದ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ
ರೇವಣ್ಣ ಹೇಳಿಕೆಯಿಂದ ಆಕ್ರೋಶಗೊಂಡು ಸಭೆಯಿಂದ‌ ಹೊರಹೋಗುವಾಗ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಪ್ರಸಾದ್ ಗೌಡ ಎಂಬಾತ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ರೇವಣ್ಣ, ಭವಾನಿ ರೇವಣ್ಣ ಫೋಟೋ ಇದ್ದ ಫ್ಲೆಕ್ಸ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು. ಇದರಿಂದ ಸಭಾಂಗಣದ ಹೊರಗೆ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ | Teachers day | ನಕ್ಸಲ್‌ ಪೀಡಿತ ಊರಿನಲ್ಲಿ ಶಿಕ್ಷಣದ ಹೂ ಅರಳಿಸಿದ ಶಿಕ್ಷಕ

Exit mobile version