Site icon Vistara News

Chetan Ahimsa : ಗಡಿಪಾರು ಭೀತಿಯಲ್ಲಿರುವ ನಟ ಚೇತನ್‌ಗೆ ಜೂನ್‌ 2ರವರೆಗೆ ಕೋರ್ಟ್‌ ರಕ್ಷಣೆ, ಹೆಚ್ಚು ಮಾತಾಡುವಂತಿಲ್ಲ!

Chetan Ahimsa

ಬೆಂಗಳೂರು: ಹಿಂದು ಭಾವನೆಗಳಿಗೆ ವಿರುದ್ಧವಾಗಿ ಮಾತನಾಡುತ್ತಾರೆ ಎಂಬ ಆರೋಪ ಹೊತ್ತಿರುವ, ಸರ್ಕಾರವನ್ನು ಆಗಾಗ ಪ್ರಶ್ನಿಸುವ ನಟ ಚೇತನ್‌ ಅಹಿಂಸಾ (Chetan Ahimsa) ಅವರನ್ನು ರಾಜ್ಯ ಹೈಕೋರ್ಟ್‌ ಗಡಿಪಾರು ಭೀತಿಯಿಂದ ತಾತ್ಕಾಲಿಕವಾಗಿ ರಕ್ಷಣೆ ಮಾಡಿದೆ. ಕೇಂದ್ರ ಗೃಹ ಇಲಾಖೆ ಸಾಗರೋತ್ತರ ಭಾರತೀಯ ಪ್ರಜೆ (ಓಸಿಐ) ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಭಾರತದಿಂದ ಗಡೀಪಾರಾಗುವ ಭೀತಿಯಲ್ಲಿದ್ದ ನಟ ಚೇತನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಷರತ್ತುಬದ್ಧ ಪರಿಹಾರ ನೀಡಿದೆ.

“ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭಗಳನ್ನು ಗಮನಿಸಿ ಮುಂದಿನ ವಿಚಾರಣೆ ನಡೆಯುವ ಜೂನ್‌ 2ರವರೆಗೆ ಒಸಿಐ ಕಾರ್ಡ್‌ಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವುದು ಸೂಕ್ತ” ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಹೇಳಿದೆ. ಇದೇ ವೇಳೆ ನ್ಯಾಯಾಂಗ ವಿಚಾರದಲ್ಲಿ ಅನಗತ್ಯ ಟ್ವೀಟ್‌ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆ ನೀಡುವಂತಿಲ್ಲ ಎಂದು ನಟ ಚೇತನ್‌ ಅವರಿಗೆ ಷರತ್ತು ವಿಧಿಸಲಾಗಿದೆ.

ಏನಿದು ನಟ ಚೇತನ್‌ ಅಹಿಂಸಾ ವಿವಾದ?

ಕೇಂದ್ರ ಸರ್ಕಾರ 2018ರಲ್ಲಿ ನಟ ಚೇತನ್‌ ಅವರಿಗೆ ಸಾಗರೋತ್ತರ ಭಾರತೀಯ ಪ್ರಜೆ ಕಾರ್ಡ್‌ ನೀಡಿತ್ತು. ಸಮುದಾಯಗಳ ವಿರುದ್ಧ ದ್ವೇಷ, ಸಾಮರಸ್ಯ ಕದಡುವಿಕೆ, ಕೋವಿಡ್‌ ನಿಯಾಮವಳಿಗಳ ಉಲ್ಲಂಘನೆ, ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ವಲಸೆ ಬ್ಯೂರೋ, ನಟ ಚೇತನ್‌ ಅವರಿಗೆ ಈ ಹಿಂದೆ ಶೋಕಾಸ್‌ ನೋಟಿಸ್‌ ನೀಡಿತ್ತು. 1955ರ ಪೌರತ್ವ ಕಾಯಿದೆಯ ಸೆಕ್ಷನ್ 7 ಡಿ(ಬಿ) ಮತ್ತು 7ಡಿ (ಇ) ಅಡಿ ಕಾರ್ಡ್ ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿತ್ತು. ನೋಟಿಸ್‌ಗೆ ನಟ ಚೇತನ್‌ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕಾರ್ಡ್‌ ಅನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು.

