ಚಿತ್ರದುರ್ಗ: ಎದೆನೋವು ಕಾಣಿಸಿಕೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ತೆರಳಿದ್ದ ಶಿವಮೂರ್ತಿ ಮುರುಘಾ ಶರಣರನ್ನು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶ್ರೀಗಳಿಗೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶ್ರೀಗಳಿಗೆ ಹೃದಯ ಸಂಬಂಧಿ ಸಮಸ್ಯೆ ಇದ್ದು, ಬಿಪಿ ಮತ್ತು ಸ್ಯಾಚುರೇಷನ್ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ವೈದ್ಯರ ತಂಡ ಮೇಲಿಂದ ಮೇಲೆ ಇಸಿಜಿ ಮತ್ತು ಎಕೋ ಪರೀಕ್ಷೆ ನಡೆಸುತ್ತಿದೆ. ಜಿಲ್ಲಾಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಆರೈಕೆಗಾಗಿ ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಮುರುಘಾ ಶರಣರನ್ನು ಬೆಂಗಳೂರಿಗೆ ಕರೆದೊಯ್ಯಲು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಜಿಲ್ಲಾಸ್ಪತ್ರೆ ಆವರಣಕ್ಕೆ ಆಗಮಿಸಿದೆ. ಮುರುಘಾ ಮಠಕ್ಕೇ ಸೇರಿರುವ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಇದಾಗಿದ್ದು, ಇಲ್ಲಿಂದ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಗೆ ದಾಖಲು ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಆದರೆ ಚಿತ್ರದುರ್ಗ ಕೇಂದ್ರ ಕಾರಾಗೃಹದ ಜೈಲುವಾಸವನ್ನು ಶ್ರೀಗಳು ತಪ್ಪಿಸಿಕೊಳ್ಳಲಿದ್ದಾರೆ. ಆಗ ಪೊಲೀಸ್ ಕಸ್ಟಡಿಗೆ ಪಡೆಯಲು ಉದ್ದೇಶಿಸಿರುವ ಪೊಲೀಸರ ಯೋಜನೆ ಕೂಡ ತಲೆಕೆಳಗಾಗಲಿದೆ.
ಗುರುವಾರ ತಡರಾತ್ರಿ ಶ್ರೀಗಳ ಬಂಧನವಾಗಿತ್ತು. ಅದಕ್ಕೂ ಮುನ್ನ ವೈದ್ಯಕೀಯ ತಪಾಸಣೆ ನಡೆದಿತ್ತು. ಎದೆನೋವು ಕಾಣಿಸಿಕೊಂಡರೆ ಆಸ್ಪತ್ರೆಗೆ ಸೇರಿಸಲು ವೈದ್ಯಾಧಿಕಾರಿಗಳು ಸೂಚಿಸಿದ್ದರು. ತಡರಾತ್ರಿ ನ್ಯಾಯಾಧೀಶರ ಮುಂದೆ ಶ್ರೀಗಳನ್ನು ಹಾಜರುಪಡಿಸಿದಾಗ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕೇಂದ್ರ ಕಾರಾಗೃಹಕ್ಕೆ ತೆರಳಿದ್ದ ಶ್ರೀಗಳಿಗೆ ಕೈದಿ ನಂ 2261 ನೀಡಲಾಗಿತ್ತು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳಿಗೆ ಎದೆನೋವು, ಜೈಲಿನಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್