Site icon Vistara News

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌; ವಾರದಲ್ಲಿ 6 ದಿನ ಸಂಚರಿಸಲಿದೆ ರೈಲು

ವಂದೇ ಭಾರತ್

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸಕ್ಕೂ ಮುನ್ನವೇ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ನವೆಂಬರ್ 11 ರಿಂದ ಕಾರ್ಯಾರಂಭ ಮಾಡಲಿದ್ದು, ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಬುಧವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚರಿಸಲಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಬೃಹತ್ ಪ್ರತಿಮೆ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ, ವಂದೇ ಭಾರತ್ ರೈಲಿಗೂ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ರೈಲ್ವೆ ಇಲಾಖೆಯಿಂದ ಈಗಾಗಲೇ ಆದೇಶ ಹೊರಬಿದ್ದಿದ್ದು, ವಂದೇ ಭಾರತ್ ರೈಲಿನ ವೇಳಾಪಟ್ಟಿ ಕೂಡ ಬಿಡುಗಡೆ ಆಗಿದೆ. ಈ ವಿಚಾರವನ್ನು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಗಂಟೆಗೆ 77.53 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಬುಧವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚರಿಸಲಿದೆ.

504 ಕಿ.ಮೀ. ಅಂತರವನ್ನು ಕೇವಲ 6 ಗಂಟೆ 40 ನಿಮಿಷದಲ್ಲಿ ಕ್ರಮಿಸಲಿದೆ. ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು 10.25ಕ್ಕೆ ಬೆಂಗಳೂರಿಗೆ ತಲುಪಲಿದೆ. 10.30ಕ್ಕೆ ಬೆಂಗಳೂರಿನಿಂದ ಹೊರಟು 12.30ಕ್ಕೆ ಮೈಸೂರಿಗೆ ಆಗಮಿಸಲಿದೆ. ಮತ್ತೆ ಮಧ್ಯಾಹ್ನ 1.05ಕ್ಕೆ ಮೈಸೂರಿನಿಂದ ಹೊರಟು 2.55ಕ್ಕೆ ಬೆಂಗಳೂರು ತಲುಪಲಿದೆ. 3ಕ್ಕೆ ಬೆಂಗಳೂರಿನಿಂದ ಹೊರಟು 7.30ಕ್ಕೆ ಚೆನ್ನೈ ತಲುಪಲಿದೆ. ಹೀಗಾಗಿ ಸಾವಿರಾರು ಪ್ರಯಾಣಿಕರಿಗೆ ಇದು ವರದಾನವಾಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಇದರೊಂದಿಗೆ ಈಗಾಗಲೇ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್‌ ಸೇವೆಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ.

ಇದನ್ನೂ ಓದಿ | Invest Karnataka-2022 | ಹೂಡಿಕೆಗೆ ನಮ್ಮಲ್ಲೀಗ ಕೆಂಪು ಹಾಸು ಮಾತ್ರ, ಕೆಂಪು ಪಟ್ಟಿ ಇಲ್ಲ ಎಂದ ಪ್ರಧಾನಿ ಮೋದಿ

Exit mobile version