ಇದನ್ನು ಪ್ರಶ್ನಿಸಿ ನಟ ಚೇತನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಪರ ವಾದ ಮಂಡಿಸಿದ ಹಿರಿಯ ವಕೀಲರು ಅರ್ಜಿದಾರರಿಗೆ ಶೋಕಾಸ್‌ ನೋಟಿಸ್‌ ನೀಡಿರುವುದರ ಹೊರತಾಗಿ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಿತ್ತು. ಅವರ ವಾದ ಆಲಿಸದೆ ಕಾರ್ಡ್‌ ರದ್ದುಪಡಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ಕೃತ್ಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಹಾನಿಕರ ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಪ್ರತಿವಾದಿಗಳು ಆಕ್ಷೇಪಣಾ ಹೇಳಿಕೆಗಳನ್ನು ದಾಖಲಿಸುವ ಮೂಲಕ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಕಾರ್ಡ್‌ ರದ್ದುಪಡಿಸಿದ ಆದೇಶಕ್ಕೆ ನ್ಯಾಯಾಲಯ ತಡೆ ನೀಡದಿದ್ದರೆ ಅರ್ಜಿದಾರರು ಗಡೀಪಾರಾಗುವ ಸಾಧ್ಯತೆ ಇದೆ. ಒಸಿಐ ಕಾರ್ಡ್‌ ರದ್ದುಗೊಳ್ಳುವುದರಿಂದ ಅವರು ದೇಶದಲ್ಲಿ ಅಕ್ರಮ ವಲಸಿಗರಾಗುತ್ತಾರೆ. ಆದ್ದರಿಂದ ಮುಂದಿನ ವಿಚಾರಣಾ ದಿನದವರೆಗೆ ರಕ್ಷಣೆ ನೀಡಬೇಕೆಂದು ಕೋರಿದ್ದರು.

ಸರ್ಕಾರದ ಪರ ವಕೀಲರು ಹೇಳಿದ್ದೇನು?

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಭಾರತದ ಉಪ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌ ಮತ್ತು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರುಣ್‌ ಶ್ಯಾಂ ಅವರು  ಒಸಿಐ ಕಾರ್ಡ್‌ ಕುರಿತು ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳನ್ನು ನಿರ್ಬಂಧಿಸುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನ್ಯಾಯಾಂಗದ ವಿರುದ್ಧವೂ ನಟನಿಗೆ ಟ್ವೀಟ್‌ ಮಾಡುವ ಅಭ್ಯಾಸ ಇರುವುದರಿಂದ ಯಾವುದೇ ಮಧ್ಯಂತರ ರಕ್ಷಣೆ ನೀಡಬಾರದು ಎಂದಿತ್ತು.

ಈ ಹಿನ್ನೆಲೆಯಲ್ಲಿ ಪೀಠ, ʼನ್ಯಾಯಾಂಗದ ವಿರುದ್ಧ ಮತ್ತು ವಿಚಾರಣೆ ಬಾಕಿ ಇರುವಂತಹ ಪ್ರಕರಣಗಳ ಬಗ್ಗೆ ಟ್ವೀಟ್‌ಗಳನ್ನು ನಟ ಮಾಡುವಂತಿಲ್ಲ ಮತ್ತು ಮಾಡಿರುವ ಟ್ವೀಟ್‌ಗಳನ್ನು ಅಳಿಸಿ ಹಾಕಿ ಈ ಬಗೆಗಿನ ಅಫಡವಿಟ್‌ ಅನ್ನು ಈ ಆದೇಶದ ಪ್ರಮಾಣೀಕೃತ ಪ್ರತಿಯ ಸ್ವೀಕೃತಿಯೊಂದಿಗೆ ಮುಂದಿನ ನಾಲ್ಕು ದಿನದೊಳಗೆ ಸಲ್ಲಿಸಬೇಕುʼ ಎಂದು ಸೂಚಿಸಿತು. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿದರೆ ಮಧ್ಯಂತರ ಪರಿಹಾರ ರಕ್ಷಣೆ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದು ನ್ಯಾಯಾಲಯ ಹೇಳಿತು.

ಇದನ್ನೂ ಓದಿ: Chetan Ahimsa: ಹಿಂದುತ್ವ ವಿರೋಧಿ ಹೇಳಿಕೆಯಿಂದಲೇ ವಿವಾದ ಸೃಷ್ಟಿಸುವ ಚೇತನ್​ ಅಹಿಂಸಾಗೆ ಸಂಕಷ್ಟ; ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ

Exit mobile version