Site icon Vistara News

Chemicals in Food: ಗೋಬಿ- ಕಬಾಬ್‌ ಆಯ್ತು‌, ಈಗ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಿ ವಿಷ ಪತ್ತೆ; ಸದ್ಯದಲ್ಲೇ ಬ್ಯಾನ್?

chemicals in food panipuri

ಬೆಂಗಳೂರು: ಮಳೆ ಬರುತ್ತಿದೆ, ಸ್ವಲ್ಪ ಚಳಿ ಇದೆ. ಸಂಜೆ ಬಿಸಿಬಿಸಿ ಪಾನಿಪುರಿ (Panipuri) ಸವಿಯೋಣ ಎಂದು ಸವಾರಿ ಹೊರಡುವವರಿಗೆ ಬೆಚ್ಚಿ ಬೀಳಿಸುವಂಥ ಸುದ್ದಿ ಇಲ್ಲಿದೆ. ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

“ನಾವು ರಾಜ್ಯಾದ್ಯಂತ ಸುಮಾರು 260 ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿದ್ದೆವು. ಸಂಗ್ರಹ ಮಾಡಿದ ಮಾದರಿಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದೆವು. ಪಾನಿಪುರಿ ಸಾಸ್ ಅಥವಾ ಪಾನಿಗಳನ್ನು ನಾವು ಟೆಸ್ಟ್ ಮಾಡಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಾದರಿಗಳು ಹೆಚ್ಚಾಗಿ ಅಪಾಯಕಾರಿ ಅಂತ ಕಂಡುಬಂದಿವೆ. ಜನರನ್ನು ಭಯಭೀತರಾಗಿ ಮಾಡುವ ಉದ್ದೇಶ ನಮಗಿಲ್ಲ. ಈ ರೀತಿಯ ಸ್ಟ್ರೀಟ್ ಫುಡ್‌ಗಳು ನಿಧಾನವಾಗಿ ದೇಹಕ್ಕೆ ಅಪಾಯ ತಂದೊಡ್ಡುತ್ತವೆ. ಕ್ಯಾನ್ಸರ್ ಸೇರಿ ಡೇಂಜರ್ ರೋಗಗಳನ್ನು ತರುತ್ತವೆ. ಹೀಗಾಗಿ ಜನರೂ ಸಹ ಈ ಬಗ್ಗೆ ಯೋಚನೆ ಮಾಡಿ ಹೊರಗಿನ ಆಹಾರ ಸೇವನೆ ಮಾಡಬೇಕು” ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ಗೋಬಿ ಬಳಿಕ ಕಬಾಬ್‌ಗೂ ಕೃತಕ ಬಣ್ಣ ನಿಷೇಧ

ಗೋಬಿ ಬಳಿಕ ಕಬಾಬ್‌ಗೂ ಕೃತಕ ಬಣ್ಣ (Artificial Colours Ban) ಬಳಕೆಗೂ ರಾಜ್ಯ ಸರ್ಕಾರ ನಿಷೇಧ ಹೇರಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌ (chicken, fish kebab) ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ.

ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಬಾಂಬೆ ಮಿಠಾಯಿಗೆ ಕಲರ್‌ ಹಾಕುವುದನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಕಬಾಬ್‌ ಸರದಿಯಾಗಿದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗೆ (artificial colours in Kebab) ಬೆರಸುವ ಕೃತಕ ಬಣ್ಣ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿತ್ತು.

ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ – 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ. ಹೀಗಾಗಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Exit mobile version