ಬೆಂಗಳೂರು: ಚೆನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. (Vande Bharat Express) ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ಇದರ ಪರಿಣಾಮ ರೈಲಿನ ಸಿ4 ಹಾಗೂ ಸ5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಮತ್ತು ಇತರರಿಗೆ ಯಾವುದೇ ಗಾಯವಾಗಿಲ್ಲ.
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು (ಸಂಖ್ಯೆ 20607) ಕೆ.ಆರ್.ಪುರಂ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಹೊರಟಿತ್ತು. ಆಗ ಕಲ್ಲು ತೂರಾಟ ನಡೆದಿದೆ. ಒಡೆದಿರುವ ಗಾಜಿನ ರಿಪೇರಿಗೆ ಗಣನೀಯ ಹಣ ವೆಚ್ಚವಾಗಲಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ನೈಋತ್ಯ ರೈಲ್ವೆ ಅಧಿಕಾರಿಗಳ ಗಸ್ತು ಪಡೆ ಸಂಚರಿಸಲಿದ್ದು, ಕಾವಲನ್ನು ಹೆಚ್ಚಿಸಲಿದೆ. ಈ ಹಿಂದೆಯೂ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಘಟನೆ ಸಂಬಂಧ ಆರ್ ಪಿ ಎಫ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕಂಟೋನ್ಮೆಂಟ್ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಭಾನುವಾರದಿಂದ ಗಸ್ತು ತಿರುಗಲಿದ್ದಾರೆ. ವಂದೇ ಭಾರತ್ ರೈಲು ಬರುವ ಸಮಯದಲ್ಲಿ ಪ್ಯಾಟ್ರೋಲಿಂಗ್ ನಡೆಯಲಿದೆ. ಬೆಳಗ್ಗೆ 8.30 ರಿಂದ ರೈಲು ಹೋಗುವವರೆಗೆ ಟ್ಯಾನರಿ ರಸ್ತೆ ಬ್ರಿಡ್ಜ್, ಕಲ್ಲಪಲ್ಲಿ ಸ್ಮಶಾನ, ಜೀವನಹಳ್ಳಿ ಸೇರಿ ಹಲವೆಡೆ ಕಡೆ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಯಲಿದೆ. ಕಲ್ಲು ತೂರಿದ ಕಿಡಿಗೇಡಿಗಳಿಗೆ ಪೊಲೀಸರ ಶೋಧ ನಡೆದಿದೆ. ಬೆಂಗಳೂರು ಸಿಟಿ, ಕೆಂಗೇರಿ, ಹೆಜ್ಜಾಲ, ಕಂಟೋನ್ಮೆಂಟ್ ನಿಂದ ಸಿಟಿ ಹೊರ ಭಾಗದಲ್ಲಿ ಕೂಡ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಯಲಿದೆ.